ಬೆಂಗಳೂರು: ರಾಜ್ಯದಲ್ಲಿರುವ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳೂ ಸೇರಿದಂತೆ ಒಟ್ಟು 30 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ʻರೀತಿ’ (RETE) ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಎಲ್ಲ ಜಿಲ್ಲೆಗಳಲ್ಲೂ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣ ನೀಡಲು ಅನುಕೂಲ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ನೇತೃತ್ವದ ಉನ್ನತಮಟ್ಟದ ಸಮಿತಿಯು ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸಿತು. ಸರ್ಕಾರದ ಪರವಾಗಿ ವರದಿ ಸ್ವೀಕರಿಸಿದ ಸಚಿವ ಅಶ್ವತ್ಥನಾರಾಯಣ ಅವರು ಬಳಿಕ ಮಾತನಾಡಿ, ತಲಾ ಒಂದರಂತೆ ಒಟ್ಟು 30 ಕಾಲೇಜುಗಳನ್ನು ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ (RETE) ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಪರಿಪೋಷಣೆ (ಇನ್ಕ್ಯುಬೇಷನ್), ಆ್ಯಕ್ಸಲೇಟರ್ ಮತ್ತು ಸೂಪರ್-30 ಎನ್ನುವ ಮೂರು ವಿಭಾಗಗಳ ಅಡಿ ಪರಿಗಣಿಸಲಾಗಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಎಂಜಿನಿಯರಿಂಗ್ ಸಂಸ್ಥೆಗಳನ್ನು ಆರಿಸಿಕೊಳ್ಳಲಾಗಿದೆ ಎಂದರು.
ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲು ಕಳೆದ ವರ್ಷದ ನವೆಂಬರ್‌ನಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ಜತೆಗೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಸೂಕ್ತ ಖಾಸಗಿ/ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲು ಸರ್ಕಾರದ ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥರಾದ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿತ್ತು ಎಂದು ಸಚಿವರು ಹೇಳಿದರು.
ಇದನ್ನೂ ಓದಿ | Government collage | ಸರ್ಕಾರಿ ಕಾಲೇಜಲ್ಲಿ 1,500 ವಿದ್ಯಾರ್ಥಿಗಳಿರಲಿ: ಅಶ್ವತ್ಥನಾರಾಯಣ
ಕಾಲೇಜು ಆಡಳಿತ ಮಂಡಲಿ, ಉದ್ಯಮರಂಗ ಮತ್ತು ವಿಟಿಯು ಮೂರೂ ಸೇರಿಕೊಂಡು ರೀತಿ (RETE) ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಿದ್ದು, ತಲಾ ಶೇ.33ರಷ್ಟು ವೆಚ್ಚ ಭರಿಸಲಿವೆ. ಇದು ಐತಿಹಾಸಿಕ ಕ್ರಮವಾಗಿದ್ದು, ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸೂಕ್ತ ಅವಕಾಶ ಒದಗಿಸಿದೆ. 2 ಮತ್ತು 3ನೇ ಸ್ತರದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಔದ್ಯಮಿಕ ಅರಿವು ಮತ್ತು ಸಂಶೋಧನೆ ಆಧರಿತ ತಾಂತ್ರಿಕ ಶಿಕ್ಷಣ ನೀಡುವುದು ಇದರ ಹೆಗ್ಗುರಿಯಾಗಿದೆ.
ರೀತಿಗೆ (RETE) ಷರತ್ತುಗಳು ಹೀಗಿವೆ
-ಕಾಲೇಜುಗಳು ಅಪೇಕ್ಷಿತ ಮಟ್ಟವನ್ನು ಮುಟ್ಟಲು ವಿಫಲವಾದಲ್ಲಿ ಮಧ್ಯದಲ್ಲೇ ಸೂಪರ್-30’ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗುವುದು.
-ಮೂರು ವರ್ಷದಲ್ಲಿ NIRF ranking ಪಡೆಯಬೇಕು. ಐದು ವರ್ಷದೊಳಗೆ ವಿಶ್ವಮಟ್ಟದ ಸಂಸ್ಥೆಗಳಿಂದ ಮಾನ್ಯತೆ ಪಡೆಯಬೇಕು.
– ಯೋಜನೆಯ ಅವಧಿಯಾದ 5 ವರ್ಷಗಳ ಕೊನೆಯ ವೇಳೆಗೆ ಈ ಕಾಲೇಜುಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಪೈಕಿ ಶೇ.80ರಷ್ಟಕ್ಕಾದರೂ ಎನ್.ಬಿ.ಎ ಮಾನ್ಯತೆ ಹೊಂದಿರಬೇಕು.
