Site icon Vistara News

Excise Revenue: ಸರ್ಕಾರಕ್ಕೆ ಗ್ಯಾರಂಟಿ ಕಿಕ್‌ ಕೊಟ್ಟ ಬಿಯರ್; 22,500 ಕೋಟಿ ಆದಾಯ

beer shop

ಬೆಂಗಳೂರು: ಚಳಿಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಯರ್ ಸೇರಿ ಎಲ್ಲ ಮಾದರಿಯ ಮದ್ಯ ಮಾರಾಟ ಹೆಚ್ಚಾಗಿದೆ. ಇದರಿಂದ ಅಬಕಾರಿ ಇಲಾಖೆಯ ಆದಾಯದಲ್ಲಿ (Excise Revenue) ಭಾರಿ ಏರಿಕೆ ಕಂಡುಬಂದಿದೆ. ಕಳೆದ 7 ತಿಂಗಳಲ್ಲಿ ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದ್ದು, ವಿಶೇಷವಾಗಿ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.

ಚಳಿಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಬಿಯರ್‌ಗೆ ಭಾರಿ ಬೇಡಿಕೆ ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ಮದ್ಯದ ದರವನ್ನು ಹೆಚ್ಚಳ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಧ್ಯಪ್ರಿಯರು, ನಂತರ ಮದ್ಯ ಸೇವನೆ ಕಡಿಮೆ ಮಾಡಿದ್ದರು. ಆದರೆ, ಈಗ ಚಳಿಗಾಲ ಆರಂಭವಾಗುತ್ತಿದ್ದಂತೆ ದರ ಏರಿಕೆ ವಿಷಯ ಮರೆತು ಮದ್ಯ ಸೇವನೆಗೆ ಮುಂದಾಗಿದ್ದಾರೆ. ಅದರಲ್ಲಿಯೂ ಬಿಯರ್ ಸೇವನೆ ಮಾಡುವವರ ಸಂಖ್ಯೆ ಅತ್ಯಧಿಕವಾಗಿ ಏರಿಕೆ ಆಗುತ್ತಿದೆ.

ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದಲ್ಲಿ ಈ ವರ್ಷದ ನವೆಂಬ‌ನರ್‌ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್‌ಗಳು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಅಬಕಾರಿ ಇಲಾಖೆಗೆ ಆದಾಯ ಹೆಚ್ಚಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಆಗುತ್ತಿದೆ ಆದರೆ,. ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17 ಮಾರಾಟ ಹೆಚ್ಚಳವಾಗಿದೆ.

ಇದನ್ನೂ ಓದಿ | CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಮಾರಾಟ ಆಗಿತ್ತು. ಆದರೆ, ಈ ವರ್ಷ ನವೆಂಬರ್‌ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. ಈ ಮೂಲಕ ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದಲ್ಲಿ 6 ಲಕ್ಷ ಬಿಯರ್ ಬಾಕ್ಸ್ ಮಾರಾಟ ಹೆಚ್ಚಳವಾಗಿದೆ.

ದರ ಏರಿಕೆಯ ನಡುವೆಯೂ ಮದ್ಯ ಮಾರಾಟ ಬಲು ಜೋರಾಗಿದೆ. ಬಿಯರ್ ಜೊತೆಗೆ ಇತರೆ ಲಿಕ್ಕರ್ ಮಾರಾಟದಲ್ಲೂ ಹೆಚ್ಚಳವಾಗಿದೆ. ಇನ್ನು ಚಳಿಗಾಲ ಆರಂಭವಾಗಿದ್ದರಿಂದ ನವೆಂಬರ್‌ನಲ್ಲಿ ಬಿಯರ್ ಸೇರಿ ಎಲ್ಲ ಮಾದರಿಯ ಮದ್ಯ ಮಾರಾಟ ಹೆಚ್ಚಾಗಿದ್ದು, ಒಟ್ಟಾರೆ ಲಿಕ್ಕರ್ ಮಾರಾಟ ಪ್ರಮಾಣ 0.43 ಶೇ. ಹೆಚ್ಚಳವಾಗಿದೆ. ಇನ್ನು ರಾಜ್ಯ ಸರ್ಕಾರದಿಂದ 2023-24ರಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆಗೆ ಟಾರ್ಗೆಟ್ ನೀಡಲಾಗಿದೆ. ಈಗ ಕಳೆದ ಎಂಟು ತಿಂಗಳಿನಲ್ಲಿ (ಏಪ್ರಿಲ್‌ನಿಂದ ನವೆಂಬರ್ ವರೆಗೆ) ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ.

ಇದನ್ನೂ ಓದಿ | Belagavi Winter Session: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ; ತಿದ್ದುಪಡಿ ವಿಧೇಯಕ ಮಂಡನೆ

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಹೀಗಾಗಿ ಖಜಾನೆ ಭರ್ತಿ ಮಾಡಲು ಸರ್ಕಾರ ಪ್ರಮುಖ ಆದಾಯದ ಮೂಲವಾದ ಮದ್ಯದ ದರ ಹೆಚ್ಚಳ ಮಾಡಿ ಮಾರಾಟ ಹೆಚ್ಚಳಕ್ಕೆ ಟಾರ್ಗೆಟ್‌ ನೀಡಿತ್ತು. ಆರಂಭದಲ್ಲಿ ದರ ಹೆಚ್ಚಳದಿಂದ ಬಾರ್‌ಗಳಿಂದ ದೂರ ಉಳಿದಿದ್ದ ಮದ್ಯಪ್ರಿಯರು ಚಳಿಗಾಲ ಆರಂಭವಾಗುತ್ತಿದ್ದಂತೆ ಹೆಚ್ಚಿನ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಬಿಯ‌ರ್ ಮಾರಾಟ ಪ್ರಮಾಣ ಹೆಚ್ಚಾಗಿದೆ.

Exit mobile version