Site icon Vistara News

Exam Cheating : ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಎಸ್ಕೇಪ್‌ ಆದ ಪಿಎಸ್‌ಐ ಕಿಂಗ್‌ ಪಿನ್‌ ಆರ್.ಡಿ ಪಾಟೀಲ್‌

PSI Scam kingpin RD patil Escape

ಕಲಬುರಗಿ: ಪಿಎಸ್ಐ ಸ್ಕ್ಯಾಮ್ (PSI Scam) ಕಿಂಗ್ ಪಿನ್‌ ಆರ್‌.ಡಿ ಪಾಟೀಲ್‌ ಕಲಬುರಗಿ ನಗರದಲ್ಲೇ ತಂಗಿದ್ದು, ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದಾನೆ. ಪೊಲೀಸರ ಕೈಗೆ ಸಿಗದೆ ಕಳ್ಳಾಟವಾಡುತ್ತಿದ್ದಾನೆ. ಸದ್ಯ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಹಾರಿ ಪರಾರಿ ಆಗಿದ್ದಾನೆ. ಪಿಎಸ್ಐ ಸ್ಕ್ಯಾಮ್ ಮಾಸುವ ಮುನ್ನವೆ ಇದೀಗ ಮತ್ತೊಂದು ಬಹುದೊಡ್ಡ ಸ್ಕ್ಯಾಮ್ ಬಯಲಾಗಿದೆ. ಎಫ್‌ಡಿಎ ಪರೀಕ್ಷೆ (Exam Cheating) ಅಕ್ರಮದ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪಿಎಸ್ಐ ಅಕ್ರಮದ ಕಿಂಗ್‌ ಪಿನ್ ಆರ್. ಡಿ ಪಾಟೀಲ್‌ ಬಳಿ ಅಭ್ಯರ್ಥಿಗಳು ಬ್ಲ್ಯೂಟೂತ್ ಡಿವೈಸ್ ಖರೀದಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದವರನ್ನು ಪೊಲೀಸರು ಈಗಾಗಲೇ ಹೆಡೆಮುರಿ‌ಕಟ್ಟಿದ್ದಾರೆ.

ಕಳೆದ ಭಾನುವಾರದಿಂದ ಸೋಮವಾರದವರೆಗೆ ಕಲಬುರಗಿಯಲ್ಲೆ ಆರ್‌.ಡಿ ಪಾಟೀಲ್ ತಂಗಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್‌ನಲ್ಲಿ ತಂಗಿದ್ದ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಆರ್‌.ಡಿ ಪಾಟೀಲ್ ಪರಾರಿ ಆಗಿದ್ದಾನೆ. ಅಪಾರ್ಟ್ಮೆಂಟ್‌ನ ಹಿಂಬದಿಯ ಕಾಂಪೌಂಡ್ ಹಾರಿ ಪರಾರಿಯಾಗಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿನ್ನೆ ಸೋಮವಾರ (ನ.6) ಕಿಂಗ್ ಪಿನ್ ಆರ್.ಡಿ ಪಾಟೀಲ್ ವಿಚಾರಣೆ ಇತ್ತು. ಆದರೆ ವಿಚಾರಣೆಗೆ ಗೈರಾಗಿದ್ದ. ಸದ್ಯ ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಡಿ ಪಾಟೀಲ್ ಜಾಮೀನಿಗಾಗಿ ಕಲಬುರಗಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗಿದೆ. ನ.7ರ ಮಧ್ಯಾಹ್ನ 3 ಗಂಟೆ ಒಳಗಾಗಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಅರ್ಜಿ ವಜಾ ಆದರೆ ಕೋರ್ಟ್ ಮುಂದೆ ಶರಣಾಗಲು ಆರ್‌. ಡಿ ಪಾಟೀಲ್ ಪ್ಲ್ಯಾನ್ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸರು ಬಂಧಿಸುವ ಭೀತಿಯಲ್ಲಿ ಪಾಟೀಲ್‌ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಪರಾರಿ ಆಗಿದ್ದಾನೆ. ಸದ್ಯ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಈತನ ಕಳ್ಳಾಟದಿಂದ ಖಾಕಿ ಕಂಗಾಲಾಗಿದೆ. ಮಹಾರಾಷ್ಟ್ರಕ್ಕೆ ತೆರಳಿ ತಲೆಮರೆಸಿಕೊಂಡನಾ ಅಥವಾ ಯಾವ ಕಡೆ ಓಡಿ ಹೋಗಿದ್ದಾನೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: Murder Case : ಪೊಲೀಸನೇ ಇಲ್ಲಿ ಕ್ರಿಮಿನಲ್; ಬಾಣಂತಿ ಪತ್ನಿಯ ಉಸಿರುಗಟ್ಟಿಸಿ ಕೊಂದ ಧೂರ್ತ

ಏನಿದು ಪ್ರಕರಣ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ. 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ (Examination on October 28, 29) ಖಾಲಿ ಇದ್ದ 720 ಎಫ್‌ಡಿಎ (FDA) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ನಡೆಸಿತ್ತು. ಆದರೆ ಕಲಬುರಗಿ ‌ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿತ್ತು.

