Site icon Vistara News

ರಮೇಶ್‌ ಕುಮಾರ್‌ ವಿಕಾರಗಳಿಗೆ ಕೊನೆಯೇ ಇಲ್ಲದಾಗಿದೆ: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

Rakshit Shetty Richard Anthony Produce By Hombale

ಬೆಂಗಳೂರು: ವಿಕೃತ, ಕೊಳಕು ಮನಸ್ಥಿತಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಾಲಿಗೆ ಮತ್ತು ಮಿದುಳಿನ ನಡುವಿನ ಸಂಪರ್ಕ ಕಳೆದುಕೊಂಡು ಅಸಹಜವಾಗಿ ವರ್ತಿಸುತ್ತಿದ್ದಾರೆ. ಅವರ ವಿಕಾರಗಳಿಗೆ ಕೊನೆಯೇ ಇಲ್ಲದಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ನರಗಳು ದೌರ್ಬಲ್ಯ ಇದ್ದಾಗ ಮಕ್ಕಳಾಗುವುದು ವಿಳಂಬವಾಗುತ್ತದೆ ಎಂದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಯರಗೋಳ್‌ ಜಲಾಶಯ ವಿಳಂಬದ ಬಗ್ಗೆ ರಮೇಶ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ “”ಯರಗೊಳ್ ಯೋಜನೆಗೆ ಅನುಮತಿ ನೀಡಿದ್ದೇ ನಾನು. ಮಾಡಿದ್ದನ್ನೇ ನಾನು ಹೇಳಿದ್ದೇನೆ. ಬೇಕಾದರೆ ರಮೇಶ್ ಕುಮಾರ್ ಅವರು ದಾಖಲೆಗಳನ್ನು ನೋಡಿಕೊಳ್ಳಲಿ. ಕೆಆರ್‌ಎಸ್, ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಎಚ್‌ಎಎಲ್, ಎಚ್‌ಎಂಟಿಗಳನ್ನು ನಾನೇ ಮಾಡಿದ್ದು ಎಂದು ಎಲ್ಲಾದರೂ ಹೇಳಿದ್ದೇನೆಯೇ? ಹೇಳಿದ್ದರೆ ಅವರು ಹೇಳಲಿʼʼ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ | Rain News | ಮಳೆ ಪರಿಹಾರದಲ್ಲಿ ತಾರತಮ್ಯ: ಸಿಎಂ ವಿರುದ್ಧ ವಿವಿಧ ಜಿಲ್ಲೆಗಳ ಜನ, ಜನಪ್ರತಿನಿಧಿಗಳ ಆಕ್ರೋಶ

“”ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ. ಬಾಲಂಗೋಚಿ ಆಗದಿದ್ದರೆ ರಾಜಕೀಯ ಉಳಿಗಾಲವಿಲ್ಲ. ಪರಾವಲಂಬಿ ರಾಜಕಾರಣದ ಕೇರ್ ಆಫ್ ಅಡ್ರೆಸ್ ಆಗಿರುವ ನೀವು ಯಾರ ಕೃಪೆಯಲ್ಲಿದ್ದಿರಿ ಎನ್ನುವುದನ್ನು ಬಿಡಿಸಿ ಹೇಳಬೇಕೆ? ಕೋಲಾರ ಜಿಲ್ಲೆಗೆ ನೀವು ಮಾಡಿದ ಘೋರ ಅನ್ಯಾಯ, ಎಸಗಿದ ಪಾಪ ಕಣ್ಮುಂದೆಯೇ ಇದೆ. ಎತ್ತಿನಹೊಳೆ ಹರಿಸುತ್ತೇನೆ ಎಂದು ನಂಬಿಸಿ ಕೆರೆಗಳ ತುಂಬಾ ವಿಷವನ್ನು ತುಂಬಿಸಿದ ಧೂರ್ತ ಕೃತ್ಯಕ್ಕೆ ಕಾರಣರು ಯಾರು? ಕೆ.ಸಿ ವ್ಯಾಲಿ ಎತ್ತುವಳಿ ಲೆಕ್ಕ ತೆಗೆದರೆ ಮುಖ ಎಲ್ಲಿ ಇಟ್ಟುಕೊಳ್ಳುತ್ತೀರಿ ಸ್ವಯಂ ಘೋಷಿತ ಸಂವಿಧಾನ ತಜ್ಞರೇʼʼ ಎಂದು ಛೇಡಿಸಿದ್ದಾರೆ.

