ವಿಜಯಪುರ: ಬದುಕಿರುವಾಗಲೇ ವೃದ್ಧೆಯೊಬ್ಬರಿಗೆ ಮರಣ ಪ್ರಮಾಣ ಪತ್ರವನ್ನು (Fake Death Certificate) ಕೊಟ್ಟಿರುವ ಘಟನೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಾವಿತ್ರಿ ರಾಮಗುಂಡ ಮಾಳಿ (60) ಎಂಬುವವರು ತಮ್ಮ ತಾಯಿ ಸಾಂಯವ್ವರ ಮರಣ ಪ್ರಮಾಣ ಪತ್ರವನ್ನು ತೆಗೆಸಲು ಹೋಗಿದ್ದರು. ಹೀಗೆ ಹೋದವರಿಗೆ ಆಘಾತ ಕಾದಿತ್ತು. ಕಾರಣ ಜೀವಂತವಾಗಿದ್ದ ಸಾವಿತ್ರಿ ಅವರಿಗೆ ಅವರದ್ದೆ ಮರಣ ಪ್ರಮಾಣ ಪತ್ರವನ್ನು ಕೊಟ್ಟಿದ್ದಾರೆ. ತಾವು 22 ವರ್ಷದ ಹಿಂದೆಯೇ ಮೃತಪಟ್ಟಿರುವ ಬಗ್ಗೆ ದಾಖಲೆ ಇರುವುದನ್ನು ಕಂಡು ಹೌಹಾರಿದ್ದಾರೆ.
11-03-2001ರಂದು ಮರಣ ಹೊಂದಿದ್ದಾರೆಂದು ಮರಣ ಪ್ರಮಾಣ ಪತ್ರವನ್ನು ಅಧಿಕಾರಿಗಳು ನೀಡಿದ್ದಾರೆ. ಕಳೆದ ಜನವರಿ 2ರಂದು ಮರಣ ಪ್ರಮಾಣ ಪತ್ರ ನೋಂದಣಿ ಆಗಿದ್ದು, 5ರಂದು ಅನುಮೋದನೆ ಆಗಿದೆ. ಸಾವಿತ್ರಿ ಹೆಸರಲ್ಲಿ 12 ಎಕೆರೆ ಜಮೀನಿದೆ. ಈ ಆಸ್ತಿ ವಿಚಾರವಾಗಿ ಸಾವಿತ್ರಿ ಹಾಗೂ ಅವರ ಚಿಕ್ಕಪ್ಪನ ಮಗನಾದ ಅಶೋಕ್ ಮಧ್ಯೆ ವ್ಯಾಜ್ಯ ನಡೆಯುತ್ತಿದೆ. ಹೀಗಿರುವಾಗ ಆಸ್ತಿ ಲಪಟಾಯಿಸಲು ಕೋರ್ಟ್‌ಗೆ ಸಾವಿತ್ರಿ ಸತ್ತಿದ್ದಾಳೆ ಎಂದು ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ಸಲ್ಲಿಸಲಾಗಿದೆ ಎಂದು ಈಗ ಸಾವಿತ್ರಿ ಆರೋಪಿಸಿದ್ದಾರೆ.
ಇದನ್ನೂ ಓದಿ: Leopard Attack: ಕೊಟ್ಟಿಗೆಗೆ ನುಗ್ಗಿ ಹತ್ತಕ್ಕೂ ಹೆಚ್ಚು ಕುರಿ, ಮೇಕೆಗಳ ಬಲಿ ಪಡೆದ ಚಿರತೆಗಳು
ಕಾನೂನು ಸೇವಾ ಪ್ರಾಧಿಕಾರ ಮೊರೆ
ನ್ಯಾಯಕ್ಕಾಗಿ ಅಲೆದಾಡುತ್ತಿರುವ ಸಾವಿತ್ರಿ ಇದೀಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮೊರೆ ಹೋಗಿದ್ದಾರೆ. ಇತ್ತ ನ್ಯಾಯವಾದಿ ಮಲ್ಲಿಕಾರ್ಜುನ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿದರ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.