ತುಮಕೂರು: ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮಾಜದ ಜನ ಶತಮಾನಗಳಿಂದ ಅವಕಾಶ ವಂಚಿತವಾಗಿದ್ದಾರೆ. ಸಮಾಜದ ಎಲ್ಲ ಜಾತಿಯ ಜನ ರಾಜಕೀಯವಾಗಿ ಜಾಗೃತರಾಗಬೇಕಾಗಿದೆ. ದೇಶದ ಸಂಪತ್ತು ಮತ್ತು ಅಧಿಕಾರ ಎಲ್ಲ ಜಾತಿ, ಧರ್ಮಗಳ ಜನರಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕುರುಬ ಸಮುದಾಯದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2005ರಲ್ಲಿ ಜಿಲ್ಲೆಯಲ್ಲಿ ಬೃಹತ್ ಅಹಿಂದ ಸಮಾವೇಶವನ್ನು ಏರ್ಪಾಡಿಸಲಾಗಿತ್ತು. ಅದಾದ ನಂತರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದು ಜಾತಿಯ ಸಮಾವೇಶ ಏರ್ಪಡಿಸಿರುವುದು ಸಂತಸದ ವಿಚಾರ ಎಂದರು.
ʼʼಸ್ವತಂತ್ರ ಭಾರತದಲ್ಲಿ ಅಧಿಕಾರ ಕೇವಲ ಬಲಾಢ್ಯರ ಕೈಯಲ್ಲಿರಬಾರದು, ಇದರಿಂದ ಶೋಷಿತರಿಗೆ ನ್ಯಾಯ ಸಿಗುವುದು ಅಸಾಧ್ಯ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಇದೇ ಕಾರಣಕ್ಕಾಗಿ ನಾನು ಸಿಎಂ ಆಗಿದ್ದಾಗ ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಸಬಲೀಕರಣಕ್ಕಾಗಿ ದುಡಿದಿದ್ದೆ. ಅನ್ನಭಾಗ್ಯದ ಮೂಲಕ ಎಲ್ಲ ಜಾತಿಗಳ 4 ಕೋಟಿ 30 ಲಕ್ಷ ಬಡ ಜನರಿಗೆ ತಲಾ ಏಳು ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದೆʼʼ ಎಂದರು.
ʼʼಕೆಲವು ರಾಜಕೀಯ ವಿರೋಧಿಗಳು ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡ್ತಾರೆ. ಮುಖ್ಯಮಂತ್ರಿ ಹುದ್ದೆ ಎಂದರೆ ಇಡೀ ರಾಜ್ಯದ ಜನರ ಹಿತವನ್ನು ಕಾಯುವುದು. ಹಾಗಂತ ನಾನು ಕುರುಬ ಜನಾಂಗವನ್ನು ಮರೆತಿಲ್ಲ. ನನ್ನ ರಾಜಕೀಯ ಬದುಕಿನ ಆರಂಭದಿಂದ ಇವತ್ತಿನವರೆಗೆ ಕುರುಬ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಹಕ್ಕು, ಪಾಲಿಗಾಗಿ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆʼʼ ಎಂದು ಭರವಸೆ ನೀಡಿದರು.
ಇದನ್ನೂ ಓದಿ | ʼಕೈʼಬಿಟ್ಟ ಸಿಬಲ್; ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಸ್ಪರ್ಧೆ
ʼʼಕುರುಬ ಸಮುದಾಯವನ್ನು ಎಸ್.ಟಿಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನಕ್ಕಾಗಿ 40 ಲಕ್ಷ ರೂಪಾಯಿ ನೀಡಿದ್ದೆ. ಅದಾದ ಮೇಲೆ ಬಿಜೆಪಿ ಸರ್ಕಾರ ಬಂದಿದೆ. ಈಗ ಈಶ್ವರಪ್ಪ ಅವರು ಕುರುಬರನ್ನು ಎಸ್.ಟಿಗೆ ಸೇರಿಸುತ್ತೇನೆ ಎನ್ನುತ್ತಾರೆ. ನಿಮಗೆ ಕುರುಬರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅವರನ್ನು ಎಸ್.ಟಿಗೆ ಸೇರಿಸಲು ಏನು ಸಮಸ್ಯೆ? ಸಮಾವೇಶ, ಪಾದಯಾತ್ರೆ ಮಾಡಿ ಬೂಟಾಟಿಕೆ ಮಾಡುವುದಲ್ಲ. ಇದನ್ನು ಮಾಡಿ ತೋರಿಸಿʼʼ ಎಂದು ಸವಾಲೆಸೆದರು.
ʼʼಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ. ಈ ಜಾತಿಗಳನ್ನು ಸಾಮಾನ್ಯ ವರ್ಗದಡಿ ಸೇರಿಸಿ ಚುನಾವಣೆ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇದರಿಂದ ಅನ್ಯಾಯವಾಗೋದು ಹಿಂದುಳಿದ ಜಾತಿಗಳಿಗೆ. ನಾನು ಸಿಎಂ ಆಗಿದ್ದಾಗ ರಾಜ್ಯದ ಎಲ್ಲ ಜಾತಿಯ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಆಗಬೇಕು ಎಂದು ಓಬಿಸಿ ಆಯೋಗದ ಅಧ್ಯಕ್ಷರಾದ ಕಾಂತರಾಜ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು ನೇಮಕ ಮಾಡಿದ್ದೆ, ಸಮಿತಿಯ ವರದಿಯನ್ನು ರಾಜ್ಯ ಸರ್ಕಾರ ಈವರೆಗೆ ಸ್ವೀಕರಿಸಿಲ್ಲ. ಈಗಲಾದರೂ ಸರ್ಕಾರ ವರದಿ ಸ್ವೀಕರಿಸಬೇಕುʼʼ ಎಂದರು.
ʼʼಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಅದಕ್ಕೆ ಬದ್ಧರಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಈಗ ಮೇಲ್ಜಾತಿಯಲ್ಲಿ ಆರ್ಥಿಕವಾಗಿ ದುರ್ಬಲರಿಗೂ ಶೇ.10 ಮೀಸಲಾತಿ ನೀಡಲಾಗಿದೆ. ಇದು ಸರಿಯಲ್ಲ ಎಂದು ಕುಮಾರಸ್ವಾಮಿ ಅಥವಾ ಈಶ್ವರಪ್ಪ ಯಾವತ್ತಾದರೂ ಹೇಳಿದ್ದಾರೆಯೇʼʼ ಎಂದು ಪ್ರಶ್ನಿಸಿದರು.
ಶಕ್ತಿ ತುಂಬಿ: ಯಾವೆಲ್ಲಾ ತಾಲೂಕುಗಳಲ್ಲಿ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದೆಯೋ ಅವೆಲ್ಲವನ್ನು ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ಪೂರ್ಣಗೊಳಿಸುತ್ತೇನೆ. ತುಮಕೂರಿನಲ್ಲಿ ಇನ್ನೂ 2 ಕೋಟಿ ರೂ. ಹೆಚ್ಚಿಗೆ ಅನುದಾನ ನೀಡಿ ದೊಡ್ಡ ಸಮುದಾಯ ಭವನ ನಿರ್ಮಾಣ ಮಾಡುತ್ತೇನೆ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ. ಕುರುಬ ಸಮಾಜದ ಧ್ವನಿಯಾಗಿ ಇದ್ದೇನೆ, ಮುಂದೆಯೂ ಇರುತ್ತೇನೆ. ನೀವು ಮುಂದಿನ ಚುನಾವಣೆಯಲ್ಲಿ ನನ್ನ ಜತೆಗಿದ್ದು, ನನಗೆ ಶಕ್ತಿ ತುಂಬುವ ಕೆಲಸ ಮಾಡಬೇಕುʼʼ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಸಿಎಂ ಆಗಬೇಕು: ಶಾಸಕ ಭೈರತಿ ಸುರೇಶ್ ಮಾತನಾಡಿ ʼʼಸಿದ್ದರಾಮಯ್ಯ ಅವರು ರಾಜ್ಯ ಎಲ್ಲ ಜಾತಿಗಳ ನಾಯಕರು. ಅವರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗೋ ಆಸೆ ಇಲ್ಲ. ಆದರೇ ನಮ್ಮ ಜನರಿಗೆ ಅವರ ಅವಶ್ಯಕತೆ ಇದೆ. ಮುಂದೆ ತುಮಕೂರಿನಲ್ಲಿ ಲಕ್ಷಾಂತರ ಜನರನ್ನ ಸೇರಿಸಿ ಅಹಿಂದ ಸಮಾವೇಶ ಮಾಡಲಾಗುತ್ತದೆʼʼ ಎಂದರು.
