ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ನೋಡಬೇಕು ಎಂಬುವುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಆಸೆ. ಇದನ್ನು ಈಡೇರಿಸಿಕೊಳ್ಳಲು ಕೆಲವರು ಟಿಕೆಟ್ ಸಿಕ್ಕಿಲ್ಲ ಎಂದು ಬ್ಲ್ಯಾಕ್‌ನಲ್ಲಿ ದುಪ್ಪಟ್ಟು ಹಣ ಕೊಟ್ಟು ಟಿಕೆಟ್ ಖರೀದಿಸುತ್ತಾರೆ. ಆದರೆ, ಬ್ಲ್ಯಾಕ್‌ನಲ್ಲಿ ಐಪಿಎಲ್ ಟಿಕೆಟ್ ತೆಗೆದುಕೊಳ್ಳುವ ಮುನ್ನ ಎಚ್ಚರ ಅಗತ್ಯ. ಏಕೆಂದರೆ ಐಪಿಎಲ್ ನಕಲಿ ಟಿಕೆಟ್ ದಂಧೆ ಬೆಳಕಿಗೆ ಬಂದಿದ್ದು, ಅಸಲಿ ಟಿಕೆಟ್ ಎಂದು ನಂಬಿ ಬ್ಲ್ಯಾಕ್‌ನಲ್ಲಿ ಟಿಕೆಟ್ (IPL Fake Tickets) ಪಡೆದರೆ ಮೋಸ ಹೋಗುವುದಂತೂ ಗ್ಯಾರಂಟಿ.
ಹೌದು, ಕ್ರಿಕೆಟ್ ಮ್ಯಾಚ್ ನೋಡಲು ಟಿಕೆಟ್ ಖರೀದಿಗಾಗಿ ಯಾರು ರಿಸ್ಕ್ ತಗೊಂಡು ಕ್ಯೂನಲ್ಲಿ ನಿಲ್ಲುತ್ತಾರೆ. 1 ಸಾವಿರ ಎಕ್ಸ್‌ಟ್ರಾ ಅಮೌಂಟ್ ಕೊಟ್ಟರೆ ಬ್ಲಾಕ್‌ನಲ್ಲಿ ಎಷ್ಟು ಟಿಕೆಟ್ ಬೇಕಾದರೂ ಸಿಗುತ್ತೆ ಅಂತ ಬ್ಲ್ಯಾಕ್ ಟಿಕೆಟ್ ಮೊರೆ ಹೋದರೆ ನಿಮ್ಮ ಕ್ರಿಕೆಟ್ ನೋಡೋ ಕನಸಿಗೆ ಬ್ರೇಕ್ ಬಿತ್ತು ಅಂತಲೇ ಅರ್ಥ. ಅದರಲ್ಲೂ ಸ್ನೇಹಿತರ ಜತೆ ಹೋದರೆ ನಿಮ್ಮ ಮರ್ಯಾದೆ ಸ್ಟೇಡಿಯಂ ಫುಟ್ ಪಾತ್ ಮೇಲೆಯೇ ಕಳೆದು ಹೋಗುತ್ತದೆ. ಹೀಗಾಗಿ ಟಿಕೆಟ್ ಖರೀದಿ ಮಾಡುವ ಮುನ್ನಾ ಎಚ್ಚರಿಕೆ ಅಗತ್ಯವಾಗಿದೆ.
