Site icon Vistara News

ಉತ್ಸವಗಳಿಂದ ಜನ ವೋಟು ಹಾಕುತ್ತಾರೆಂಬುವುದು ಭ್ರಮೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಗೇಲಿ

ಎಚ್.ಡಿ‌.ಕುಮಾರಸ್ವಾಮಿ

ಹಾಸನ: ನಾವು ಇತಿಹಾಸದಲ್ಲಿ ಎಂಥೆಂಥ ಸಮಾವೇಶಗಳನ್ನು ನೋಡಿದ್ದೇವೆ. ಉತ್ಸವಗಳಿಂದ ಜನ ಓಟು ಹಾಕುತ್ತಾರೆಂಬ ಭ್ರಮಾ ಲೋಕದಲ್ಲಿ ಕೆಲವರು ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ‌ ಸಿಎಂ ಎಚ್.ಡಿ‌ ಕುಮಾಸ್ವಾಮಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಎರಡು ಪಕ್ಷಗಳು ಹತಾಶವಾಗಿವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಮೊಮ್ಮಗನ ಮುಡಿ ತೆಗಿಸಲು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಲಕ್ಷ್ಮಿ ದೇವಿ ಮತ್ತು ಮನೆದೇವರಾದ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ‌ ಭಾನುವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

ಇಂತಹ ಸಿದ್ದರಾಮೋತ್ಸವಗಳು ರಾಜ್ಯದಲ್ಲಿ ಎಷ್ಟು ಬಾರಿ ನಡೆದಿಲ್ಲ‌ ಹೇಳಿ ಎಂದು ಪ್ರಶ್ನಿಸಿದ ಅವರು, ನಾವು ಕಾಣದೆ ಇರುವ ಉತ್ಸವವೇ ಇದು? ಇದರಿಂದ ಜನಕ್ಕೆ ಯಾವುದೇ ಅನುಕೂಲ ಇಲ್ಲ ಎಂದರು. ಆ.26ರಂದು ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಜನವೂ ಮಹತ್ವ ಕೊಡದಿರುವುದು ಒಳ್ಳೆಯದು. ಜನಪರ, ಜನ ಹಿತಕ್ಕಾಗಿ ಮಾಡುತ್ತಿರುವ ಪಾದಯಾತ್ರೆ ಇದಲ್ಲ‌ ಎಂದು ಜರಿದರು.

ಇದನ್ನೂ ಓದಿ | Non Veg | ಸಿದ್ದರಾಮಯ್ಯ ಮಾಂಸದೂಟ ಮಾಡಿಲ್ಲ; ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ ಸಹಕಾರ ನೀಡುತ್ತೇನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ “ನಾನು ನಂಜಾವಧೂತ ಸ್ವಾಮೀಜಿ ಹೇಳಿಕೆ ಹಿನ್ನೆಲೆಯಲ್ಲಿ ಮಾತನಾಡಿದ್ದೇನೆ. ಇವತ್ತು ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆಶೀರ್ವಾದ ಬೇಕು.‌ ಆ ಭಗವಂತ ಆಶೀರ್ವಾದ ಕೊಟ್ಟಾಗ ನಮ್ಮದು ಸಹಕಾರ ಇದೆ ಅಂತ ಹೇಳಿದ್ದೇನೆ. ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದು, ಸ್ವತಂತ್ರವಾಗಿ ಅಧಿಕಾರಕ್ಕೆ‌ ತರುವ ಗುರಿ ಹೊಂದಿದ್ದೇನೆ. ಡಿಕೆಶಿ ಅವರ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆʼʼ ಎಂದರು.

ನಂಜಾವಧೂತ ಸ್ವಾಮೀಜಿ ಮುಖ್ಯಮಂತ್ರಿ ಸ್ಥಾನ ಬಲಕ್ಕೆ ಅಥವಾ ಎಡಕ್ಕೆ ಸಿಕ್ಕಿದರೂ ಪರವಾಗಿಲ್ಲ ಎಂದು ಹೇಳಿದ್ದಾರೆ. ಆ ಭಗವಂತನ ಇಚ್ಛೆ ಏನು ಇದೆಯೋ, ಯಾರಿಗೆ ಗೊತ್ತು ಎಂಬುವುದನ್ನು ಹೇಳಿದ್ದೇನೆ. ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಅವರ ಆಸೆಗೆ ನಾನ್ಯಾಕೆ ನಿರಾಸೆ ತರಬೇಕು ಎಂದು ನಾನು ಹೇಳಿದ್ದೇನೆ ಅಷ್ಟೇ ಎಂದರು.

“ಇವತ್ತು ನಮ್ಮ ಮನೆ ದೇವರಾದ ದೇವಿರಮ್ಮ ದೇವರಿಗೆ ನನ್ನ ಮೊಮ್ಮಗನ ಮುಡಿ ಕೊಡಲು ಬಂದಿದ್ದೇನೆ. ನಮ್ಮ ತಂದೆಯವರ ಏಳಿಗೆಗೆ, ಬದುಕಿಗೆ ಸಂಪೂರ್ಣ ರಕ್ಷಣೆ ಕೊಟ್ಟು ಅವರ ಬದುಕನ್ನು ಹಳ್ಳಿಯಿಂದ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋದಂತಹ ನಮ್ಮ ಕುಲ ದೇವರು ಹರದನಹಳ್ಳಿಯ ಶಿವನ ದೇವಾಲಯಕ್ಕೆ ಬಂದಿದ್ದೇನೆʼʼ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ | ಕೊಡಗು ಪಾದಯಾತ್ರೆ ಯಶಸ್ವಿಯಾಗದು: ಸಿದ್ದರಾಮಯ್ಯ ನಡೆಗೆ ಬೊಮ್ಮಾಯಿ ಟೀಕೆ

Exit mobile version