ಯಶಸ್ವಿ ರಾಜಕಾರಣಿ: ಮಾಜಿ ಸಚಿವ ಟಿ. ಬಿ. ಜಯಚಂದ್ರ ಮಾತನಾಡಿ ʼʼಸಿದ್ದರಾಮಯ್ಯ ಎಂದರೆ ಕುರುಬ ಸಮಾಜದ ಕರ್ನಾಟಕ ಕಂಡ ಯಶಸ್ವಿ ರಾಜಕಾರಣಿ. ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಎಲ್ಲ ವರ್ಗದವರಿಗೂ ಸೌಲಭ್ಯ ನೀಡಿದ್ದಾರೆ. ಈ ಹಿಂದಿನ ಯಾವ ಮುಖ್ಯಮಂತ್ರಿಯೂ ಅಷ್ಟೊಂದು ಜನಪರ ಕಾರ್ಯಕ್ರಮ ಮಾಡಿಲ್ಲʼʼ ಎಂದು ಹೇಳಿದರು.
ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ ಎಚ್ಚರ
ʼʼಸಿದ್ದರಾಮಯ್ಯ ಎಲ್ಲ ಸಮುದಾಯಗಳ ಬಡವರು ಸ್ವಾಭಿಮಾನದ ಬದುಕು ನಡೆಸಲು ಅಡಿಪಾಯ ಹಾಕಿದವರು. 444 ಜಿ.ಪಂ ಕ್ಷೇತ್ರಗಳಿಗೆ ಪ್ರವರ್ಗ ಎ ಮೀಸಲಾತಿ ನೀಡಲಾಗಿತ್ತು. ಅದರಲ್ಲಿ 111 ಸ್ಥಾನ ಕಳೆದು ಬಳಿಕ 333 ಸ್ಥಾನಗಳಿಗೆ ನೀಡಲಾಗಿತ್ತು. ಇದೀಗ ಹಿಂದುಳಿದ ವರ್ಗಗಳ ಮೀಸಲಾತಿಯನ್ನ ತೆಗೆಯೋದಕ್ಕೆ ಬಿಜೆಪಿ ಹುನ್ನಾರ ನಡೆಸಿದೆ. ಮುಂದೆ ದಲಿತರಿಗೆ ಇರುವ ಮೀಸಲಾತಿಯನ್ನು ತೆಗೆಯೋ ಪ್ರಯತ್ನ ಮಾಡುತ್ತದೆ. ಹೀಗೆ ಮಾಡಿದರೆ ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ ಎಚ್ಚರ ಇರಲಿʼʼ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದರು.
ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಜಯಚಂದ್ರ, ವೆಂಕಟರವಣಪ್ಪ, ಮಾಜಿ ಶಾಸಕರಾದ, ರಫೀಕ್ ಅಹಮದ್, ಷಡಕ್ಷರಿ, ಕಾಂತರಾಜಯ್ಯ, ಮಾಜಿ ಸಂಸದ ಚಂದ್ರಪ್ಪ ಮತ್ತಿತರರು ಇದ್ದರು.
ಇದನ್ನೂ ಓದಿ | ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಟಾಸ್ಕ್‌ಫೋರ್ಸ್ ರಚಿಸಿದ ಸೋನಿಯಾ ಗಾಂಧಿ