Site icon Vistara News

Karnataka Election 2023: ಈಶ್ವರಪ್ಪ ನಿವೃತ್ತಿಗೂ ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ; ನನ್ನ ಸ್ಪರ್ಧೆ ನಿಶ್ಚಿತ: ಆಯನೂರು ಮಂಜುನಾಥ್

Ayanuru-Manjunath

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯದ ನಿವೃತ್ತಿಗೂ ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ.‌ ನನ್ನ ನಿರ್ಧಾರಕ್ಜೆ ನಾನು ಬದ್ಧನಾಗಿದ್ದೇನೆ. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸ್ಪರ್ಧೆ ಮಾಡುವುದು ನಿಶ್ಚಿತ. ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡಲಿದೆ ಎಂಬ ಭರವಸೆ ಈಗಲೂ ಇದೆ. ನಾನು ಸ್ಪರ್ಧೆ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದ ಮಗ್ಗಲು ಬದಲಾಯಿಸುತ್ತಿದೆ. ಬಿಜೆಪಿ ಪಟ್ಟಿ ನೋಡಿದಾಗ ಹಾಗೆನ್ನಿಸುತ್ತಿದೆ. ನನ್ನ ಸ್ಪರ್ಧೆಗೆ ಪೂರಕ ವಾತಾವರಣ ನಿರ್ಮಾಣ ಆಗುತ್ತಿದೆ. ನನ್ನ ನಿಲುವುಗಳಲ್ಲಿ ಬದಲಾವಣೆ ಇಲ್ಲ. ನಾನು ಸಾಗುತ್ತಿರುವ ಹಾದಿಯಲ್ಲಿ ಮಂಗಳವಾರ ನಡೆದಿದ್ದು ಒಂದು ಸಣ್ಣ ಪ್ರಕರಣವಾಗಿದೆ. ಇಷ್ಟು ವರ್ಷದ ಒಂದೇ ತರಹದ ರಾಜಕಾರಣವನ್ನು ಹೊಂದಿದ್ದ ಶಿವಮೊಗ್ಗದ ಮಟ್ಟಿಗೆ ಈಗ ಒಂದು ಮಗ್ಗಲನ್ನು ಬದಲಾಯಿಸಿದಂತೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Election 2023: ಈಶ್ವರಪ್ಪ ನಿರ್ಧಾರಕ್ಕೆ ಭುಗಿಲೆದ್ದ ಆಕ್ರೋಶ: ಮೇಯರ್‌ ಸೇರಿ 19 ಪಾಲಿಕೆ ಸದಸ್ಯರ ರಾಜೀನಾಮೆ ನಿರ್ಧಾರ

ದೀರ್ಘ ಕಾಲ ರಾಜಕಾರಣದಲ್ಲಿದ್ದ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕಾರಣ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗದ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ. ಸುದೀರ್ಘವಾದ ರಾಜಕಾರಣ ಮಾಡಿದ ಈಶ್ವರಪ್ಪ ಅವರಿಗೆ ವ್ಯಕ್ತಿಗತ ಶತ್ರು ಇಲ್ಲ.‌ ಎಲ್ಲರ ಜತೆ ಆತ್ಮೀಯವಾಗಿ ಇರುವಂತಹವರು. ಇವತ್ತಿನ ನಿರ್ಗಮನ, ನಿರ್ಗಮನ ಆದ ರೀತಿ ನಿರಾಶಾದಾಯಕ ಮತ್ತು ಆಘಾತಕಾರಿಯಾಗಿದೆ ಎಂದು ಹೇಳಿದರು.

ಅವರಿಗೆ ಇಬ್ಬರೇ ಶತ್ರು ಇದ್ದಾರೆ. ನಿಯಂತ್ರಣ ಇಲ್ಲದ ಅವರ ಮಾತು ಅವರಿಗೆ ಮೊದಲ ಶತ್ರುವಾದರೆ, ಉತ್ತಮವಾಗಿ ಕೆಲಸ ಮಾಡಿದರೂ ಅವರಿಗೆ ಅಪಖ್ಯಾತಿ ಬರಲು, ಸಚಿವ ಸ್ಥಾನ ಕಳೆದುಕೊಳ್ಳಲು ಅವರ ಮನೆಯಲ್ಲಿಯೇ ಇರುವ ಶತ್ರು ಕಾರಣ. ಪುತ್ರ ವ್ಯಾಮೋಹ ಬಿಟ್ಟಿದ್ದರೆ ಸಚಿವ ಸ್ಥಾನ ಹೋಗುತ್ತಿರಲಿಲ್ಲ. ತನ್ನದಲ್ಲದ ತಪ್ಪಿಗೆ ಇಂದು ಚುನಾವಣಾ ಕಣದಿಂದ ನಿರ್ಗಮಿಸುತ್ತಿದ್ದಾರೆ. ಅವರ ನಿರ್ಗಮನಕ್ಕೆ ಯಾರೂ ಕಾರಣರಲ್ಲ. ಇದೇ ಎರಡು ಅಂಶಗಳು ಅವರ ನಿರ್ಗಮನಕ್ಕೆ ಕಾರಣ. ಈ ಅಂಶ ಅವರಿಗೆ ಗೋಚರವಾಗುತ್ತದೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.

