Site icon Vistara News

ಇಂದು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಪರೀಕ್ಷೆ; ಉದ್ದ ತೋಳಿನ ಅಂಗಿಗೆ ಕತ್ತರಿ

Exam for the post of Armed Police Constable today

ಬೆಂಗಳೂರು: ಜನವರಿ 28ರಂದು ರಾಜ್ಯಾದ್ಯಂತ 3064 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಬೆಂಗಳೂರಲ್ಲಿ ಸುಮಾರು 78 ಪರೀಕ್ಷಾ ಕೇಂದ್ರಗಳಿದ್ದು, 42,740 ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಲಿದ್ದಾರೆ. ರಾಜ್ಯಾದ್ಯಂತ ಸುಮಾರು 4 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಸರ್ಕಾರವು 2022ರಲ್ಲೇ ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಪಿಎಸ್‌ಐ ಹಗರಣದ ನಂತರ ಪರೀಕ್ಷೆಯನ್ನು ನಡೆಸಿರಲಿಲ್ಲ. ಇದೀಗ 3064 ಹುದ್ದೆಗಳು ಖಾಲಿಯಿದ್ದು, ಸಿಎಆರ್/ಡಿಎಆರ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗುತ್ತಿದೆ.

ನಡುಗಿಸುವ ಚಳಿಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳು

ಬೆಂಗಳೂರಿನ ಚಾಲುಕ್ಯ ಸರ್ಕಲ್‌ನಲ್ಲಿರುವ ಆರ್‌ಸಿ ಕಾಲೇಜಿನ ಮುಂಭಾಗ ನಡುಗಿಸುವ ಚಳಿಯಲ್ಲೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಬಂದು ನಿಂತಿರುವುದು ಕಂಡು ಬಂತು. ಭಾನುವಾರ ಬೆಳಗ್ಗೆ 11 ಗಂಟೆಯಿಂದ 12.30ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲು ಬೆಳಗಾವಿ, ಕೊಪ್ಪಳ, ಯಾದಗಿರಿ, ಬಿಜಾಪುರ ,ಕಲ್ಬುರ್ಗಿ, ಚಿತ್ರದುರ್ಗದಿಂದಲ್ಲೂ ಅಭ್ಯರ್ಥಿಗಳು ಬಂದಿದ್ದಾರೆ. ಉತ್ತರ ಕರ್ನಾಟಕದಿಂದಲೇ ಅತಿ ಹೆಚ್ಚು ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಅಕ್ರಮ ತಪ್ಪಿಸಲು ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ಹಾಕಲಾಗಿದೆ.

ಅರ್ಧ ತೋಳಿನ ಶರ್ಟ್‌ ಧರಿಸಿ ಬಂದ ಅಭ್ಯರ್ಥಿಗಳು

ಧಾರವಾಡದ ಸಪ್ತಪೂರದ ಪ್ರಿಸಮ್ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ನಡೆಯದಂತೆ ಪೊಲೀಸ್‌ ಭದ್ರತೆ ನೀಡಲಾಗಿತ್ತು. ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶಾರ್ಟ್ ಧರಿಸಬೇಕೆನ್ನುವ ನಿಯಮ ಹಿನ್ನೆಲೆಯಲ್ಲಿ ಪ್ರತಿ ಅಭ್ಯರ್ಥಿಯನ್ನು ಸಹ ಪೊಲೀಸರು ತಪಾಸಣೆ ನಡೆಸಿದರು. ಜೀನ್ಸ್ ಪ್ಯಾಂಟ್, ಹೆಚ್ಚಿನ ಜೇಬು ಇರುವ ಪ್ಯಾಂಟ್‌ ಧರಿಸಿ ಬಂದವರಿಗೆ, ಶೂ ಸೇರಿ ಕೈಗೆ ಹಾಗೂ ಒಳಭಾಗದಲ್ಲಿ ದಾರಗಳನ್ನು ಹಾಕಿಕೊಂಡು ಬಂದವರಿಗೆ ಕೇಂದ್ರದೊಳಗೆ ಪ್ರವೇಶ ಇರಲಿಲ್ಲ. ಕುತ್ತಿಗೆ ಸುತ್ತ ಆಭರಣ ಸೇರಿ ಉಂಗುರ ಮತ್ತು ಕಡಗಗಳನ್ನು ನಿಷೇಧಿಸಲಾಗಿದೆ.

ಯಾದಗಿರಿಯಲ್ಲಿ ಪೊಲೀಸ್‌ ಕಟ್ಟೆಚ್ಚರ

ರಾಜ್ಯ ಸಶಸ್ತ್ರ ಪೊಲೀಸ್ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಯಾದಗಿರಿ ಪರೀಕ್ಷಾ ಕೇಂದ್ರದ ಎದುರು ಪೊಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು. ಕೆಇಎ ಪರೀಕ್ಷಾ ಅಕ್ರಮದ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಪ್ರತಿಯೊಂದು ಪರೀಕ್ಷಾ ಕೇಂದ್ರದ ಎದುರು ಬಯೋಮೆಟ್ರಿಕ್ ಯಂತ್ರ ಅಳವಡಿಸಿದ್ದಾರೆ.

ಪರೀಕ್ಷಾ ಕೇಂದ್ರದ ಹೊರಗೆ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಮೆಟಲ್ ಡಿಟೆಕ್ಟರ್ ಮೂಲಕ ಅಭ್ಯರ್ಥಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಪ್ರತಿ ಕೊಠಡಿಗೆ 20 ಅಭ್ಯರ್ಥಿಗಳು ಕುಳಿತುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು ಐದು ಡಿವೈಎಸ್ಪಿ, ಪ್ರತಿ ಕೇಂದ್ರಕ್ಕೆ ಓರ್ವ ಸಿಪಿಐ, ಪಿಎಸ್ಐ ಹಾಗೂ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version