Site icon Vistara News

Fact check: ಹುತಾತ್ಮ ಮಗನ ಕುರಿತು ಭಾವಪೂರ್ಣ ಕವಿತೆ ಬರೆದರೆ ಪ್ರಾಂಜಲ್‌ ತಾಯಿ?

Captain pranjal mother poem fact check

ನಮ್ಮ ಕಣ್ಣೆದುರೇ ಬೆಳೆದ ಈ ಕಂದ ಪ್ರಾಂಜಲನ
ಜೀವ ಕಸಿಯುವ ಹಕ್ಕ ನಿಮಗೆ ನೀಡಿದವರಾರು?
ಕೇಳಿಸದೇ ನಿಮಗೆ ಹೊತ್ತು ಹೆತ್ತ ತಾಯಿಯ ಆಕ್ರಂದನ?
ಕಾಣಿಸದೇ, ದುಃಖವ ನುಂಗಿ ಕಣ್ಣೀರು ತಡೆದುಕೊಂಡ ತಂದೆಯ ದುಮ್ಮಾನ?
ಅನಿಸುವುದಿಲ್ಲವೇ, ಕೈಹಿಡಿದ ಬಾಳ ಸಂಗಾತಿಯ ಎಣೆಯಿಲ್ಲದ ಗೋಳು?
– ಇದು ಜಮ್ಮು-ಕಾಶ್ಮೀರದ ರಜೌರಿಯ ಕಾಡಿನಲ್ಲಿ (Rajouri Encounter) ಅಡಗಿಕೊಂಡಿದ್ದ ಉಗ್ರಗಾಮಿಗಳ ಹುಟ್ಟಡಗಿಸಲು ಮುನ್ನುಗ್ಗುವ ವೇಳೆ ಹುತಾತ್ಮರಾದ ಕ್ಯಾಪ್ಟನ್‌ ಎಂ.ವಿ ಪ್ರಾಂಜಲ್‌ (Captain MV Pranjal) ಅವರ ಬಗ್ಗೆ ಬರೆಯಲಾದ ಭಾವುಕ ಕವನವೊಂದರ (Emotional Poem) ಕೆಲವು ಸಾಲು (Fact Check).

ಕಳೆದ ನವೆಂಬರ್‌ 22ರಂದು ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಈ 29 ವರ್ಷದ ತರುಣನಿಗೆ ಇಡೀ ಕನ್ನಡ ನಾಡು ಅಶ್ರುತರ್ಪಣ ಸಲ್ಲಿಸಿದೆ. ಬೆಂಗಳೂರಂತೂ ವೀರ ಯೋಧನಿಗೆ ಸೆಲ್ಯೂಟ್‌ ಹೊಡೆದು, ಪುಷ್ಟಾಂಜಲಿ ಸಲ್ಲಿಸಿ ಕಳುಹಿಸಿಕೊಟ್ಟಿದೆ. ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಆಡಳಿತ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್‌ (Pranjal Father M Venkatesh) ಮತ್ತು ಅನುರಾಧಾ ವೆಂಕಟೇಶ್‌ (Pranjal Mother Anuradha Venkatesh) ದಂಪತಿಯ ಏಕೈಕ ಪುತ್ರ ಪ್ರಾಂಜಲ್‌. ಸಣ್ಣ ವಯಸ್ಸಿನಲ್ಲೇ ಸೈನಿಕನಾಗುವ ಹಂಬಲ ಹೊತ್ತು ಅದನ್ನು ಸಾಕಾರಗೊಳಿಸಿಕೊಂಡಿದ್ದ ಎಲ್ಲರ ಮೆಚ್ಚಿನ ಅಕ್ಕರೆಯ ಹುಡುಗ. ಎರಡು ವರ್ಷದ ಹಿಂದೆ ಅದಿತಿ ಅವರನ್ನು ಕೈ ಹಿಡಿದು ಹೊಸ ಬಾಳಿನ ಹೊಸಿಲೂ ತುಳಿದಿದ್ದರು.

ಕ್ಯಾಪ್ಟನ್‌ ಫ್ಯಾಮಿಲಿ: ಕ್ಯಾ. ಪ್ರಾಂಜಲ್‌, ಅದಿತಿ ಪ್ರಾಂಜಲ್‌, ಅನುರಾಧಾ ವೆಂಕಟೇಶ್‌, ಎಂ ವೆಂಕಟೇಶ್‌