16ನೇ ಆವೃತ್ತಿ ಐಪಿಎಲ್ ಕ್ರಿಕೆಟ್ ಕ್ರೇಜ್ ಜೋರಾಗಿರುವುದರಿಂದ ಸುಲಭವಾಗಿ ಹಣ ಮಾಡುವುದಕ್ಕೆ ಕೆಲ ಕಿಡಿಗೇಡಿಗಳು ಬ್ಲ್ಯಾಕ್ ಟಿಕೆಟ್ ದಂಧೆ ಮಾಡಿದ್ದರೆ, ಇನ್ನು ಕೆಲವರು ತೆಗೆದುಕೊಳ್ಳುವ ಒಂದು ಅಸಲಿ ಟಿಕೆಟ್ ಅನ್ನೇ ಕಲರ್ ಪ್ರಿಂಟ್ ತೆಗೆದು ನೂರಾರು ಕ್ರಿಕೆಟ್ ಪ್ರಿಯರಿಗೆ ಮಾರಿ ವಂಚಿಸಿದ್ದಾರೆ. ಇಂತಹದೊಂದು ತಂಡ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಇದೆ. ಈ ಖದೀಮರು ಏಪ್ರಿಲ್ 2 ರಂದು ನಡೆದ ಆರ್‌ಸಿಬಿ ಹಾಗೂ ಮುಂಬೈ ತಂಡಗಳ ಕ್ರಿಕೆಟ್ ಪಂದ್ಯಾವಳಿ ವೇಳೆ ಬ್ಲ್ಯಾಕ್ ಟಿಕೆಟ್ ಹೆಸರಲ್ಲಿ ನಕಲಿ ಟಿಕೆಟ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಬ್ಲ್ಯಾಕ್‌ನಲ್ಲಿ ಟಿಕೆಟ್ ಪಡೆದು ಏಪ್ರಿಲ್ 2 ರಂದು ಖುಷಿಯಿಂದ ಸ್ಟೇಡಿಯಂನತ್ತ ಹೆಜ್ಜೆ ಹಾಕಿದವರನ್ನು ಸಿಬ್ಬಂದಿ ತಡೆದಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಷಿನ್‌ನಲ್ಲಿ ಟಿಕೆಟ್ ಚೆಕ್ ಮಾಡಿದಾಗ ಇನ್ ವ್ಯಾಲಿಡ್ ಅಂತ ಬಂದಿದ್ದು, ನಕಲಿ ಟಿಕೆಟ್ ಅಂತ ತಿಳಿದು ಬಂದಿದೆ. ಈ ಸಂಬಂಧ ಕ್ರಿಕೆಟ್ ಆಯೋಜಕರು ನೀಡಿದ ದೂರಿನ ಮೇಲೆ ಜಿತೇಂದ್ರ ಹಾಗೂ ಶಿವಕುಮಾರ್ ಎಂಬುವರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ವಿಚಾರಣೆ ವೇಳೆ ಆರೋಪಿಗಳು ಒಂದ್ ಟಿಕೆಟ್ ಅನ್ನು 20 ಟಿಕೆಟ್‌ಗಳ ರೀತಿ ಕಲರ್ ಪ್ರಿಂಟ್ ತೆಗೆದಿರುವುದು, 1200 ರೂಪಾಯಿ ಟಿಕೆಟ್ ಅನ್ನ 3000 ಸಾವಿರಕ್ಕೆ, 2500 ರೂಪಾಯಿ ಟಿಕೆಟ್ ಅನ್ನ 5 ಸಾವಿರಕ್ಕೆ ಮಾರಾಟ ಮಾಡಿದ್ದಾರೆ ಎಂಬುವುದು ತಿಳಿದುಬಂದಿದೆ. ಸರಿ ಸುಮಾರು ಮೂರ್ನಾಲ್ಕು ಸಾವಿರ ಟಿಕೆಟ್‌ಗಳನ್ನು ಹೀಗೆ ಮಾರಾಟ ಮಾಡಿದ್ದಾರೆಂದು ತಿಳಿದು ಬಂದಿದೆ. ಆರೋಪಿಗಳ ಈ ನಕಲಿ ಟಿಕೆಟ್ ದಂಧೆಯಿಂದ ಅದೆಷ್ಟೋ ಮಂದಿ ಕ್ರಿಕೆಟ್ ನೋಡುವ ಆಸೆಯಿಂದ ವಂಚಿತರಾಗಿದ್ದು, ಕೈ ಸುಟ್ಟುಕೊಂಡಿದ್ದಾರೆ. ಹೀಗಾಗಿ ಕ್ರಿಕೆಟ್ ಮ್ಯಾಚ್ ನೋಡಲು ಟಿಕೆಟ್ ತೆಗೆದುಕೊಳ್ಳುವ ಮುನ್ನ ಕ್ರಿಕೆಟ್ ಪ್ರಿಯರು ಸ್ವಲ್ಪ ಎಚ್ಚರ ವಹಿಸುವುದು ಅಗತ್ಯವಾಗಿದೆ.