Site icon Vistara News

ಬೊಮ್ಮಾಯಿಗೇ ಟಿಕೆಟ್‌ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದ ಸಂಸದ ಸಿದ್ದೇಶ್ವರ್‌, ಮೋದಿಗಿಂತ ದೊಡ್ಡ ನಾಯಕ ಬರ್ಬೋದು ಅಂತಾನೂ ಹೇಳಿದ್ರು!

GM Siddeshwar Bommai Modi

#image_title

ದಾವಣಗೆರೆ: ʻʻಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ಸಿಗುತ್ತೋ ಇಲ್ವೋ ಗೊತ್ತಿಲ್ಲʼʼ- ಹೀಗೆಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್‌ (GM Siddeshwar). ಇದರ ಜತೆಗೆ ದೇಶದಲ್ಲಿ ನರೇಂದ್ರ ಮೋದಿಗಿಂತಲೂ ದೊಡ್ಡ ನಾಯಕ ಬರಬಹುದು ಎಂದೂ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಸಂಸದರು, ʻʻನಾನು ಶಿಗ್ಗಾಂವಿ ಕ್ಷೇತ್ರದಲ್ಲಿ ನಿಲ್ತೀನಿ ಅಂತ ಹೇಳಬಹುದು. ಅದರೆ, ಅಂತಿಮ ನಿರ್ಧಾರ ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಟಿಕೆಟ್‌ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಚುನಾವಣೆ ಘೋಷಣೆ ಬಳಿಕ ಕೋರ್‌ ಕಮಿಟಿ ಸಭೆ ನಿರ್ಧಾರ ಮಾಡುತ್ತದೆʼʼʼ ಎಂದು ಹೇಳಿದರು.

ʻʻಯಾರು ಎಲ್ಲಿ ನಿಲ್ಲಬೇಕು ಎನ್ನುವ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ. ಹೈಕಮಾಂಡ್‌ ಯಾರನ್ನು ಬೇಕಾದರೂ ಗುರುತಿಸಬಹುದುʼʼ ಎಂದ ಅವರು ತಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ಆದರೂ ಮುಂದೆ ಏನಾಗುತ್ತೊ ನೋಡೋಣ ಎಂದೂ ನುಡಿದರು.

ಚುನಾವಣೆಯಲ್ಲಿ ಕುಕ್ಕರ್‌ ಮತ್ತಿತರ ಉಡುಗೊರೆಗಳನ್ನು ಹಂಚುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕುಕ್ಕರ್ ಹಂಚುತ್ತಿದ್ದಾರೆ, ಬೇಕಿದ್ದರೆ ಮೂಗ್ಬಟ್ಟು ಹಂಚಲಿ. ಇದರಿಂದ ಜನರಿಗೆ ಅನುಕೂಲ ಆಗಲಿ ಎಂದರು.

ಮೋದಿಗಿಂತಲೂ ಜನಪ್ರಿಯ ನಾಯಕರು ಬರಬಹುದು

ಸಂಸದರಾಗಿರುವ ಸಿದ್ದೇಶ್ವರ್‌ ಅವರು ಸ್ವಲ್ಪ ವಿವಾದಾತ್ಮಕ ಎನಿಸುವ ಹೇಳಿಕೆಯನ್ನೂ ಇದೇ ಸಂದರ್ಭದಲ್ಲಿ ನೀಡಿದರು. ದೇಶದಲ್ಲಿ ಮುಂದೆ ಮೋದಿಗಿಂತಲೂ ದೊಡ್ಡ ನಾಯಕ ಬರಬಹುದು ಎಂದರು.

ʻʻʻಹಿಂದೆ ಇಂದಿರಾ ಗಾಂಧಿ ಬಿಟ್ರೆ ಯಾರೂ ಇಲ್ಲ ಅಂತಿದ್ರು, ಆ ನಂತರ ಅಟಲ್ ಜಿ ಅವರು ಬರಲಿಲ್ಲವೇ? ಆಮೇಲೆ ಮೋದಿಯವರು ಬಂದ್ರು, ಮುಂದೆ ಮೋದಿಯವರಿಗಿಂತ ದೊಡ್ಡ ನಾಯಕರು ಬರಬಹುದು. ದೇಶ ದೊಡ್ಡದು, ಮೋದಿಗಿಂತ ಮತ್ತಷ್ಟು ಜನಪ್ರಿಯ ನಾಯಕರು ಬರಬಹುದುʼʼ ಎಂದು ಸಿದ್ದೇಶ್ವರ್ ಹೇಳಿದರು.

2024ರಲ್ಲಿ ಸಿದ್ದೇಶ್ವರ್‌ಗೆ ಟಿಕೆಟ್‌ ಸಿಗುತ್ತಾ?

2004ರಿಂದ ಸತತ ನಾಲ್ಕು ಬಾರಿ ದಾವಣಗೆರೆ ಕ್ಷೇತ್ರದಿಂದ ಗೆಲ್ಲುತ್ತಿರುವ ಸಿದ್ದೇಶ್ವರ್‌ ಅವರಿಗೆ ಈಗ 70 ವರ್ಷ. ಅವರು ಕೇಂದ್ರದಲ್ಲಿ ಮಂತ್ರಿಗಳೂ ಆಗಿದ್ದರು. ವರ್ಷದ ಹಿಂದೆ ಅವರ ಮಂತ್ರಿ ಸ್ಥಾನ ಕಿತ್ತುಕೊಳ್ಳಲಾಗಿತ್ತು. ಈ ನಡುವೆ ಸಿದ್ದೇಶ್ವರ್‌ ಅವರು ವಿಧಾನಸಭೆ ಟಿಕೆಟ್‌ಗಾಗಿಯೂ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.

ಅದರ ನಡುವೆ ಅವರು ತಮ್ಮ ಮಾತುಗಳಿಂದ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ, ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ನಾಯಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ತಮ್ಮ ವಿರುದ್ಧ ಸಿದ್ದೇಶ್ವರ್‌ ಕತ್ತಿ ಮಸೆಯುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ಸ್ವಲ್ಪ ವಿವಾದಾತ್ಮಕವಾಗಿ ಮಾತನಾಡುತ್ತಿರುವ ಸಿದ್ದೇಶ್ವರ್‌ ಅವರಿಗೆ ಈ ಬಾರಿ ಟಿಕೆಟ್‌ ಸಿಗುತ್ತದೋ ಇಲ್ಲವೋ ಎನ್ನುವ ಚರ್ಚೆಯೂ ಚಾಲ್ತಿಯಲ್ಲಿದೆ.‌

ಇದನ್ನೂ ಓದಿ : Lokayukta Raid: ನಾನು ಮಾಡಾಳು ಮನೆಯಲ್ಲೇ ಇದ್ದೆ; ನಾನೊಬ್ಬ ಸಜ್ಜನ ರಾಜಕಾರಣಿ: ಮಾಡಾಳು ವಿರೂಪಾಕ್ಷಪ್ಪ ಸಮರ್ಥನೆ

Exit mobile version