Site icon Vistara News

ತುಳುನಾಡಿನವರಿಗೆ ಕನ್ನಡ ರಾಜ್ಯ ಭಾಷೆ, ತುಳು ಮಾತೃಭಾಷೆ, ಎರಡರ ರಕ್ಷಣೆ ಅಗತ್ಯ: ಗುರುದೇವಾನಂದ ಸ್ವಾಮೀಜಿ

Gurudevananda Swamiji

#image_title

ಬೆಂಗಳೂರು: ಹೃದಯದ ಭಾವನೆಗಳ ಇನ್ನೊಂದು ರೂಪವೇ ಭಾಷೆ. ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ. ಈ ಎರಡು ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ತುಳುವೆರೆ ಚಾವಡಿ 25ನೇ ವರ್ಷದ ಬೊಳ್ಳಿ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡ್ದ್​ ಸಿರಿ ಪ್ರಶಸ್ತಿ ಮತ್ತು ಜೋಕುಲೆ ಉಜ್ಜಾಲ್​ ತುಳು ಪದಮಾಲೆ ಪುಸ್ತಕ ಹಾಗೂ ಸತ್ಯಪ್ಪೆ ಬಾಲೆಲು ಆಡಿಯೋ ಬಿಡುಗಡೆ ಮಾಡಿ ಮಾತನಾಡಿದರು. ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ವಿಚಾರ ಕೂಡ ಹೋರಾಟದ ಹಾದಿಯಲ್ಲಿದೆ. ಆದರೆ, ಅದಕ್ಕಿಂತ ಮುನ್ನ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸಬೇಕು. ಈಗಾಗಲೇ ಸರ್ಕಾರ ಈ ಬಗ್ಗೆ ಅಧ್ಯಯನ ಸಮಿತಿಯನ್ನು ರಚಿಸಿದ್ದು, ಇದು ಆದಷ್ಟು ಬೇಗ ಜಾರಿಯಾಗಲು ತುಳುನಾಡಿನವರು ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದು ಕರೆ ನೀಡಿದರು.

#image_title

ಇನ್ನು ನಮ್ಮ ಮಾತೃಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಕರಾವಳಿಯ ಜನರಲ್ಲಿ ನಾಯಕತ್ವದ ಗುಣವಿದೆ. ಸದಾ ಕ್ರೀಯಾಶೀಲತೆಯಿಂದ ಇರುವ ಜನ ಆತ್ಮವಿಶ್ವಾಸದಿಂದ ಇರುತ್ತಾರೆ. ಹಾಗೆಯೇ, ತುಳುಭಾಷೆ ಜಾತಿ ಧರ್ಮವನ್ನು ಮೀರಿ ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲ್, ತುಳು ಹಿರಿಯ ಸಾಹಿತಿ ಕುಶಲಾಕ್ಷಿ ವಿ.ಕಣ್ವತೀರ್ಥ, ಸಮಾಜ ಸೇವಕ ರವಿ ಕಟಪಾಡಿ, , ಪ್ರಕಾಶ್ ಜೆ. ಶೆಟ್ಟಿಗಾರ್ ಇವರಿಗೆ ತುಳುನಾಡ್ದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಿರಿಯ ತುಳು -ಕನ್ನಡ ಸಾಹಿತಿ ಡಿ.ಕೆ.ಚೌಟ ಇವರ ಸಂಸ್ಮರರ್ಣಾಥವಾಗಿ ಹಿರಿಯ ತುಳು ಸಾಹಿತಿ ಉಗಪ್ಪ ಪೂಜಾರಿಯವರಿಗೆ ಪ್ರಶಸ್ತಿ ಮತ್ತು ಸಾಮಾಜಿಕ ಚಿಂತಕ ,ತುಳು ಹೊರಾಟಗಾರ ಡಾ.ಉದಯ ಧರ್ಮಸ್ಥಳ ಇವರ ಸಂಸ್ಮರರ್ಣಾಥವಾಗಿ ತುಳು ಸೇವೆಗಾಗಿ ಯುವ ಪ್ರತಿಭೆ ಸತೀಶ್ ಅಗ್ಪಲ್ ಅವರಿಗೆ ಪ್ರಶಸ್ತಿ ನೀಡಲಾಯಿತು. ವಿಶೇಷ ಚೇತನರಾದ ಉಲ್ಲಾಸ್ ಯು ನಾಯಕ್​, ಲಿಖಿತ ಮತ್ತು ಶ್ರಾವ್ಯ ಅವರಿಗೆ ಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಉಮೇಶ್ ಪೂಂಜಾ, ವಸಂತ್​ ಶೆಟ್ಟಿ ಬೆಳ್ಳಾರೆ, ಪ್ರೊ. ರಾಧಾಕೃಷ್ಣ ಸೇರಿ ತುಳುವೆರೆ ಚಾವಡಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version