Site icon Vistara News

ಸರ್ಕಾರಿ ಶಾಲೆಯಲ್ಲಿ ಪೈಗಂಬರ್‌ ಪ್ರಬಂಧ ಸ್ಪರ್ಧೆ ಆಕ್ಷೇಪಿಸಿ ಶ್ರೀರಾಮ ಸೇನೆ ಮುತ್ತಿಗೆ, ಹೆಡ್‌ ಮಾಸ್ಟರ್‌ಗೆ ಬಿಇಒ ತರಾಟೆ

nagavi school

ಗದಗ: ʻʻಹೆಡ್ ಮಾಸ್ಟರ್ ಆಗೋಕೆ ನೀನು ಅನ್ ಫಿಟ್. ಬೋಧನ ಮಾರ್ಗಸೂಚಿಯ ತರಬೇತಿ ಪಡೆದಿಲ್ವಾ? ಸಮುದಾಯಗಳ ನಡುವೆ ಏನ್ ಮಾಡೋಕೆ ಬಂದಿರಿ. ಎಷ್ಟು ಬಾರಿ ನಿಮಗೆ ವಾರ್ನಿಂಗ್ ಮಾಡ್ಬೇಕು. ನಿಮ್ಮದು ಬರೀ ಇದೇ ಆಯ್ತು….ʼʼ ಹೀಗೆಂದು ಶಾಲಾ ಮುಖ್ಯ ಶಿಕ್ಷಕರನ್ನು ಬಿಇಒ ಎನ್.ಎನ್.‌ ನಡುವಿನಮನಿ ತರಾಟೆಗೆ ತೆಗೆದುಕೊಂಡ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮುಖ್ಯ ಶಿಕ್ಷಕರಾದ ಅಬ್ದುಲ್‌ ಮುನಾಫ್‌ ಬಿಜಾಪುರ ಅವರು ಇತ್ತೀಚೆಗೆ ಪಠ್ಯಕ್ರಮದಲ್ಲಿ ಇಲ್ಲದ ಮಹಮ್ಮದ್ ಪೈಗಂಬರ್ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇದರ ವಿರುದ್ಧ ಶ್ರೀರಾಮ ಸೇನೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗೆ ಬಂದು ವಿಚಾರಣೆ ನಡೆಸಿದ ಬಿಇಒ ಎನ್.ಎನ್. ನಡುವಿನಮನಿ ಅವರು ಮುಖ್ಯ ಶಿಕ್ಷಕರನ್ನು ತರಾಟೆ ತೆಗೆದುಕೊಂಡರು ಹಾಗೂ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದರು.

