Site icon Vistara News

Fact Check: ಕನ್ನಡ ಗೊತ್ತಿಲ್ಲದ್ದಕ್ಕೆ ಬಿಹಾರ ಯುವಕನ ಮೇಲೆ ದೌರ್ಜನ್ಯ ನಡೆಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?

Fact Check- Bihar boy's fake language row in bengaluru

ಬೆಂಗಳೂರು, ಕರ್ನಾಟಕ: ಬಿಹಾರಿ (Bihar) ಯುವಕ ಹಿಂದಿ (Hindi) ಮಾತನಾಡಿದ್ದಕ್ಕೆ ಬೆಂಗಳೂರಿನಲ್ಲಿ (Bengaluru) ಸ್ಥಳೀಯರು ದೌರ್ಜನ್ಯ ಮಾಡಿದ್ದಾರೆ. ಭಾಷೆಯ ಕಾರಣಕ್ಕೆ ದೌರ್ಜನ್ಯ ನಡೆಸಿದ್ದಾರೆಂಬ ವಿಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಈ ವಿಡಿಯೋ ಹಿಂದಿನ ಅಸಲಿಯತ್ತು ಈಗ ಬಯಲಾಗಿದೆ. ವಾಸ್ತವದಲ್ಲಿ ವಿಡಿಯೋದಲ್ಲಿ ಕ್ಲೇಮ್ ಮಾಡಿದಂತೆ, ಭಾಷೆಯ ಕಾರಣಕ್ಕೆ ಯುವಕನಿಗೆ ಬೈದಿದ್ದಲ್ಲ(fake language row). ಬದಲಾಗಿ ಕಸ್ಟಮ‌ರ್‌ಗೆ ನೀಡಲಾಗಿದ್ದ ಕಳಪೆ ಆಹಾರ ಹಾಗೂ ಹರಿದ 100 ರೂ. ನೋಟಿಗಾಗಿ ಜಗಳವಾಗಿತ್ತು. ಅದನ್ನೇ ಯುವಕ, ತನ್ನ ಮೇಲೆ ಭಾಷೆಯ ಕಾರಣಕ್ಕೆ ದೌರ್ಜನ್ಯ ನಡೆದಿದೆ ಎಂದು ವಿಡಿಯೋ ಅಪ್‌ಲೋಡ್ ಮಾಡಿದ್ದ, ಈ ಕುರಿತು ತನಿಖೆ ನಡೆಸಿದ ಪೊಲೀಸರು ನಿಜ ಸಂಗತಿಯನ್ನು ಬಯಲಿಗೆಳಿದಿದ್ದಾರೆ(Fact Check).

ವಿಡಿಯೋದಲ್ಲಿರುವುದು ಏನು?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ತನ್ನನ್ನು ತಾನು ಬಿಹಾರದ ಮುಝಪ್ಪರ್‌ದವನು ಎಂದು ಹೇಳಿಕೊಳ್ಳುತ್ತಾನೆ. ಕನ್ನಡಿಗರಿಗೆ ಬೈಯುತ್ತಾ, ಅಶ್ಲೀಲ ಪದಗಳನ್ನು ಬಳಸಿ, ಬೆಂಗಳೂರಿನಲ್ಲಿ ಹಿಂದಿ ಭಾಷಿಕರಿಗೆ ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಿತ್ತಾನೆ.

ಬೆಂಗಳೂರು ಪೊಲೀಸರು ಹೇಳುವುದೇನು?

