ಬೆಂಗಳೂರು: ಸ್ಟಡಿ ಸೆಂಟರ್ ಹೆಸರಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ (Fake Marks Card) ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಪ್ರಭುರಾಜ್, ಮೈಲಾರಿ, ಮೊಹಮ್ಮದ್ ತೈಹೀದ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಎಸ್ಎಸ್ಎಲ್‌ಸಿ, ಪಿಯುಸಿ ಹಾಗೂ ಪದವಿ ಅಂಕಪಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಹುಬ್ಬಳ್ಳಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (KIOS) ಹೆಸರಿನಲ್ಲಿ ಈ ಅಂಕಪಟ್ಟಿಗಳನ್ನು ಪಡೆದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹುಬ್ಬಳ್ಳಿಯಲ್ಲಿರುವ ಕೆಐಓಎಸ್ (KIOS) ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸ್ಟಡಿ ಸೆಂಟರ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಟಡಿ ಸೆಂಟರ್ ಮೂಲಕ 10,12, ಪದವಿ ಮಾರ್ಕ್ಸ್ ಕಾರ್ಡ್ ತಯಾರು ಮಾಡಿ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: Operation Kaveri: ಸುಡಾನ್‌ನಲ್ಲಿ 68 ಕನ್ನಡಿಗರು ಅತಂತ್ರ; ನೆರವಿಗೆ ಬಾರದ ಆಪರೇಷನ್ ಕಾವೇರಿ ಟೀಂ
ದಾಳಿ ವೇಳೆ 70 ಅಂಕಪಟ್ಟಿಗಳು, ನೋಂದಣಿ ಸಂಖ್ಯೆ ನಮೂದಿಸದ 190 ಅಂಕಪಟ್ಟಿ ಹಾಗೂ ಯಾವುದೇ ಮಾಹಿತಿ ಇಲ್ಲದೆ 7,100 ಅಂಕಪಟ್ಟಿ, 5,500 ಉತ್ತರ ಪ್ರತಿಗಳು, 25 ಅಡ್ಮಿಷನ್ ರಿಜಿಸ್ಟರ್‌ಗಳು, ಕಲರ್ ಪ್ರಿಂಟ್, ಜೆರಾಕ್ಸ್ ಯಂತ್ರ ವಶಕ್ಕೆ ಪಡೆಯಲಾಗಿದೆ. ಸದ್ಯ, ನಕಲಿ ಅಂಕಪಟ್ಟಿ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.