“”3 ವರ್ಷಗಳಲ್ಲಿ ನೀರು ಹರಿಸುತ್ತೇವೆ ಎಂದು ಬೂಸಿಬಿಟ್ಟು, ಜನಕ್ಕೆ ಮಂಕುಬೂದಿ ಎರಚಿ ಎತ್ತಿನಹೊಳೆ ಹೆಸರಿನಲ್ಲಿ ನಡೆಸಿದ ಎತ್ತುವಳಿಕಾಂಡವನ್ನು ಬಿಚ್ಚಿಡಬೇಕೆ? ಗುತ್ತಿಗೆದಾರರ ಹಿಂದೆ ಸುತ್ತಿದ ಬೇತಾಳ ಕಥೆಯನ್ನು ಹೇಳಬೇಕೆ? ಇದೆಲ್ಲವನ್ನು ಅಧ್ಯಾಯಗಳಂತೆ ಆರಂಭಿಸಬೇಕೆ? ಬೆಳಗಾವಿ ಅಧಿವೇಶನದಲ್ಲಿ ಲಜ್ಜೆಗೆಟ್ಟು ಆಡಿದ ಮಾತಿಗೆ ಸ್ವಪಕ್ಷದ ಶಾಸಕಿಯರಿಂದಲೇ ಛೀಮಾರಿ ಹಾಕಿಸಿಕೊಂಡ ಸ್ವಯಂ ಘೋಷಿತ ಸಂವಿಧಾನ ಪಂಡಿತರೇ, ಅಧಿವೇಶನದಲ್ಲಿ ಆದ ಗರ್ವಭಂಗವನ್ನು ಮರೆತಿರಾʼʼ ಎಂದು ಕುಟುಕಿದರು.

“”ಗಾಂಧಿಗಳ ಹೆಸರು ಹೇಳಿಕೊಂಡು ತಲೆಮಾರುಗಳಿಗೆ ಆಗುವಷ್ಟು ಮಾಡಿಕೊಂಡಿದ್ದನ್ನು ನೀವೇ ಒಪ್ಪಿಕೊಂಡಿದ್ದೀರಿ. ಇದಕ್ಕೆ ನಿಮ್ಮ ಕೃಪಾಪೋಷಿತ ಸಿದ್ಧಸೂತ್ರಧಾರರೇ ಸಾಕ್ಷಿ. ಹೀಗೆ ಮಾಡಿಕೊಂಡಿದ್ದರಲ್ಲಿ ಎತ್ತಿನಹೊಳೆ, ಕೆ.ಸಿ ವ್ಯಾಲಿ ಎತ್ತುವಳಿಯೂ ಸೇರಿದೆಯಾ? “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎಂದು ದಾಸಶ್ರೇಷ್ಠ ಶ್ರೀ ಪುರಂದರದಾಸರು ನಿಮ್ಮಂತಹ ವಿಕಾರಿಗಳನ್ನು ನೋಡಿಯೇ ಈ ಪದವನ್ನು ಬರೆದಿರಬಹುದುʼʼ ಎಂದು ಎಚ್‌ಡಿಕೆ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ | ಕೈ ನಾಯಕರು ನನಗೂ ಕೈಕೈ ಹಿಡಿದು ಕೊನೆಗೆ ಕೈ ಎತ್ತಲಿಲ್ಲವೇ; ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

Exit mobile version