ಬೆಂಗಳೂರು: ರಾಜ್ಯಾದ್ಯಂತ ಶಾಲೆಗಳು ಶುರುವಾಗಿ ತಿಂಗಳು ಕಳೆದರೂ ಪಠ್ಯಪುಸ್ತಕದ ವಾದ-ವಿವಾದ ಮಾತ್ರ ನಿಂತಿಲ್ಲ. ಕನ್ನಡಪರ ಸಂಘಟನೆಗಳಿಂದ ಹಿಡಿದು ವಿರೋಧ ಪಕ್ಷದ ನಾಯಕರು, ಹತ್ತಾರು ಸಾಹಿತಿಗಳು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ಹಿಂಪಡೆಯುವಂತೆ ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಇದನ್ನೂ ಓದಿ | ಪರಿಷ್ಕರಣೆಯಾದ ಪಠ್ಯಪುಸ್ತಕವನ್ನು ಸಮಾವೇಶದಲ್ಲಿ ಹರಿದು ಹಾಕಿದ ಡಿ.ಕೆ ಶಿವಕುಮಾರ್
ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ನೇಮಿಸಿದ ಸಮಿತಿಯ ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿದ್ದರು. ನಾಡಗೀತೆಯನ್ನು ಅಸಭ್ಯವಾಗಿ ತಿರುಚಿದವರಿಗೆ ಬಹುಮಾನ ನೀಡುತ್ತೇನೆಂದು ಹೇಳಿದ್ದು ಕೂಡ ಕುವೆಂಪು ಅವರಿಗೆ ಮಾಡಿದ ದೊಡ್ಡ ಅವಮಾನವೇ ಆಗಿದೆ. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿ ನಾಡ ಅಸ್ಮಿತೆಗೆ ಮಾಡಿದ ಅವಮಾನವಾಗಿದೆ. ಜತೆಗೆ ಡಾ. ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆಂದು ರೋಹಿತ್ ಚಕ್ರತೀರ್ಥ ವಿರುದ್ಧ ಹೆಚ್‌ಡಿಡಿ ಕಿಡಿಕಾರಿದ್ದಾರೆ.
ಮುಂದುವರೆದು, ಇಂಥ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು. ಇನ್ನು ಮರು ಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳಂತೂ ಅಸಂಖ್ಯಾತ, ಸಮಾಜ ವಿಜ್ಞಾನ ಪಠ್ಯಪುಸ್ತಕದ ಏಕೀಕರಣ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ಹಾಕಲಾಗಿದೆ. ಬಸವಣ್ಣನವರ ಚಳವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ. ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ.
ಅಂಬೇಡ್ಕರ್ ಅವರಿಗೆ ‘ಸಂವಿಧಾನ ಶಿಲ್ಪಿ’ ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೇ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಡಾ. ಅಂಬೇಡ್ಕರ್ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಮರು ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ. ಹೀಗಾಗಿ ಪುನರ್ ಪರಿಷ್ಕರಣೆಯ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತವೆಂದು ಸಿಎಂಗೆ ಮನವಿ ಮಾಡಿದ್ದಾರೆ.
ಹಿರಿಯರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ- ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಪ್ರಧಾನಿಗಳು ಮತ್ತು ಹಿರಿಯರಾದ ಹೆಚ್.ಡಿ. ದೇವೇಗೌಡರು ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಬರೆದಿರುವ ಪತ್ರಕ್ಕೆ ಗೌರವಪೂರ್ವಕವಾಗಿ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನಾಳೆ ಶಿಕ್ಷಣ ಇಲಾಖೆಯ ಮುಖ್ಯಸ್ಥರನ್ನು ಹಾಗೂ ಸಚಿವರನ್ನು ಕರೆಯಲಾಗುತ್ತಿದೆ. ಸಭೆಯಲ್ಲಿ ಮಾಜಿ ಪ್ರಧಾನಿಗಳ ಪತ್ರದ ಸಾರವನ್ನು ಅವಲೋಕಿಸಲಾಗುವುದು. ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ತೀರ್ಮಾನಿಸಿ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ: ಕವಿಶೈಲದಿಂದ ತೀರ್ಥಹಳ್ಳಿ ಪಾದಯಾತ್ರೆಗೆ ಹಂಸಲೇಖ ಚಾಲನೆ