ಜೆ.ಪಿ. ನಡ್ಡಾಗೆ ಪತ್ರ ಬರೆದು ರಾಜಕೀಯ ನಿವೃತ್ತಿ ಘೋಷಿಸಿದ್ದ ಈಶ್ವರಪ್ಪ

ರಾಜ್ಯ ಬಿಜೆಪಿಯ ಆರಂಭದಿಂದಲೂ ಜತೆಯಲ್ಲೇ ಇರುವ ಹಾಗೂ ಬಹುತೇಕ ಎಲ್ಲ ಬಿಜೆಪಿ ಸರ್ಕಾರಗಳಲ್ಲೂ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರು ಮಂಗಳವಾರ ರಾಜಕೀಯ ನಿವೃತ್ತಿ ಘೋಷಿಸಿದ್ದರು. ʼನಾನು ಸ್ವಯಿಚ್ಛೆಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ” ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ.

“ಕಳೆದ 40 ವರ್ಷದ ರಾಜಕೀಯ ಜೀವನದಲ್ಲಿ ಬೂತ್‌ ಮಟ್ಟದಿಂದ ರಾಜ್ಯದ ಉಪ ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು” ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ‌R. Ashok: ಆರ್‌. ಅಶೋಕ್‌ ಪದ್ಮನಾಭನಗರದಲ್ಲೂ ಸೋಲುತ್ತಾರೆ: ರಘುನಾಥ ನಾಯ್ಡುವೇ ಅಭ್ಯರ್ಥಿ ಎಂದ ಡಿ.ಕೆ. ಶಿವಕುಮಾರ್‌

ಶಿವಮೊಗ್ಗ ನಗರದಿಂದ ಸತತ ಶಾಸಕರಾಗುತ್ತಿರುವ ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಎಂಬಾತ ಈಶ್ವರಪ್ಪ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪೊಲೀಸ್‌ ತನಿಖೆಯಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕಿತ್ತು.

ನಂತರವಾದರೂ ತಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕು ಎಂದು ಈಶ್ವರಪ್ಪ ಸತತ ಪ್ರಯತ್ನ ಮಾಡಿದರು. ಆದರೆ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ಕೇಂದ್ರದ ವರಿಷ್ಠರು ಒಪ್ಪಿಗೆ ನೀಡದ ಪರಿಣಾಮ ಈಶ್ವರಪ್ಪ ಸಚಿವರಾಗಲು ಸಾಧ್ಯವಾಗಲೇ ಇಲ್ಲ. ಇದೀಗ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಬದಲಿಗೆ ತಮಗೆ ಟಿಕೆಟ್‌ ನೀಡಬೇಕು ಎಂದು ಆಯನೂರು ಮಂಜುನಾಥ್‌ ಪ್ರಯತ್ನಿಸುತ್ತಿದ್ದಾರೆ.

ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಈ. ಕಾಂತೇಶ್‌ ಅವರಿಗೆ ಟಿಕೆಟ್‌ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿವಮೊಗ್ಗದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಈಶ್ವರಪ್ಪ ಮಾತನಾಡಿದ್ದಾರೆ.

ಇದನ್ನೂ ಓದಿ: Actor Upendra : ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೇ ಉಪೇಂದ್ರರ ಪಕ್ಷ; ಟ್ವೀಟ್‌ನಲ್ಲಿ ರಿಯಲ್‌ ಸ್ಟಾರ್‌ ಹೇಳಿದ್ದೇನು?

ನಾನು ಬಿಜೆಪಿ ನಾಯಕರಿಗೆ ಕಳುಹಿಸಿರುವ ಪತ್ರವನ್ನು ಕರ್ನಾಟಕದಲ್ಲಿ ಎಲ್ಲ ಕಾರ್ಯಕರ್ತರೂ ಮೆಚ್ಚಿದ್ದಾರೆ. ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ತರಬೇಕು ಎನ್ನುವುದು ಮುಖ್ಯ. ಇದಕ್ಕಾಗಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಸಮಿತಿ ತೀರ್ಮಾನ ಮಾಡುವವರು ಸ್ಪರ್ಧೆ ಮಾಡುತ್ತಾರೆ. ಎಲ್ಲರನ್ನೂ ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ. ಕಾಂತೇಶ್‌ ಅವರಿಗೆ ಟಿಕೆಟ್‌ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಚುನಾವಣಾ ಸಮಿತಿ ಆ ನಿರ್ಧಾರ ಮಾಡಲಿದೆ ಎಂದಷ್ಟೇ ತಿಳಿಸಿದ್ದಾರೆ.

Exit mobile version