Site icon Vistara News

Government collage | ಸರ್ಕಾರಿ ಕಾಲೇಜಲ್ಲಿ 1,500 ವಿದ್ಯಾರ್ಥಿಗಳಿರಲಿ: ಅಶ್ವತ್ಥನಾರಾಯಣ

ಪ್ರಾಂಶುಪಾಲರು

ಬೆಂಗಳೂರು: ಸರ್ಕಾರಿ ಕಾಲೇಜುಗಳು ಸುಸಜ್ಜಿತವಾಗಿದ್ದು, ಪ್ರತಿಯೊಂದು ಕಾಲೇಜಿನಲ್ಲೂ (Government collage) ಕನಿಷ್ಠ ಪಕ್ಷ 1,500ದಿಂದ 2,000 ವಿದ್ಯಾರ್ಥಿಗಳಾದರೂ ಇರುವಂತೆ ನೋಡಿಕೊಳ್ಳುವುದು ಪ್ರಾಂಶುಪಾಲರ ಹೊಣೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ‌ ಇದೇ ಮೊದಲ ಬಾರಿಗೆ ಏರ್ಪಡಿಸಿರುವ ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ, ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರುಗಳ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಎನ್ಇಪಿ ಜಾರಿಯಾಗಿದ್ದು, ಇದಕ್ಕೆ ತಕ್ಕಂತೆ ಗುಣಮಟ್ಟದ ಕಲಿಕೆಯು ಸರ್ಕಾರಿ ಕಾಲೇಜುಗಳಲ್ಲಿ ಸಾಧ್ಯವಾಗಬೇಕು. ಈಗಾಗಲೇ ಅಭಿವೃದ್ಧಿ ಪಡಿಸಿರುವ 2,500 ಸ್ಮಾರ್ಟ್ ಕ್ಲಾಸ್‌ ರೂಂಗಳಲ್ಲಿ ಪಿಪಿಟಿ, ಆಡಿಯೋ ಮತ್ತು ವಿಡಿಯೋಗಳನ್ನು ಬೋಧನೆಯಲ್ಲಿ ಅಳವಡಿಸಿ‌ಕೊಳ್ಳಬೇಕು. ಉಳಿದಿರುವ 6,500 ತರಗತಿಗಳನ್ನು ಇನ್ನು ಆರು ತಿಂಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಇಲಾಖೆಯು ಪರಿಣಾಮಕಾರಿ ಕಲಿಕೆಯನ್ನು ಸಾಧ್ಯವಾಗಿಸಲು ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು (ಎಲ್ಎಂಎಸ್) ಅಭಿವೃದ್ಧಿಪಡಿಸಿದೆ. ಇದರಲ್ಲಿರುವ ಪಠ್ಯ ಮತ್ತು ವಿಚಾರಗಳನ್ನು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಬಳಸಿಕೊಳ್ಳುವಂತೆ ಪ್ರಾಂಶುಪಾಲರು ಸೂಕ್ತ ಗಮನಹರಿಸಬೇಕು. ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆ ( ಯುಯುಸಿಎಂಎಸ್) ಜಾರಿಗೆ ಬಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಪ್ರತಿಯೊಂದು ಕಾಲೇಜು ಬಳಸಬೇಕು ಎಂದು ಸೂಚಿಸಿದರು.

ಈಗ ಕೇವಲ 84 ಸರ್ಕಾರಿ ಕಾಲೇಜುಗಳಲ್ಲಷ್ಟೆ ಶೇ.100ರಷ್ಟು ವಿದ್ಯಾರ್ಥಿಗಳು ಇದ್ದಾರೆ. 105 ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ.40ರಷ್ಟು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಸರ್ಕಾರಿ ಕಾಲೇಜುಗಳು ಕಲಿಕೆಗೆ ಆಕರ್ಷಕ ತಾಣಗಳಾಗಬೇಕು ಎಂದು ಸಲಹೆ ನೀಡಿದರು.

ಇನ್ನು ಕಾಲೇಜುಗಳಲ್ಲಿ ಶುಲ್ಕದ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಈಗ ಆಯಾ ಕಾಲೇಜುಗಳ ಅಭಿವೃದ್ಧಿಗಾಗಿ ಕೊಡಲಾಗುತ್ತಿದೆ. ಈ ಮೂಲಕ ಸ್ವಾವಲಂಬನೆ ಮತ್ತು ಸ್ವಾಯತ್ತೆಗಳನ್ನು ಒದಗಿಸಲಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಲಿಯಲು ಬರುವವರು ಆರ್ಥಿಕ ದುರ್ಬಲ ಕುಟುಂಬಗಳ ಮಕ್ಕಳಾಗಿರುತ್ತಾರೆ. ಇವರಿಗೆಲ್ಲ ಉದ್ಯೋಗ ಸಿಗುವಂತೆ ಮಾಡಬೇಕು. ಇದಕ್ಕಾಗಿ ಅಗತ್ಯ ಕೌಶಲ್ಯ ಕಲಿಕೆ ಮತ್ತು ಸೂಕ್ತ ಪಠ್ಯ ಅಳವಡಿಸಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಹಾಜರಿದರು.

Exit mobile version