ವಿಡಿಯೋ ಹರಿಬಿಟ್ಟ ಯುವಕನನ್ನು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇದು, ತಿಂಡಿ ಅಂಗಡಿಯೊಂದರಲ್ಲಿ ವಿಡಿಯೋದಲ್ಲಿರುವ ಯುವಕ ಹಾಗೂ ಕಸ್ಟಮರ್ ನಡುವಿನ ಜಗಳಕ್ಕೆ ಸಂಬಂಧಿಸಿದ್ದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಳ್ಳಲಾಗುತ್ತದೆ. ಏಪ್ರಿಲ್ 7ರಂದು ಈ ಘಟನೆ ನಡೆದಿದ್ದು, ಯುವಕ ಈಗಾಗಲೇ ಬಿಹಾರ ಸೇರಿಕೊಂಡಿದ್ದಾನೆ. ಆತನಿಂದ ಇನ್ನಷ್ಟು ಮಾಹಿತಿಯನ್ನು ನಾವು ಕಲೆ ಹಾಕುತ್ತಿದ್ದೇವೆ ಎಂಬ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಯುವಕನ ಹೆಸರು ನಿತೀಶ್ ಕುಮಾರ್ ಯಾದವ್. ಈತ ಬೆಂಗಳೂರಿನ ಮಹಾಲಕ್ಷ್ಮೀ ಮೆಟ್ರೋ ಸ್ಟೇಷನ್ ಸಮೀಪದ ಎಸ್‌ಕೆಬಿ ಫುಡ್ ಪಾಯಿಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಮಹಿಳಾ ಗ್ರಾಹಕರು ಮತ್ತು ಬಿಹಾರಿ ಯುವಕನ ನಡುವಿನ ಸಂವಹನದ ಕೊರತೆಯಿಂದಾಗಿ ಜಗಳವಾಗಿದೆ. ಈ ಮಹಿಳೆಯರು ರೈಸ್ ಐಟಮ್‌ಗೆ ಆರ್ಡರ್ ಮಾಡಿದ್ದಾರೆ. ಆದರೆ, ರೈಸ್ ಐಟಮ್ ಅವರಿಗೆ ಇಷ್ಟವಾಗಿಲ್ಲ. ಆಗ ಬಿಹಾರ ಯುವಕನಿಗೆ ಹರಿದ 100 ರೂ. ನೋಟು ನೀಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈತನಿಗೆ ಕನ್ನಡ ಬರುವುದಿಲ್ಲ. ಅವರಿಗೆ ಹಿಂದಿ ಬರುವುದಿಲ್ಲ. ಇಬ್ಬರ ಮಧ್ಯೆ ಸಂವಹನದ ಕೊರತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Fact Check Body: ನಕಲಿ ಸುದ್ದಿ ತಡೆಗೆ ಫ್ಯಾಕ್ಟ್‌ ಚೆಕ್‌ ವಿಭಾಗ ಘೋಷಿಸಿದ ಕೇಂದ್ರ, ಇದರ ಕಾರ್ಯ ಹೇಗೆ? ಕ್ರಮ ಏನು?

ಭಾಷೆ ಕಾರಣಕ್ಕೆ ದೌರ್ಜನ್ಯ ಎಂದು ಉದ್ದೇಶಪೂರ್ವಕವಾಗಿಯೇ ಹೇಳಿದ ಯುವಕ

ಗ್ರಾಹಕ ವ್ಯವಹಾರಕ್ಕೆ ಸಂಬಂಧಿಸಿ ಜಗಳವನ್ನು ಬಿಹಾರಿ ಯುವಕ ಉದ್ದೇಶಪೂರ್ವಕವಾಗಿಯೇ ಭಾಷೆಯ ಕಾರಣಕ್ಕಾಗಿಯೇ ತನ್ನ ಮೇಲೆ ದೌರ್ಜನ್ಯ ನಡಿದಿದೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾನೆ. ಅಲ್ಲದೇ ಅಶ್ಲೀಲ ಪದಗಳನ್ನು ಬಳಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆಯುವುದಾಗಿ ಫುಡ್ ಪಾಯಿಂಟ್ ಮಾಲೀಕ ಕೂಡ ಇರಲಿಲ್ಲ ಎನ್ನಲಾಗಿದೆ.

Exit mobile version