Site icon Vistara News

Fact Check Unit: ಫೇಕ್‌ ನ್ಯೂಸ್‌ ಮೂಲವನ್ನು ಬೇರು ಸಮೇತ ಕತ್ತರಿಸಿ: ಸಿದ್ದರಾಮಯ್ಯ

CM Siddaramaiah

#image_title

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹಾವಳಿ ಮಿತಿ ಮೀರಿದೆ. ಈ ಸುಳ್ಳು ಸುದ್ದಿ (Fact Check Unit) ಮೂಲ ಪತ್ತೆ ಹಚ್ಚಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ಮಂಗಳವಾರ ಗೃಹ ಸಚಿವ ಜಿ.ಪರಮೇಶ್ವರ್ ಅವರ ಜತೆಗೂ ಈ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಫೇಕ್ ನ್ಯೂಸ್‌ ಹಾವಳಿ ಹೆಚ್ಚಾಗಿತ್ತು. ಈ ಬಾರಿ ಕೂಡ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮಾಮೂಲಿಯಂತೆ ಫೇಕ್ ನ್ಯೂಸ್‌ಗಳನ್ನು ಹೆಚ್ಚೆಚ್ಚು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆರಂಭದಲ್ಲೇ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಬೇರು ಸಮೇತ ಕತ್ತರಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಸೂಚಿಸಿದ್ದಾರೆ.

ಮಕ್ಕಳ ಕಳ್ಳರು, ಗೋಮಾಂಸ ಸಾಗಿಸುವವರು…ಇತ್ಯಾದಿ ಸುಳ್ಳು ಸುದ್ದಿಗಳನ್ನು ಹರಡಿಸಿ ಕಳೆದ ಬಾರಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಈ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಮತ್ತು ಸಂಘ ಪರಿವಾರವನ್ನು ಸ್ಪಷ್ಟವಾಗಿ ಮತ್ತು ಅಷ್ಟೆ ನಿಷ್ಠುರವಾಗಿ ತಿರಸ್ಕರಿಸಿದ್ದಾರೆ. ಆದರೆ ದೇಶದ ಪ್ರಜಾಪ್ರಭುತ್ತದ ಉಳಿವಿಗೆ ಅತ್ಯಂತ ಮಹತ್ವದ್ದಾಗಿರುವ 2024ರ ಲೋಕಸಭಾ ಚುನಾವಣೆಗೆ ನಾವು ಸಜ್ಜಾಗುತ್ತಿರುವ ಹೊತ್ತಿನಲ್ಲಿ ಸುಳ್ಳು ಸುದ್ದಿ, ವದಂತಿಗಳ ಮೂಲಕ ಗುಂಪುಹಲ್ಲೆ, ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯಬಹುದು ಎನ್ನುವ ಸೂಚನೆಗಳೂ ಕಾಣಿಸುತ್ತಿವೆ. ಹೀಗಾಗಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಕಮಿಷನರೇಟ್, ಪ್ರಧಾನ ಕಚೇರಿಯಲ್ಲಿ ಫ್ಯಾಕ್ಟ್ ಚೆಕ್ ಯುನಿಟ್‌

ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲೇ ಒಂದು ತಾಂತ್ರಿಕ ತಂಡ ಫೇಕ್ ನ್ಯೂಸ್‌ ಪತ್ತೆ ಹಚ್ಚಿ, ಫ್ಯಾಕ್ಟ್ ಚೆಕ್ ಮಾಡಿ ಜನರನ್ನು ಎಚ್ಚರಿಸುವ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫ್ಯಾಕ್ಟ್ ಚೆಕ್ ಮಾಡುವುದನ್ನು ಬಂದ್ ಮಾಡಿಸಿದೆ. ಇದನ್ನು ಮತ್ತೆ ಆರಂಭಿಸಬೇಕು. ಸೈಬರ್ ಪೊಲೀಸರು ಫೇಕ್ ನ್ಯೂಸ್‌ಗಳ ಮೂಲಗಳನ್ನು ಪತ್ತೆಹಚ್ಚಲು ಸರ್ವಸನ್ನದ್ಧವಾಗಿ ಕೆಲಸ ಮಾಡಬೇಕು. ಪ್ರತಿ ತಿಂಗಳು ಈ ಬಗ್ಗೆ ವರದಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Exit mobile version