Site icon Vistara News

Ettinabhuja Trekking : ಚಾರಣಿಗರೇ ಗಮನಿಸಿ, ನೀವು ಎತ್ತಿಭುಜ ಹತ್ತುವಂತಿಲ್ಲ; ಚಿಕ್ಕಮಗಳೂರಿನ ಟ್ರೆಕ್ಕಿಂಗ್‌ ಸ್ಪಾಟ್‌ಗೆ ಪ್ರವೇಶವಿಲ್ಲ

Ettinabhuja trekking

ಚಿಕ್ಕಮಗಳೂರು: ಚಾರಣಿಗರ ಹಾಟ್‌ಸ್ಪಾಟ್‌ (Trekkers Hotspot), ಕಾಫಿನಾಡು ಚಿಕ್ಕಮಗಳೂರಿನ ಸುಪ್ರಸಿದ್ಧ ಪ್ರವಾಸಿ ತಾಣ (Tourist Place) ಎತ್ತಿನಭುಜಕ್ಕೆ (Ettinabhuja Trekking) ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ (Temporary ban). ಮೂಡಿಗೆರೆ ತಾಲೂಕಿನ ಎತ್ತಿನಭುಜ ಪ್ರವಾಸಿ ತಾಣಕ್ಕೆ ಹೋಗಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಎತ್ತಿನ ಭುಜವು ಚಿಕ್ಕಮಗಳೂರು ಜಿಲ್ಲೆಯ (Chikkamagaluru news) ಮೂಡಿಗೆರೆಯಿಂದ ಸುಮಾರು 25 ಕಿಲೋ ಮೀಟರ್‌ ದೂರದಲ್ಲಿರುವ ಪಶ್ಚಿಮ ಘಟ್ಟಗಳ (Western ghat) ಪರ್ವತದ ಶಿಖರವಾಗಿದ್ದು, ಇದನ್ನು ದೂರದಿಂದ ನೋಡಿದಾಗ ಎತ್ತಿನ ಭುಜದಂತೆ ಕಾಣುವುದರಿಂದ ಇದಕ್ಕೆ ಈ ಹೆಸರು ಬಂದಿದೆ. 4,265 ಅಡಿ ಎತ್ತರ ಇರುವ ಈ ಬೆಟ್ಟದ ಕೊನೆಯ ಎರಡು ಕಿಲೋಮೀಟರ್‌ಗಳನ್ನು ಪ್ರವಾಸಿಗರು ಟ್ರೆಕ್ಕಿಂಗ್ ಮೂಲಕವೇ ಸಾಗಬೇಕು. ಅಪೂರ್ವ ಪ್ರಾಕೃತಿಕ ಸೌಂದರ್ಯದ ಖನಿಯಾಗಿರುವ ಎತ್ತಿನಭುಜಕ್ಕೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ.

ಆದರೆ, ಕಳೆದ 15 ದಿನಗಳಿಂದ ಎತ್ತಿನಭುಜ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ. ವಿದ್ಯುತ್ ಕಂಬ ಹಾಗೂ ಮರಗಳು ಮುರಿದು ಬಿದ್ದು ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಪ್ರವಾಸಿಗರು ಫೋಟೋ ತೆಗೆಯುವ ಸಂದರ್ಭದಲ್ಲಿ ಅಪಾಯದ ಸಾಧ್ಯತೆಯೂ ಇದೆ. ಹೀಗಾಗಿ ಬೆಟ್ಟಕ್ಕೆ ಚಾರಣ ಹೋಗಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ.

Ettinabhuja

ಒಂದೊಮ್ಮೆ ಅನಾಹುತ ಸಂಭವಿಸಿರೆ ತುರ್ತಾಗಿ ಘಟನಾ ಸ್ಥಳಕ್ಕೆ ಹೋಗಿ ಪರಿಹಾರ ಕಾರ್ಯಾಚರಣೆ ನಡೆಸುವುದು ಕಷ್ಟ ಎಂದಿರುವ ಜಿಲ್ಲಾಡಳಿತ, ಪ್ರಾಣಹಾನಿ, ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಚಾರಣಕ್ಕೆ ಬ್ರೇಕ್‌ ಹಾಕಲಾಗಿದೆ ಎಂದಿದೆ.

ಎತ್ತಿಭುಜದ ವಿಶೇಷತೆಗಳೇನು?

Ettinabhuja
  1. ಎತ್ತಿನ ಭುಜದ ಆಕಾರವನ್ನು ಹೋಲುವ ಬೆಟ್ಟ ಇದಾದ ಕಾರಣದಿಂದಾಗಿ ಇದಕ್ಕೆ ಎತ್ತಿನ ಭುಜ ಎಂಬ ಹೆಸರಿಡಲಾಗಿದೆ.
  2. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಸುಮಾರು 2೦ ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಬೈರಾಪುರ ಮಾರ್ಗವಾಗಿ ಹೋಗಿ ಚಾರಣ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಿಂದ ಬೈರಾಪುರ ಮಾರ್ಗವಾಗಿಯೂ ಬರಬಹುದು.
  3. ಬೈರಾಪುರದಲ್ಲಿ ಹೊಯ್ಸಳರ ಕಾಲದ ನಾಣ್ಯ ಭೈರವೇಶ್ವರ ದೇವಸ್ಥಾನವೊಂದಿದೆ. ಇದರ ಸಮೀಪ ನಾಣ್ಯವನ್ನು ಟಂಕಿಸುವ ಟಂಕಸಾಲೆಯಿದ್ದ ಕಾರಣ ಇದನ್ನು ನಾಣ್ಯ ಭೈರವೇಶ್ವರ ದೇವಸ್ಥಾನ ಎಂದೂ ಹೇಳುತ್ತಾರೆ.
  4. ದೇವಸ್ಥಾನದ ಪಕ್ಕದಲ್ಲಿ ವಾಹನ ಪಾರ್ಕ್ ಮಾಡಿ ಎತ್ತಿನ ಭುಜದ ತುತ್ತತುದಿಗೆ ಚಾರಣ ಮಾಡಲು ಅವಕಾಶವಿದೆ.
  5. ಚಾರ್ಮಾಡಿ ಶ್ರೇಣಿ ಮತ್ತು ಶಿಶಿಲಾ ಕಣಿವೆಯ ವಿಹಂಗಮ ನೋಟಗಳನ್ನು ಶಿಖರದಿಂದ ನೋಡಬಹುದು. ಇದು ದೀಪದಕಲ್ಲು, ಅಮೆದಿಕಲ್ಲು, ಒಂಬತ್ತು ಗುಡ್ಡ ಮತ್ತು ಜೇನುಕಲ್ಲು ಗುಡ್ಡಗಳಂತಹ ಇನ್ನೂ ಅನೇಕ ಬೆಟ್ಟಗಳಿಂದ ಆವೃತವಾಗಿದೆ.

ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಎತ್ತಿನಭುಜಕ್ಕೆ ಈಗ ಪ್ರವೇಶ ನಿರ್ಬಂಧಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: Tourist Spot : ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಹೇರಿದ್ದ ನಿಷೇಧ ವಾಪಸ್

Exit mobile version