ಬೆಂಗಳೂರು: ರಾಜ್ಯದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ ಪ್ರವೇಶ ಪರೀಕ್ಷೆ (Common Entrance test) ಫಲಿತಾಂಶ ಪ್ರಕಟವಾಗಿದ್ದು, ಅದರ ಬೆನ್ನಿಗೇ ಸರ್ಕಾರ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇದರ ಪ್ರಕಾರ ಎಂಜಿನಿಯರಿಂಗ್ ಕಾಲೇಜುಗಳ (Engineering College) ಪ್ರವೇಶ ಶುಲ್ಕ ಶೇಕಡಾ 10ರಷ್ಟು ಹೆಚ್ಚಾಗಲಿದೆ.
ಪ್ರವೇಶ ಪರೀಕ್ಷೆ ಪರೀಕ್ಷೆ ಫಲಿತಾಂಶ ಪ್ರಕಟಣೆಗಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಎಂಜಿನಿಯರಿಂಗ್ ಪ್ರವೇಶ, ಲಭ್ಯವಿರುವ ಸೀಟುಗಳ ಮಾಹಿತಿ ನೀಡುತ್ತಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination authority) ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಈ ವಿಚಾರ ತಿಳಿಸಿದರು.
ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕವನ್ನು ಈ ಬಾರಿ ಶೇ. 10ರಷ್ಟು ಹೆಚ್ಚಿಸಲಾಗುತ್ತದೆ. ಹಿಂದಿನ ಸರ್ಕಾರದ ಕಾಲದಲ್ಲೇ ಫೀಸ್ ನಿರ್ಧಾರ ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಕಾಲೇಜುಗಳ ಜತೆಯೂ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ ಅವರು.
ಕಳೆದ ಬಾರಿ ಇಂಜಿನಿಯರಿಂಗ್‌ನಲ್ಲಿ 1,66000 ಸೀಟ್‌ಗಳು ಲಭ್ಯವಿದ್ದವು. ಈ ಬಾರಿ 2 ಲಕ್ಷಕ್ಕೂ ಹೆಚ್ಚು ಸೀಟ್‌ಗಳು ಲಭ್ಯವಿದೆ ಎಂದು ಅವರು ತಿಳಿಸಿದರು.
ಪ್ರವೇಶ ಶುಲ್ಕ ಶೇಕಡಾ 10 ಹೆಚ್ಚಳ, ಅಂದ್ರೆ ಎಷ್ಟಾಗುತ್ತದೆ?
ಎಂಜಿನಿಯರಿಂಗ್ ಪ್ರವೇಶ ಶುಲ್ಕವನ್ನು ಶೇ. 10ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಾಗಿದ್ದರೆ ಕಳೆದ ವರ್ಷ ಎಷ್ಟಿತ್ತು ಎಂಬ ಮಾಹಿತಿಯನ್ನು ತಿಳಿಯೋಣ. ಇದರ ಶೇಕಡಾ 10ರಷ್ಟು ಹೆಚ್ಚಳವನ್ನು ಲೆಕ್ಕ ಹಾಕಬಹುದು.
ವಿಭಾಗವಾರು ಕಾಲೇಜು-ಬೋಧನಾ ಶುಲ್ಕ-ಪ್ರವೇಶ ಶುಲ್ಕ-ವಿವಿ ಶುಲ್ಕ- ಇತರ ಶುಲ್ಕ- ಕೆಇಎ ಶುಲ್ಕ- ಒಟ್ಟು ಶುಲ್ಕ
1. ಸರಕಾರಿ ಕಾಲೇಜುಗಳು-16,500 ರೂ.- 590 ರೂಪಾಯಿ-10,610 ರೂ.-10000 ರೂ.-500 ರೂ.- 38,200 ರೂ.
2. ಅನುದಾನಿತ ಕಾಲೇಜು-16,500 ರೂ.- 590 ರೂಪಾಯಿ-10,610 ರೂ.-10000 ರೂ.-500 ರೂ.- 38,200 ರೂ.