ಅವರು ಹುತಾತ್ಮರಾಗಿದ್ದಾರೆಂಬ ಸುದ್ದಿಯನ್ನು ಕೇಳುತ್ತಲೇ ಕುಟುಂಬ ವರ್ಗ, ಸ್ನೇಹಿತರು, ಶಿಕ್ಷಕರು ಕಣ್ಣೀರು ಹಾಕಿದ್ದರು. ಆದರೆ, ತಂದೆ ಎಂ.ವೆಂಕಟೇಶ್‌, ತಾಯಿ ಅನುರಾಧಾ ಮತ್ತು ಪತ್ನಿ ಅದಿತಿ ಮಾತ್ರ ಉಕ್ಕಿ ಬರುವ ಅಳುವನ್ನು ಗಂಟಲಲ್ಲೇ ಕಟ್ಟಿಕೊಂಡು ಸೈನಿಕನ ಮನೆಯವರು ತಾವು ಎಂಬುದನ್ನು ತೋರಿಸುವ ಸ್ಥಿತಪ್ರಜ್ಞತೆಯನ್ನು ಮೆರೆದಿದ್ದರು.

ಕ್ಯಾಪ್ಟನ್‌ ಗೆ ಅಂತಿಮ ನಮನ.. ಇದು ಕುಟುಂಬಕ್ಕೆ ಭಾವುಕ ಕ್ಷಣ

ಇದೀಗ ಎಲ್ಲ ಮುಗಿದು ಒಂದು ನೀರವ ಮೌನವಷ್ಟೇ ಉಳಿದೆ. ಬಹುಶಃ ಮನೆಯಲ್ಲಿ ಪ್ರಾಂಜಲ ನೆನಪುಗಳು ಹರಿದಾಡುತ್ತಿರಬಹುದು. ಒಬ್ಬನೇ ಮಗನನ್ನು ಕಳೆದುಕೊಂಡ ನೋವಿಗೆ ಪರಸ್ಪರ ಸಾಂತ್ವನ ಹೇಳುತ್ತಿರಬಹುದು. ಇದರ ನಡುವೆಯೇ ಆಕ್ರೋಶ, ಸಂಕಟಗಳು ನಾನಾ ರೂಪದಲ್ಲಿ ಪ್ರಕಟಗೊಳ್ಳುತ್ತಿರಬಹುದು.

ಇಂಥ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಭಾವಪೂರ್ಣ ಕವನ ಎಲ್ಲರ ಮನಸ್ಸನ್ನು ಹಿಂಡುತ್ತಿದೆ, ಉಗ್ರರ ಮೇಲೆ ಆಕ್ರೋಶ ಹೆಚ್ಚಿಸುತ್ತಿದೆ.

ಆ ಕವನ ಹೀಗಿದೆ..

ಓ ಪ್ರಕೃತಿಯೇ ಹಣ್ಣೆಲೆಗಳು ಸರದಿಯಲ್ಲಿರುವಾಗ
ನೀನೇಕೆ ಎಳೆ ಚಿಗುರ ಕಸಿದುಕೊಂಡೆ?
ಬೆಳೆದು ಹೆಮ್ಮರವಾಗಬೇಕಾದ ಚಿಕ್ಕ ಗಿಡವ
ಚಿವುಟಿ ನೀನೇನ ಪಡೆದುಕೊಂಡೆ?

ಓ ರಕ್ತ ಪಿಪಾಸು ಉಗ್ರಗಾಮಿಗಳೇ…..
ನಿಮಗೇಕೆ ಈ ಕೊನೆಯಿಲ್ಲದ ದಾಹ?
ಎಂದೆಂದಿಗೂ ಸಾಧಿಸಲಾಗದ, ನಿಮಗೆಂದಿಗೂ ದೊರಕದ
ನಮ್ಮೀ ಮಾತೃಭೂಮಿಯ ಮೇಲೆ ಏಕೀ ವ್ಯಾಮೋಹ?

ನಿಮ್ಮನು ಪ್ರಚೋದಿಸಿ ಕಳುಹಿಸಿದ ಸ್ವಾರ್ಥಿಗಳಿಗೆ
ಎಂದು ಆಗುವುದು ಜ್ಞಾನೋದಯ?
ಎಲ್ಲರಿಗೂ ಬದುಕುವ ಹಕ್ಕು ಪ್ರಕೃತಿಯು ನೀಡಿರುವಾಗ
ನಿಮಗೇಕೆ ಅತಿಕ್ರಮಿಸುವ ಈ ದುಷ್ಟ ಸಂಪ್ರದಾಯ?

ನಮ್ಮ ಕಣ್ಣೆದುರೇ ಬೆಳೆದ ಈ ಕಂದ ಪ್ರಾಂಜಲನ
ಜೀವ ಕಸಿಯುವ ಹಕ್ಕ ನಿಮಗೆ ನೀಡಿದವರಾರು?
ಕೇಳಿಸದೇ ನಿಮಗೆ ಹೊತ್ತು ಹೆತ್ತ ತಾಯಿಯ ಆಕ್ರಂದನ?
ಕಾಣಿಸದೇ, ದುಃಖವ ನುಂಗಿ ಕಣ್ಣೀರು ತಡೆದುಕೊಂಡ ತಂದೆಯ ದುಮ್ಮಾನ?
ಅನಿಸುವುದಿಲ್ಲವೇ, ಕೈಹಿಡಿದ ಬಾಳ ಸಂಗಾತಿಯ ಎಣೆಯಿಲ್ಲದ ಗೋಳು?

