ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಹಾನಿ (Rain News) ಪರಿಶೀಲನೆ ವೇಳೆ ರೈತರು ಮೂರು ವರ್ಷಗಳಾದರೂ ಬೆಳೆ ನಷ್ಟ ಪರಿಹಾರ ನೀಡಿಲ್ಲ ಎಂದಾಗ ತಹಸೀಲ್ದಾರ್ ವಿರುದ್ಧ ಸಿಡಿಮಿಡಿಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಿಮ್ಮಪ್ಪನ ಮನೆ ಗಂಟೇನೂ ಹೋಗಲ್ಲ, ಸ್ವಲ್ಪ ಲಿಬರಲ್ ಆಗಿ ಶೀಘ್ರವೇ ಪರಿಹಾರ ಹಣ ನೀಡಿ ಎಂದು ತಾಕೀತು ಮಾಡಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿ, ಗೋವನಕೊಪ್ಪ ಗ್ರಾಮ ಸೇರಿ ವಿವಿಧೆಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿ ಸ್ಥಳೀಯರ ಕುಂದುಕೊರತೆ ಆಲಿಸಿದ್ದಾರೆ. ಗೋವನಕೊಪ್ಪ ಸೇತುವೆ ಹಾಗೂ ಸುತ್ತಲಿನ ಕಬ್ಬು ಪೇರಲ ಬೆಳೆ ಹಾನಿ ವೀಕ್ಷಣೆ ವೇಳೆ ರೈತರು, ಪ್ರವಾಹದಿಂದ ಮೂರು ಬಾರಿ ಪೇರಲ ಬೆಳೆ ಹಾನಿಯಾಗಿದೆ. ಮೂರು ವರ್ಷವಾದರೂ ಬೆಳೆ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಈ ವೇಳೆ ಸಿದ್ದರಾಮಯ್ಯ ಯಾಕೆ ಇನ್ನೂ ಬೆಳೆ ನಷ್ಟ ಪರಿಹಾರ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಪ್ರಕಾರ ಆನ್‌ಲೈನ್‌ನಲ್ಲಿ ಎಂಟ್ರಿ ಮಾಡುತ್ತೇವೆ. ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಹೇಳಿದರು. ಇದಕ್ಕೆ ಗರಂ ಆದ ಸಿದ್ದರಾಮಯ್ಯ, ನಿಮ್ಮಪ್ಪನ ಮನೆ ಗಂಟೇನೂ ಹೋಗಲ್ಲ, ಸ್ವಲ್ಪ ಲಿಬರಲ್ ಆಗಿ ಶೀಘ್ರ ಕೊಡಿ ಎಂದ ಎಂದು ಸೂಚಿಸಿದ್ದಾರೆ.
ಹೆಬ್ಬಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಹಾನಿ ವೀಕ್ಷಣೆಗೆ ವರುಣ ಅಡ್ಡಿಪಡಿಸಿದ್ದರಿಂದ ಸಿದ್ದರಾಮಯ್ಯ, ಮುತ್ತಲಗೇರಿ ಗ್ರಾಮದ ಮನೆ ಹಾನಿ ವೀಕ್ಷಣೆ ಬಿಟ್ಟು ಬಾದಾಮಿಗೆ ತೆರಳಿದರು.
ಇದನ್ನೂ ಓದಿ | ಹಡಬಿಟ್ಟಿ, ಲಂಚ ಹೊಡೆದ ಹಣದಲ್ಲಿ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ; ಸಿದ್ದರಾಮಯ್ಯ ಕಿಡಿ