3. ಅನುದಾನರಹಿತ ಕಾಲೇಜು-60,686 ರೂ.-00000 -10,610 ರೂ.-20000 ರೂ.-500 ರೂ.- 91,796 ರೂ.
(ಅನುದಾನರಹಿತ ಕಾಲೇಜುಗಳ ಅಡಿ ಟೈಪ್ 1 ಅಲ್ಪಸಂಖ್ಯಾತ ಕಾಲೇಜುಗಳು ಬರುತ್ತವೆ. ಮೇಲಿನ ಶುಲ್ಕಗಳು ಅನುದಾನಿತ ಕಾಲೇಜುಗಳಲ್ಲಿರುವ ಅನುದಾನರಹಿತ ಕೋರ್ಸ್‌ಗಳಿಗೆ ಅನ್ವಯ)
4. ಅನುದಾನರಹಿತ ಕಾಲೇಜು-67,874 ರೂ.-00000 -10,610 ರೂ.-20000 ರೂ.-500 ರೂ.- 98,984 ರೂ.
(ಇದರಲ್ಲಿ ಅನುದಾನರಹಿತ ಕಾಲೇಜುಗಳ ಅಡಿ ಟೈಪ್ 2 ಅಲ್ಪಸಂಖ್ಯಾತ ಕಾಲೇಜುಗಳು ಬರುತ್ತವೆ. ಮೇಲಿನ ಶುಲ್ಕಗಳು ಅನುದಾನಿತ ಕಾಲೇಜುಗಳಲ್ಲಿರುವ ಅನುದಾನರಹಿತ ಕೋರ್ಸ್‌ಗಳಿಗೆ ಅನ್ವಯ)
5. ಡೀಮ್ಡ್/ಖಾಸಗಿ ವಿವಿ-60,686 ರೂ.-00000 -10,610 ರೂ.-20000 ರೂ.-500 ರೂ.- 91,796 ರೂ.
ಈ ಮೊತ್ತಕ್ಕೆ ಶೇಕಡಾ ಹತ್ತನ್ನು ಕೂಡಿದರೆ 2023-24ನೇ ಸಾಲಿನ ಶುಲ್ಕ ಬರಲಿದೆ.
ಅಂದರೆ
1. ಸರ್ಕಾರಿ ಕಾಲೇಜುಗಳಲ್ಲಿ- 42,020 ರೂ.
2. ಅನುದಾನಿತ ಕಾಲೇಜು- 42,020 ರೂ.
3. ಅನುದಾನರಹಿತ ಟೈಪ್ 1- 1,00,976 ರೂ.
4. ಅನುದಾನರಹಿತ ಟೈಪ್ 2- 1,08,882 ರೂ.
5. ಖಾಸಗಿ ಮತ್ತು ಡೀಮ್ಡ್- 1,00,976 ರೂ.
ಎಂಜಿನಿಯರಿಂಗ್ ಟಾಪರ್‌ಗಳಿಗೆ ಸ್ಕಾಲರ್‌ಷಿಪ್
ಎಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆದ ಸಿಇಟಿಯಲ್ಲಿ ಟಾಪ್ 10 ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸ್ಕಾಲರ್‌ಷಿಪ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ರಮ್ಯಾ ಅವರು ತಿಳಿಸಿದರು.
ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ಅಕ್ರಮ
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ಅಕ್ರಮಗ್ಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖಾಧಿಕಾರಿಗಳು ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖಾ ಪೂರ್ಣಗೊಂಡಿದ್ದು ವರದಿ ಕೈ ಸೇರಿಲ್ಲ ಎಂದು ಸಚಿವ ಡಾ. ಎಂ.ಸಿ ಸುಧಾಕರ್ ಹೇಳಿದರು.
ಇದನ್ನೂ ಓದಿ: KCET 2023 Result : ಬೆಂಗಳೂರಿನ ವಿಘ್ನೇಶ್ ನಟರಾಜ್ ಕುಮಾರ್‌ಗೆ ಮೊದಲ ರ‍್ಯಾಂಕ್