-ಅಂತಿಮ ವರ್ಷದ ಬಿ.ಇ.ಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಪದವಿ ಪಡೆಯುವ ಹೊತ್ತಿಗೆ ಶೇ.50ರಷ್ಟು ವಿದ್ಯಾರ್ಥಿಗಳಾದರೂ ಉದ್ಯೋಗಾವಕಾಶ ಗಿಟ್ಟಿಸಿಕೊಂಡಿರಬೇಕು.
-ಆಯಾ ಕಾಲೇಜುಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಪ್ರತೀವರ್ಷವೂ ಗುಣಮಟ್ಟದ ಇಂರ್ಟನ್‌ಶಿಪ್ ಅನ್ನು ಕಡ್ಡಾಯವಾಗಿ ಮಾಡಬೇಕು. 5 ವರ್ಷದಲ್ಲಿ ಶೇ.100ರಷ್ಟು ಪ್ಲೇಸ್‌ಮೆಂಟ್ ಸಿಗಬೇಕು.
– ಅಗತ್ಯವೆನಿಸಿದರೆ ವಿಟಿಯು ಕಡೆಯಿಂದ ಶಾಶ್ವತ ಮಾನ್ಯತೆ ಪಡೆದುಕೊಳ್ಳಬೇಕು.
– ಜಿಲ್ಲೆ ಅಭಿವೃದ್ಧಿಗೆ ಸಂಬಂದಿಸಿದಂತೆ ಕನಿಷ್ಠ 10 ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಬೇಕು.
-25 ಉದ್ಯಮಿಗಳನ್ನು ಸೃಷ್ಟಿಸಬೇಕು.
ಆಯ್ಕೆಯಾಗಿರುವ ಸರ್ಕಾರಿ ಕಾಲೇಜುಗಳು
ಚಾಮರಾಜನಗರ, ಚಳ್ಳಕೆರೆ, ಹಾಸನ, ಹಾವೇರಿ, ಕುಶಾಲನಗರ, ತಲಕಾಡು, ಕೃಷ್ಣರಾಜಪೇಟೆ, ರಾಯಚೂರು, ರಾಮನಗರ, ಕಾರವಾರ, ಹೂವಿನಹಡಗಲಿಗಳಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ., ದಾವಣಗೆರೆಯಲ್ಲಿರುವ ಯೂನಿವರ್ಸಿಟಿ ಬಿಡಿಟಿ ಕಾಲೇಜು ಮತ್ತು ಕಲಬುರಗಿಯಲ್ಲಿರುವ ವಿಟಿಯು ಪಿಜಿ ಸೆಂಟರ್.
ಆಯ್ಕೆಯಾಗಿರುವ ಖಾಸಗಿ ಕಾಲೇಜುಗಳು
1) ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಬೆಳಗಾವಿ 2) ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜು, ಗುಬ್ಬಿ (ತುಮಕೂರು ಜಿಲ್ಲೆ) 3) ಶ್ರೀಮಧ್ವ ವಾದಿರಾಜ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜು, ಉಡುಪಿ 4) ಜಿಎಸ್ಎಸ್ಎಸ್ ಮಹಿಳಾ ಎಂಜಿನಿಯರಿಂಗ್ & ಟೆಕ್ನಾಲಜಿ ಸಂಸ್ಥೆ, ಮೈಸೂರು 5) ಡಾ.ಟಿ ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಕೆಜಿಎಫ್ (ಕೋಲಾರ ಜಿಲ್ಲೆ) 6) ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್ಸ್ಟಿಟ್ಯೂಟ್, ಮುಧೋಳ (ಬಾಗಲಕೋಟೆ ಜಿಲ್ಲೆ) 7) ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ, ವಿಜಯಪುರ 8) ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಚಿಕ್ಕಮಗಳೂರು 9) ಎಸ್.ಜೆ.ಸಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ 10) ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ 11) ಪಿಇಎಸ್ ತಾಂತ್ರಿಕ & ಮ್ಯಾನೇಜ್ಮೆಂಟ್ ಸಂಸ್ಥೆ, ಶಿವಮೊಗ್ಗ 12) ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು, ಭಾಲ್ಕಿ (ಬೀದರ್ ಜಿಲ್ಲೆ) 13) ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ಗದಗ 14) ವಿವೇಕಾನಂದ ಎಂಜಿನಿಯರಿಂಗ್ & ತಾಂತ್ರಿಕ ಕಾಲೇಜು, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ) 15) ಜೈನ್ ಎಂಜಿನಿಯರಿಂಗ್ ಕಾಲೇಜು, ಹುಬ್ಬಳ್ಳಿ 16) ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು, ಶೋರಾಪುರ (ಯಾದಗಿರಿ ಜಿಲ್ಲೆ) |
ಇದನ್ನೂ ಓದಿ | ಎಂಜಿನಿಯರಿಂಗ್ ಡ್ರಾಪೌಟ್ ಕಟ್ಟಿದ PhysicsWallah ಭಾರತದ 101ನೇ ಯೂನಿಕಾರ್ನ್