ಕಲಬುರಗಿ ನಗರ ಹಾಗೂ ಅಫಜಲಪುರ ತಾಲೂಕಿನಲ್ಲಿ ಹಲವು ಅಭ್ಯರ್ಥಿಗಳು, ಕನ್ನಡ ಮತ್ತು ಇಂಗ್ಲೀಷ್ ಕಮ್ಯೂನಿಕೇಷನ್ಸ್ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಲಬುರಗಿ ಹಾಗೂ ಅಫಜಲಪುರ ಸೇರಿ ಒಟ್ಟು 16ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದರು.

ಆರ್‌.ಡಿ ಪಾಟೀಲ್‌ ಬಳಿ ಬ್ಲ್ಯೂಟೂತ್ ಖರೀದಿ

ಪಿಎಸ್ಐ ಅಕ್ರಮದ ಕಿಂಗ್‌ ಪಿನ್ ಆರ್. ಡಿ ಪಾಟೀಲ್‌ ಬಳಿ ಅಭ್ಯರ್ಥಿಗಳು ಬ್ಲ್ಯೂಟೂತ್ ಡಿವೈಸ್ ಖರೀದಿಸಿ ಪರೀಕ್ಷೆಯಲ್ಲಿ ಅಕ್ರಮವೆಸಗಿ ಪೊಲೀಸರಿಗೆ ಲಾಕ್‌ ಆಗಿದ್ದಾರೆ. ಸದ್ಯ ಅಫಜಲಪುರ ಕಲಬುರಗಿ ಸೇರಿ ಹಲವು ಭಾಗದಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಪಿಎಸ್ಐ ಸ್ಕ್ಯಾಮ್ ಕಿಂಗ್ ಪಿನ್ ವಿರುದ್ಧವೂ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಮನೆಯಲ್ಲೇ ಲಕ್ಷ ಲಕ್ಷ ಡೀಲ್

ಪಿಎಸ್ಐ ಸ್ಕ್ಯಾಮ್ ಕಿಂಗ್ ಪಿನ್ ಆರ್.ಡಿ ಪಾಟೀಲ್‌ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಕಲಬುರಗಿ ನಗರ ಹಾಗೂ ಅಫಜಲಪುರ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ಬಳಸಲು ತಂದಿದ್ದ ಬ್ಲ್ಯೂಟೂತ್ ಡಿವೈಸ್‌ಗಳನ್ನು ಆರ್.ಡಿ ಪಾಟೀಲ್ ಬಳಿ ಖರೀದಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಅಭ್ಯರ್ಥಿ ಆಕಾಶ್ ಮಂಠಾಳೆ ಎಂಬಾತ 25 ಲಕ್ಷಕ್ಕೆ ಡೀಲ್ ಫಿಕ್ಸ್ ಮಾಡಿಕೊಂಡು, ಮುಂಗಡ 8 ಲಕ್ಷ ರೂ. ಆರ್‌. ಡಿ ಪಾಟೀಲ್‌ಗೆ ನೀಡದ್ದಾನೆ ಎನ್ನಲಾಗಿದೆ. ಸಂತೋಷ್ ಯಾಳಗಿ ಎಂಬಾತ 20 ಲಕ್ಷಕ್ಕೆ ಡೀಲ್ ಮಾಡಿ ಮುಂಗಡ 5 ಲಕ್ಷ ನೀಡಿದ್ದಾನೆ ಎನ್ನಲಾಗಿದೆ. ಈ ಎಲ್ಲಾ ಹಣಕಾಸಿನ ವ್ಯವಹಾರವು ಪಿಎಸ್‌ಐ ಕಿಂಗ್‌ ಪಿನ್‌ ಆರ್.ಡಿ. ಪಾಟೀಲ್‌ನ ಕಲಬುರಗಿ ನಿವಾಸದಲ್ಲಿ ನಡೆದಿತ್ತು ಎನ್ನಲಾಗಿದೆ. ಕಲಬುರಗಿ ಹಾಗೂ ಅಫಜಲಪುರದಲ್ಲಿ ಪ್ರಕರಣಗಳು ದಾಖಲಾಗಿದ್ದು, ಪಿಎಸ್ಐ ಕಿಂಗ್ ಪಿನ್ ಆರ್.ಡಿ ಪಾಟೀಲ್ ಸದ್ಯ ನಾಪತ್ತೆಯಾಗಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version