ನಾಗಾವಿ ಶಾಲೆಯಲ್ಲಿ ಬಿಇಒ ವಿಚಾರಣೆ

ಆಗಿದ್ದೇನು?
ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪುರ ಹೇಳುವ ಪ್ರಕಾರ, ಗದಗ ಮೂಲದ ಜುನೇದ್ ಸಾಬ್ ಉಮಚಗಿ ಎಂಬುವರು ಶಾಲೆಗೆ ಆಗಮಿಸಿ ಮಹಮ್ಮದ್ ಪೈಗಂಬರ್ ಕುರಿತು ಪುಸ್ತಕ ವಿತರಿಸಿದರು. ಪುಸ್ತಕಗಳನ್ನು ಓದಿ ಪೈಗಂಬರ್ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿ, ಉತ್ತಮ ಪ್ರಬಂಧಕ್ಕೆ ಬಹುಮಾನ ನೀಡುವುದಾಗಿ ಹೇಳಿದ್ದರು. ಮೊಹಮ್ಮದ್ (ಸ) ಎಲ್ಲರಿಗಾಗಿ ಮತ್ತು ಅಂತಿಮ ಪ್ರವಾದಿ ಮೊಹಮ್ಮದ್ ಎಂಬ ಎರಡು ಪುಸ್ತಕ ನೀಡಿದ್ದ ಜುನೇದ್ ಉತ್ತಮ ಪ್ರಬಂಧಗಳಿಗೆ 5 ಸಾವಿರ ರೂಪಾಯಿ, 3 ಸಾವಿರ ರೂಪಾಯಿ, 2 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಪ್ರಕರಣ ಬೆಳಕಿಗೆ, ಶ್ರೀರಾಮ ಸೇನೆ ಮುತ್ತಿಗೆ
ಶಾಲೆಯಲ್ಲಿ ವಿತರಿಸಿದ್ದ ಮೊಹಮ್ಮದ್ ಪೈಗಂಬರ್ ಪುಸ್ತಕಗಳನ್ನು ಕೆಲವು ಪೋಷಕರು ಮನೆಯಲ್ಲಿ ಗಮನಿಸಿದ್ದಾರೆ. ಶ್ರೀರಾಮ ಸೇನೆ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಶ್ರೀರಾಮ ಸೇನೆ ಕಾರ್ಯಕರ್ತರು ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪುರ ಅವರನ್ನು ತರಾಟೆಗೆ ತೆಗೆದುಕೊಂಡರು. ಮತಾಂತರ ಉದ್ದೇಶದಿಂದಲೇ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಆರೋಪಿಸಿದರು. ಕೆಲಹೊತ್ತು ಶಾಲಾ ಆವರಣದಲ್ಲಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಮುಖ್ಯ ಶಿಕ್ಷಕರು ʻತಪ್ಪಾಯ್ತು ಕ್ಷಮಿಸಿ. ಇದನ್ನು ಇಲ್ಲಿಗೆ ಬಿಟ್ಟು ಬಿಡಿʼ ಎಂದು ಗೋಗರೆದರು.

ಬಿಇಒ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ಭೇಟಿ
ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಬಿಇಒ ನಡುವಿನಮನಿ ಮತ್ತು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದರು. ಈ ಸಂದರ್ಭದಲ್ಲಿ ಬಿಇಒ ಅವರು ಮುಖ್ಯ ಶಿಕ್ಷಕರನ್ನು ತರಾಟೆ ತೆಗೆದುಕೊಂಡರು. ಇಲಾಖಾ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಪುಸ್ತಕದಲ್ಲಿದೆ ಮತಾಂತರದ ಬಗ್ಗೆ ಉಲ್ಲೇಖ..!
ಮೊಹಮ್ಮದ್ ಎಲ್ಲರಿಗಾಗಿ ಎಂಬ ಪುಸ್ತಕದ 14 ನೇ ಪುಟದಲ್ಲಿ ಮತಾಂತರದ ಬಗ್ಗೆ ವಿವರಿಸಲಾಗಿದೆ. ಮದಿನಾ ವಾತಾವರಣದ ಬಗ್ಗೆ ಹೇಳಲಾಗಿದೆ. ಮದಿನಾದಲ್ಲಿ ದೊಡ್ಡ ಸಂಖ್ಯೆಯ ಜನರು ಮುಸ್ಲಿಂ ಸಂಪ್ರದಾಯವನ್ನು ಒಪ್ಪಿಕೊಂಡರು ಎಂದು ನಮೂದಿಸಲಾಗಿದೆ. ಅಲ್ಲದೇ ಇಸ್ಲಾಂ ಧರ್ಮದ ಪರಿಚಯವನ್ನೂ ಪುಸ್ತಕದಲ್ಲಿ ಮಾಡಲಾಗಿದೆ.

ಇದನ್ನೂ ಓದಿ | Conversion | ಬಲವಂತದ ಮತಾಂತರಕ್ಕೆ ಯತ್ನ ಆರೋಪ, ಹುಬ್ಬಳ್ಳಿಯಲ್ಲಿ 11 ಜನರ ವಿರುದ್ಧ ಕೇಸ್‌ ದಾಖಲು

Exit mobile version