ಬೆಂಗಳೂರು: ಸರ್ಕಾರಿ ಕೆಲಸವೆಂದರೆ ಅಲ್ಲಿ ವರ್ಗಾವಣೆ ಕಟ್ಟಿಟ್ಟಿದ್ದು. ಆದರೆ ಕೆಲವು ಸರ್ಕಾರಿ ನೌಕರರು ಈ ವರ್ಗಾವಣೆಯನ್ನು ಗೋಳು ಎಂದು ಭಾವಿಸಿ, ಅದರಿಂದ ಪಾರಾಗಲು ಪ್ರಯತ್ನ ಮಾಡುತ್ತಾರೆ. ಯಾರದ್ದಾದರೂ ಪ್ರಭಾವದಿಂದ ವರ್ಗಾವಣೆ (Police Transfer)ಯಿಂದ ಪಾರಾಗುವುದು/ ತಮಗೆ ಬೇಕಾದಲ್ಲೇ ಟ್ರಾನ್ಸ್ಫರ್ ಮಾಡಿಸಿಕೊಳ್ಳುವ ಕೆಲಸಕ್ಕೆ ಕೈಹಾಕುತ್ತಿರುತ್ತಾರೆ. ಇದಕ್ಕಾಗಿ ಅವರು ಹಣ ಖರ್ಚು ಮಾಡಲೂ ಸಿದ್ಧರಾಗಿರುತ್ತಾರೆ. ಇದನ್ನೇ ಮತ್ತೆ ಕೆಲವರು ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅಂದರೆ ಟ್ರಾನ್ಸ್ಫರ್ ಮಾಡಿಸಿಕೊಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು, ವಂಚಿಸುತ್ತಾರೆ. ಇದೀಗ ಅಂಥದ್ದೇ ಒಂದು ಕೇಸ್ ಬೆಂಗಳೂರಿನಿಂದ ವರದಿಯಾಗಿದೆ. ಐಪಿಎಸ್ ಅಧಿಕಾರಿಯ ಸೋಗಿನಲ್ಲಿ, ವರ್ಗಾವಣೆಯ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿಗೇ ವಂಚಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈತನ ಹೆಸರು ಭುವನ್ ವಿಶುಕುಮಾರ್. ಆದರೆ ತನ್ನನ್ನು ತಾನು ಅರ್ಜುನ್ ಐಪಿಎಸ್ ಎಂದೇ ಪರಿಚಯಿಸಿಕೊಳ್ಳುತ್ತಿದ್ದ. ನಾನೊಬ್ಬ ಹಿರಿಯ ಐಪಿಎಸ್ ಅಧಿಕಾರಿ. ಪೊಲೀಸ್ ಇಲಾಖೆಯಲ್ಲಿ ಯಾರಿಗೇ ವರ್ಗಾವಣೆ ಬೇಕಾದರೆ ಅಥವಾ ಟ್ರಾನ್ಸ್ಫರ್ ವಿಷಯದಲ್ಲಿ ಏನೇ ಸಹಾಯ ಬೇಕಾದರೂ ಮಾಡಿಕೊಡುತ್ತೇನೆ ಎನ್ನುತ್ತಿದ್ದ. ಹಣ ಪಡೆದ ಬಳಿಕ ಒಂದೊಂದೇ ಸಬೂಬು ಹೇಳಿ ಮುಂದೂಡುತ್ತ ಬರುತ್ತಿದ್ದ. ಹೀಗೆ ಹಲವು ಪೊಲೀಸರಿಂದ ಹಣ ಪಡೆದಿದ್ದಾರೆ. ವಂಚಿಸಿಯೇ ಕೋಟಿ ಕೋಟಿ ಹಣ ಗಳಿಸಿದ್ದ. ಇತ್ತೀಚೆಗೆ ರಾಘವೇಂದ್ರ ಎಂಬುವರಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ನಂಬಿಸಿದ್ದ. ಬಳಿಕ ನನಗೆ ಹಣದ ಅವಶ್ಯಕತೆ ಇದೆ. ಅಕೌಂಟ್ಗೆ ಹಣ ಹಾಕಿಸಿಕೊಂಡರೆ ನನಗೆ ಪ್ರಾಬ್ಲಂ ಆಗತ್ತೆ. ಹೀಗಾಗಿ ಹಣವನ್ನು ನಗದು ರೂಪದಲ್ಲಿ ಕೊಡಿ ಎಂದು ಹೇಳಿ, ಹಂತಹಂತವಾಗಿ 25ಲಕ್ಷ ರೂಪಾಯಿಯನ್ನು ರಾಘವೇಂದ್ರ ಅವರಿಂದ ಪಡೆದಿದ್ದ.
ಇದನ್ನೂ ಓದಿ: Free Bus Travel: ಉಚಿತ ಪ್ರಯಾಣಕ್ಕೆ ಪೊಲೀಸ್ ಕಟ್ಟುನಿಟ್ಟಿನ ಕಣ್ಗಾವಲು; ಜಗಳ, ಸಂಘರ್ಷಕ್ಕಿಲ್ಲ ಆಸ್ಪದ
ಮೂರು ತಿಂಗಳಲ್ಲಿ ಹಣವನ್ನು ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ ಎಂದಿದ್ದ ಭುವನ್ ವಿಶುಕುಮಾರ್ ಅಲಿಯಾಸ್ ಅರ್ಜುನ್ ಒಂದಲ್ಲ ಒಂದು ನೆಪ ಹೇಳಿ ಮುಂದೂಡುತ್ತಿದ್ದ. ಇದರಿಂದ ಅನುಮಾನಗೊಂಡ ರಾಘವೇಂದ್ರ ಅವರು ಕಾಟನ್ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಅದಕ್ಕೂ ಮೊದಲೇ ಈ ಭುವನ್ ಬಗ್ಗೆ ಪೊಲೀಸ್ ವಲಯದಲ್ಲಿ ಮಾತುಕತೆ ಶುರುವಾಗಿತ್ತು. ದೂರು ಬಂದ ತಕ್ಷಣ ಎಫ್ಐಆರ್ ದಾಖಲಿಸಿಕೊಂಡು, ಕಾರ್ಯಾಚರಣೆ ಶುರು ಮಾಡಿದ್ದರು. ಮತ್ತೊಂದೆಡೆ ಈ ಭುವನ್ ಬಗ್ಗೆ ಸಿಸಿಬಿ ಪೊಲೀಸರಿಗೂ ಮಾಹಿತಿ ಹೋಗಿತ್ತು. ಅವರೂ ಭುವನ್ ಬಂಧನಕ್ಕೆ ಕಾಯುತ್ತಿದ್ದರು. ಇದೇ ರಾಘವೇಂದ್ರ ಅವರಿಂದ ಕರೆ ಮಾಡಿಸಿ, ಹಣ ಕೊಡುವುದಾಗಿ ಹೇಳಿಸಿ ಭುವನ್ನನ್ನು ಕರೆದು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಭುವನ್ ವಿಶುಕುಮಾರ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.