ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್‌ವೊಂದನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಟಾರ್ಗೆಟ್ ಮಾಡಿ ಆರ್ಯುವೇದ ಚಿಕಿತ್ಸೆ ನೀಡುವ ನೆಪದಲ್ಲಿ ಲಕ್ಷ ಲಕ್ಷ ಪಡೆದು ವಂಚಿಸುತ್ತಿದ್ದ ನಕಲಿ ವೈದ್ಯರ (Fake Doctor Arrested) ತಂಡವನ್ನು ಬಂಧಿಸಿದ್ದಾರೆ.
ನಕಲಿ ನಾಟಿ ವೈದ್ಯನಾಗಿರುವ ಮೊಹಮ್ಮದ್ ಸಮೀನ್ ಜತೆಗೆ ಸಹಾಯಕರಾದ ಸೈಫ್ ಅಲಿ ಹಾಗೂ ಮೊಹಮ್ಮದ್ ರಹೀಸ್ ಮೂಲತಃ ರಾಜಸ್ಥಾನದವರು. ಇವರು ತಾವು ನಾಟಿ ವೈದ್ಯರೆಂದು ಬಿಂಬಿಸುತ್ತಿದ್ದರು. ಯಾರಾದರೂ ಇವರ ಮಾತಿಗೆ ಮರುಳಾದರೆ ಮುಗಿಯಿತು. ಚಿಕಿತ್ಸೆ ಕೊಡುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದರು.
ಹೀಗೆ ವಿಲ್ಸನ್ ಗಾರ್ಡನ್ ನಿವಾಸಿಯಾಗಿರುವ ಪಂಕಜ್ ರಾಥೋಡ್ ಎಂಬುವವರ ತಾಯಿ (70) ಕಾಲು ನೋವಿನಿಂದ ಬಳಲುತ್ತಿದ್ದರು. ಈ ವಿಚಾರವನ್ನು ತಿಳಿದುಕೊಂಡ ಆರೋಪಿಗಳು ಮೊದಲು ಬನ್ಸಾಲ್ ಎಂಬ ಹೆಸರಿನಲ್ಲಿ ಪಂಕಜ್ ತಂದೆಯನ್ನು ಸಂಪರ್ಕಿಸಿ ಕಾಲು ನೋವಿಗೆ ಚಿಕಿತ್ಸೆ ನೀಡುವ ಮಲ್ಲಿಕ್ ಎಂಬ ವೈದ್ಯರು ತಮಗೆ ಗೊತ್ತಿದ್ದಾರೆ ಎಂದು ತಿಳಿಸಿ ನಂಬರ್ ನೀಡಿದ್ದಾರೆ.
ಅದರಂತೆ ನಕಲಿ ವೈದ್ಯನಿಗೆ ಕರೆ ಮಾಡಿ ಪಂಕಜ್ ಡಿಸೆಂಬರ್ 16ರಂದು ಮನೆಗೆ ಕರೆಸಿಕೊಂಡಿದ್ದರು. ಮಲ್ಲಿಕ್ ಹೆಸರಿನಲ್ಲಿ ಮನೆಗೆ ಬಂದು ಪರಿಶೀಲಿಸಿದ್ದ ಮೊಹಮ್ಮದ್ ಸಮೀನ್ ಕಾಲಿನಲ್ಲಿ ಕೀವು ಇದ್ದು ಒಂದು ಹನಿ ಹೊರತೆಗೆಯಲು 4 ಸಾವಿರ ಖರ್ಚಾಗುತ್ತದೆ ಎಂದು ನಂಬಿಸಿದ್ದ. ಆರೋಪಿಯ ಮಾತಿನಂತೆ ಪಂಕಜ್ ಕುಟುಂಬ ಎಂಟು ಲಕ್ಷ ಹಣವನ್ನು ಚಿಕಿತ್ಸಾ ವೆಚ್ಚವಾಗಿ ನೀಡಿತ್ತು. ಅಸಲಿಗೆ ಯಾವುದೇ ಚಿಕಿತ್ಸೆ ನೀಡದೇ, ಹಣ ಪಡೆದು ಆರೋಪಿಗಳು ಪರಾರಿಯಾಗಿದ್ದರು. ಮೋಸ ಹೋದ ಪಂಕಜ್ ರಾಥೋಡ್ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಸ್ತೆ ಬದಿ ಶೆಡ್ ಹಾಕಿಕೊಂಡಿದ್ದ ವಂಚಕರನ್ನು ಬಂಧಿಸಿದ ಖಾಕಿ ಪಡೆ
ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಆರಂಭಿಸಿದ್ದ ವಿಲ್ಸನ್ ಗಾರ್ಡನ್ ಪೊಲೀಸರು ನೆಲಮಂಗಲ ಬಳಿ ರಸ್ತೆ ಬದಿಯಲ್ಲಿ ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ಶೆಡ್ ಹಾಕಿಕೊಂಡಿದ್ದ ಮೊಹಮ್ಮದ್ ಸಮೀನ್, ಸೈಫ್ ಅಲಿ ಹಾಗೂ ಮೊಹಮ್ಮದ್ ರಹೀಸ್‌ನನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಕಾರು 3 ಬೈಕ್ 3.50 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Theft Case | ದೇವರ ಹುಂಡಿಗೆ ಕನ್ನ ಹಾಕಿದ ಖದೀಮರು; ಕೀ ಹೊರಗಿಟ್ಟು ಟೂರಿಗೆ ಹೋದವರ ಮನೆ ದೋಚಿದ ಚೋರರು