ಬೆಂಗಳೂರು: ಮುಂದಿನ ತಿಂಗಳುಗಳಲ್ಲಿ ಬರಗಾಲ ತೀವ್ರವಾಗುವ ಸಾಧ್ಯತೆ ಇದೆ. ಆಗ ಬರಗಾಲದ ಸಮಸ್ಯೆ ಜನರಿಗೆ ತಟ್ಟದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ಉದ್ಯೋಗ, ಮೇವು ಲಭ್ಯತೆ ಖಾತರಿಪಡಿಸಿ. ಒಂದು ವಾರದೊಳಗೆ ಇನ್‌ಪುಟ್ ಸಬ್ಸಿಡಿ ಪಾವತಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಅವಲೋಕಿಸಲು ವಿಧಾನಸೌಧದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರುವರಿ 8 ರಂದು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇಲಾಖಾವಾರು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಆಯಾ ಇಲಾಖೆಯ ಕಾರ್ಯದರ್ಶಿಗಳು ಮುಂಚಿತವಾಗಿಯೇ ಆಗಮಿಸಿ, ಅರ್ಜಿಗಳ ಪರಿಶೀಲನೆ ನಡೆಸಿ, ಪರಿಹಾರ ಕ್ರಮಗಳ ಕುರಿತು ಚರ್ಚಿಸಿ ಸಿದ್ಧತೆ ನಡೆಸಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಆಯಾ ಇಲಾಖೆಯ ಮಳಿಗೆಗೆ ಭೇಟಿ ನೀಡಿದಾಗ ಈ ಅರ್ಜಿಗಳನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು, ಕ್ರಮ ವಹಿಸಬೇಕು. ಅಧಿವೇಶನದಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರ ಒದಗಿಸಲೇ ಬೇಕು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸಮಯ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಉತ್ತರ ನೀಡದಿರುವುದು, ಸಮಯ ತೆಗೆದುಕೊಳ್ಳುವುದು ಮಾಡಬಾರದು. ಅಧಿವೇಶನದ ಸಂದರ್ಭದಲ್ಲಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದರು.
ಇದನ್ನೂ ಓದಿ | ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ವಾಪಸ್; ರಾಜ್ಯಪಾಲರು ಮರುಪರಿಶೀಲಿಸಲಿ ಎಂದ ಡಿಕೆಶಿ
ಪ್ರತಿ ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ಸವಿವರವಾಗಿ ಮಾಡಬೇಕು. ಅದರಿಂದ ಜಿಲ್ಲೆಯ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಯಾ ಜಿಲ್ಲೆಯ ರಸ್ತೆ ಸಾರಿಗೆ ನಿಗಮದ ಡಿಸಿಗಳೊಂದಿಗೆ ಸಭೆ ನಡೆಸಿ, ಬಸ್‌ಗಳ ಕೊರತೆ, ಸ್ಥಗಿತಗೊಳಿಸಿರುವ ಮಾರ್ಗಗಳು, ಬಸ್ ಸೇವೆಯಲ್ಲಿನ ವ್ಯತ್ಯಯ ಮೊದಲಾದ ವಿಷಯಗಳ ಕುರಿತು ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು.
ಮಾನವ-ವನ್ಯಪ್ರಾಣಿ ಸಂಘರ್ಷದ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಜಿಲ್ಲೆಯಲ್ಲಿ ವನ್ಯಪ್ರಾಣಿಗಳು ರೈತರ ಜಮೀನಿಗೆ, ತೋಟಕ್ಕೆ ನುಗ್ಗಲು ಆಹಾರ, ನೀರಿನ ಕೊರತೆಯೇ ಕಾರಣ. ಅರಣ್ಯದೊಳಗೆಯೇ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರವಹಿಸಿ
ಮೇವು ಸಾಲದೆ ಇದ್ದರೆ ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಲು ಸೂಚಿಸಿದರು. 20 ಕೋಟಿ ರೂ. ಮೇವು ಮಿನಿ ಕಿಟ್ ವಿತರಣೆ ಕುರಿತು ಸಂಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಮೇವಿನ ಲಭ್ಯತೆಯನ್ನು ವಾಸ್ತವಾಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಬೇಕು. ಮೇವು ಸಾಲದೆ ಇದ್ದರೆ, ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಮೇವಿನ ಲಭ್ಯತೆಯನ್ನು ವಾಸ್ತವಾಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಬೇಕು. 20 ಕೋಟಿ ರೂ. ಮೇವು ಮಿನಿಕಿಟ್ ವಿತರಣೆ ಕುರಿತು ಸಂಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂದೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಮಸ್ಯೆ ಎದುರಾಗಬಹುದು. ಇದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ರೇಷ್ಮೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಫಾರಂಗಳಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕುಡಿಯುವ ನೀರು, ಮೇವು, ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ಹಾಗೂ ಇನ್‌ಪುಟ್ ಸಬ್ಸಿಡಿ ವಿತರಣೆ – ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಡೈರಿ ನಿರ್ವಹಣೆ ಮಾಡಬೇಕು ಎಂದು ತಿಳೀಸಿದರು.
ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ತಮ್ಮ ತಮ್ಮ ಉಸ್ತುವಾರಿಯ ಜಿಲ್ಲೆಗಳಿಗೆ ಭೇಟಿ ನೀಡುವುದು ಕಡ್ಡಾಯ ಮಾಡಿಕೊಳ್ಳಿ ಎಂದು ಸೂಚಿಸಿದರು.
ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ಧರಾಗಿರಬೇಕು
ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ಧರಾಗಿರಬೇಕು, ಇಲ್ಲದಿದ್ದರೆ ಅಂತಹವರಿಗೆ ಇಲ್ಲಿ ಮುಂದುವರಿಯಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ನಿಮ್ಮ ಅನುಭವಗಳು ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ ಎಂದರು.
ಸರ್ಕಾರ ಬಂದು 8 ತಿಂಗಳಾಗಿದೆ. DC, CEO ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿ 3-4 ತಿಂಗಳಾಗಿದೆ. ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎನ್ನುವ ಮಾಹಿತಿಗಳನ್ನು ಸಭೆಗೆ ನೀಡಬೇಕು. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವಲ್ಲಿ ನಿಮ್ಮಗಳ ಅನುಭವ ಎಷ್ಟು ನೆರವಾಗಿದೆ ಎಷ್ಟು ಕೇಳಿ ಮಾಹಿತಿ ಸಿಎಂ ಪಡೆದುಕೊಂಡರು.
ಕೆಲವು ಕಡೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೆಲವೇ ಕೆಲವು ಫಲಾನುಭವಿಗಳಿಗೆ ತಲುಪಲು ಆಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಇನ್ನೂ ಏಕೆ ಆಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು, ಕೆಲವರಿಗೆ ಮಾತ್ರ ಗ್ಯಾರಂಟಿ ಅನುಕೂಲ ತಲುಪಿಲ್ಲ. ಈ ಕೆಲವರೇ ಹೆಚ್ಚು ಹೇಳಿಕೊಂಡು ತಿರುಗುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಅನುಕೂಲ ಪಡೆಯುತ್ತಿರುವವರು ಮೌನವಾಗಿದ್ದಾರೆ. ಆದ್ದರಿಂದ ತಾಂತ್ರಿಕ ಸಮಸ್ಯೆ ಮೊದಲು ಬಗೆಹರಿಸಿ, ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ ಎನ್ನುವ ಸೂಚನೆ ನೀಡಿದರು
ಸಾರ್ವಜನಿಕರು ರೆವಿನ್ಯೂ ಇಲಾಖೆ, ತಹಸೀಲ್ದಾರ್ ಮತ್ತು AC, DC ಕಚೇರಿಗಳಿಗೆ ಅಲೆದಾಟ ಕಡಿಮೆ ಆಗಿದೆಯಾ? ತಹಸೀಲ್ದಾರ್, AC, DC ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗ್ತಾ ಇದೆಯಾ? ಜನರ ಅರ್ಜಿಗಳು ಎಷ್ಟು ದಿನಗಳಿಂದ ಬಾಕಿ ಇವೆ ಪರಿಶೀಲನೆ ನಡೆಸಿದ್ದೀರಾ? ಎಷ್ಟು ಬಾಕಿ ಅರ್ಜಿ ನಿಮ್ಮಿಂದ ಬಗೆಹರಿದಿದೆ? ಎಷ್ಟು ಆಸ್ಪತ್ರೆಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ? ಡಯಾಲಿಸಿಸ್ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಜನರಿಗೆ ಸಿಗುತ್ತಿದೆಯಾ ಎಂದು ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು.
ನೀವು ಉಸ್ತುವಾರಿ ವಹಿಸಿರುವ ಜಿಲ್ಲೆಯಲ್ಲಿನ ಅಧಿಕಾರಿಗಳು- ಫಲಾನುಭವಿಗಳ ಜತೆ ಸಂಪರ್ಕ, ಸಂಬಂಧ ಇನ್ನಷ್ಟು ಹೆಚ್ಚು ಹೆಚ್ಚು ಏರ್ಪಡಬೇಕು. ಜನ ಹೆಚ್ಚು ಹೋಗೋದು ಕೃಷಿ, ಕಂದಾಯ, ಪೊಲೀಸ್ ಇಲಾಖೆ, ಠಾಣೆಗಳಿಗೆ ಬರ್ತಾರೆ. ನೀವು ಎಷ್ಟು ಠಾಣೆಗಳಿಗೆ ಭೇಟಿ ನೀಡಿದ್ರಿ? ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ? ನಿಮ್ಮಿಂದ ಜಿಲ್ಲಾಡಳಿತಕ್ಕೆ ಏನು ಸಲಹೆ ಸಿಕ್ಕಿದೆ? ನಿಮ್ಮ ಅನುಭವದ ಅನುಕೂಲ ಜಿಲ್ಲೆಗಳಿಗೆ ಎಷ್ಟಾಗಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Caste Census: ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅವಧಿ ವಿಸ್ತರಣೆ; 15 ದಿನದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ?
DCಗಳಿಗೆ ಜಾತ್ಯತೀತತೆ ಬಗ್ಗೆ ಕಮಿಟ್‌ಮೆಂಟ್ ಇರಬೇಕು. ಸಂವಿಧಾನದ ಬಗ್ಗೆ ಗೌರವ ಇರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಮುಂದುವರೆಯುವ ಹಕ್ಕಿಲ್ಲ. ಅವಕಾಶವೂ ಇಲ್ಲ. ನಿಮ್ಮ ಲೆವೆಲ್‌ನಲ್ಲಿ ಸಮಸ್ಯೆ ಬಗೆಹರಿಯದೆ ಹೋದರೆ, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಕರ್ತವ್ಯಲೋಪ, ನಿರ್ಲಕ್ಷ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ನೀವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಜಿಲ್ಲಾ ಮಟ್ಟದಲ್ಲಿ ಹೇಗೆ ಶಿಸ್ತು ತರ್ತೀರಿ ಎಂದರು.