-ಇದು ತಾಯಿ ಹೃದಯವೊಂದರ ಸಂಕಟದಂತೆ ಕಾಣುತ್ತಿದೆ. ಉಗ್ರರನ್ನು ರಕ್ತಪಿಪಾಸುಗಳೆಂದು ಕರೆದ ಈ ಕವನ, ನಿಮಗೆಂದೂ ದೊರಕದ ನಮ್ಮೀ ಮಾತೃಭೂಮಿಯ ಮೇಲೆ ಯಾಕೆ ವ್ಯಾಮೋಹ ಎಂದು ಕೇಳುತ್ತದೆ. ಕೊನೆಗೆ ಮನೆಯವರ ಸಂಕಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಕೇಳಲಾಗಿದೆ.

ಹಾಗಿದ್ದರೆ ಈ ಕವನ ಬರೆದವರು ಯಾರು?

ಸಾಮಾಜಿಕ ಜಾಲತಾಣದಲ್ಲಿ ಈ ಕವನವನ್ನು ಓದಿದಾಗ ಮೂಡುವ ಭಾವವೇನೆಂದರೆ, ಇದು ತಾಯಿ ಕರುಳಿನ ರೋದನ ಮತ್ತು ಆಕ್ರೋಶ. ಈ ಕವನವನ್ನು ಪ್ರಾಂಜಲ್‌ ಅವರ ತಾಯಿ ಅನುರಾಧಾ ವೆಂಕಟೇಶ್‌ ಅವರು ಷೇರ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಅವರೇ ಬರೆದಿದ್ದಾರೆ ಎಂದು ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಪ್ರಾಂಜಲ್‌ ಅವರ ತಾಯಿ ಇದು ತಾನು ಬರೆದಿದ್ದಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Raja Marga Column : ಕ್ಯಾ. ಪ್ರಾಂಜಲ್‌ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!

ಪ್ರಾಂಜಲ್‌ ತಾಯಿ ವಿಸ್ತಾರ ನ್ಯೂಸ್‌ಗೆ ಹೇಳಿದ್ದೇನು?

ನಮ್ಮ ಮಗ ಪ್ರಾಂಜಲ್‌ ಕುರಿತು ಯಾರೋ ಬರೆದ ಭಾವಪೂರ್ಣ ಕವಿತೆಯನ್ನು ಓದಿರುವೆ. ಅದು ಖಂಡಿತವಾಗಿಯೂ ನಾನು ಬರೆದಿದ್ದಲ್ಲ. ಆದರೆ ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕವನ ನಾನೇ ಬರೆದಿದ್ದು ಎಂಬಂತೆ ನನ್ನ ಹೆಸರಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಹೀಗೆ ಮಾಡುವುದು ಸರಿಯಲ್ಲ ಎಂದು ಪ್ರಾಂಜಲ್‌ ಅವರ ತಾಯಿ ಅನುರಾಧಾ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕವಿತೆಯ ಭಾವಾರ್ಥ ಚೆನ್ನಾಗಿದೆ. ಹಾಗಾಗಿ ನಾನು ಇದನ್ನು ನನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ್ದೆ ಅಷ್ಟೆ. ಇದನ್ನು ಬರೆದ ಕವಿಗೆ ಕೃತಜ್ಞತೆ ಸಲ್ಲಿಸುವೆ. ಆದರೆ ಈ ಕವನದ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಕೊಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಇದು ಮಗನ ಕುರಿತು ಪ್ರಾಂಜಲ್‌ ತಾಯಿ ಬರೆದ ಭಾವಪೂರ್ಣ ಕವಿತೆ ಎಂದು ಪೇಸ್‌ಬುಕ್‌, ವಾಟ್ಸ್‌ಆಪ್‌ ಇತ್ಯಾದಿ ಕಡೆ ಪ್ರಸಾರ ಆಗುತ್ತಿರುವುದನ್ನು ಕಂಡು ನನಗೆ ಬೇಸರವಾಗಿದೆ. ನನ್ನ ಮಗನ ಕುರಿತು ಇರುವ ಜನರ ಅಭಿಮಾನಕ್ಕೆ ನಾವು ಚಿರಋಣಿ. ಆದರೆ ದಯವಿಟ್ಟು ಯಾರೂ ಯಾವುದೇ ರೀತಿಯ ತಪ್ಪು ಮಾಹಿತಿ ಹರಡಬೇಡಿ ಎಂದು ಅನುರಾಧಾ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.

Exit mobile version