Site icon Vistara News

Fake Number Plates | ಒಂದಲ್ಲ, ಎರಡಲ್ಲ, ಮೂರು ವಾಹನಗಳಿಗೆ ಒಂದೇ ಸಂಖ್ಯೆ!

Fake Number Plates

ಬೆಂಗಳೂರು: ವಾಹನಗಳನ್ನು ಗುರುತಿಸಲು ಇರಬಹುದಾದ ಒಂದೇ ಐಡೆಂಟಿಟಿ ಅಂದರೆ ಅದರ ನಂಬರ್‌. ಆದರೆ ಆ ನಂಬರ್​ಗಳು ನಕಲಿಯಾಗಿ (Fake Number Plates) ನಗರದೆಲ್ಲೆಡೆ ತಿರುಗಾಡುತ್ತಿವೆ. ವಾಹನ ಖರೀದಿಸಿ ಆರ್‌ಟಿಒದಲ್ಲಿ ನೋಂದಣಿ ಮಾಡಿದ ನಂತರ ಆ ನಂಬರ್​ ಆಯಾ ವಾಹನಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಆದರೆ ಈಗ ಒಂದೇ ನಂಬರಿನ ಮೂರ್ನಾಲ್ಕು ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ.

ನಕಲಿ ನಂಬರ್‌ ಪ್ಲೇಟ್‌ ವಾಹನಗಳು ನಡೆಸುವ ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಚಟುವಟಿಕೆಗಳಿಂದಾಗಿ ಮೂಲ ವಾಹನದ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಪೊಲೀಸರಿಗೆ, KA 03 JY 4152 ನಂಬರಿನ ಮೂರು ವಾಹನಗಳು ನಗರದಲ್ಲಿ ಓಡಾಡುತ್ತಿವೆ ಎಂಬ ಮಾಹಿತಿ ಸಿಕ್ಕಿತ್ತು. ಇವುಗಳಲ್ಲಿ ಎರಡು ಮೊಪೆಡ್‌ಗಳಾದರೆ, ಒಂದು ಸುಝುಕಿ ಗ್ಲಿಟ್ಜರ್‌ ಬೈಕ್‌. ಸಂಚಾರ ನಿಯಮ ಉಲ್ಲಂಘನೆ ಆಗಿರುವ ಕುರಿತು ಮೂಲ ಮಾಲೀಕನಿಗೆ ನೋಟಿಸ್‌ ಬಂದದ್ದನ್ನು ಪರಿಶೀಲಿಸಿದ ನಂತರ ಇತರೆ ಹನಗಳ ಅಕ್ರಮ ಸಂಚಾರ ಬೆಳಕಿಗೆ ಬಂತು.

ಇದನ್ನೂ ಓದಿ | ನಿಮ್ಮದೇ ಗಾಡಿ ನಂಬರ್‌ ಇರೋ ಬೇರೆ ವಾಹನ ಇವೆಯೆ? ನಕಲಿ ನಂಬರ್‌ ಪ್ಲೇಟ್‌ ಹಾವಳಿ ಹೆಚ್ಚಾಗಿದೆ ಎಚ್ಚರ!

ಖರೀದಿಸಿದವರ ಪೇಚಾಟ

ಈ ಹಿಂದೆ ನಕಲಿ ನಂಬರ್‌ ಪ್ಲೇಟ್‌ ಮಾಡುವವರು, ನಿರಂತರ ಅಪರಾಧ ಪ್ರಕರಣಗಳಲ್ಲಿ ತೊಡಗಿರುವವರೇ ಆಗಿರುತ್ತಿದ್ದರು. ಪೊಲೀಸರು ಅಂತಹ ವ್ಯಕ್ತಿಗಳ ಮೇಲೆ ಮಾತ್ರ ಗಮನ​ವಹಿಸುತ್ತಿದ್ದರು. ಆದರೆ, ಈಗ ನಕಲಿ ನಂಬರ್‌ ಪ್ಲೇಟ್‌ ಮಾಡುವವರ ಕಾಟದಿಂದಾಗಿ ತಮಗೆ ಅರಿವಿಲ್ಲದೆ ಮೋಸ ಹೋಗುವ ಮಾಲೀಕರೂ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗಿದೆ.

ಕೇವಲ ನಂಬರ್‌ ಪ್ಲೇಟ್‌ ಮಾತ್ರವಲ್ಲದೆ ಆರ್‌ಸಿ ಪುಸ್ತಕವನ್ನೂ ಕಳ್ಳರು ನಕಲು ಮಾಡುತ್ತಿದ್ದಾರೆ. ಈ ದಾಖಲೆಗಳು ಅಸಲಿ ಎಂದು ನಂಬುವ ಅಮಾಯಕರು ಸೆಕೆಂಡ್‌ ಹ್ಯಾಂಡ್‌ ವಾಹನಗಳನ್ನು ಖರೀದಿ ಮಾಡುತ್ತಾರೆ.

ನಕಲಿ ನಂಬರ್​ ಪ್ಲೇಟ್​ಗಳಿಂದ ಮೂಲ ವಾಹನದ ಮಾಲೀಕನಿಗೆ ತೊಂದರೆಯಾಗುತ್ತದೆ. ಉದಾಹರಣೆಗೆ, ಆ ವಾಹನ ಬಳಸಿ ಸರಗಳ್ಳತನ ನಡೆದರೆ ಅದನ್ನು ಪತ್ತೆ ಹಚ್ಚಲು ಪೊಲೀಸರು ಮೊದಲು ಮಾಡುವ ಕೆಲಸವೆಂದರೆ ನಗರದ ವಿವಿಧೆಡೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಬೈಕಿನ ನಂಬರ್ ಪರಿಶೀಲನೆ ಮಾಡುವುದು. ನಂತರ ವಾಹನದ ನಂಬರ್‌​ ಸಂಗ್ರಹಿಸಿ ಅದರ ವಿಳಾಸಗಳನ್ನು ಕಲೆ ಹಾಕಲಾಗುತ್ತದೆ. ಇಂತಹ ಸಮಯದಲ್ಲಿ ಪೊಲೀಸರು ಮೂಲ ವಾಹನ ಮಾಲೀಕನಿಗೆ ನೋಟಿಸ್‌ ನೀಡುತ್ತಾರೆ. ನಕಲಿ ನಂಬರ್‌ ಪ್ಲೇಟ್‌ ವಾಹನ ಬಳಸಿ ಕೊಲೆ, ದರೋಡೆಯಂತಹ ಗಂಭೀರ ಕೃತ್ಯಗಳನ್ನು ಎಸಗಿದರಂತೂ ಮೂಲ ಮಾಲೀಕರ ಗೋಳು ಹೇಳತೀರದು. ದಿನಬೆಳಗಾದರೆ ಪೊಲೀಸ್‌ ಠಾಣೆ ಮೆಟ್ಟಿಲೇರಬೇಕಾಗುತ್ತದೆ.

ದಿನಕ್ಕೆ ಕನಿಷ್ಟ ಮೂರ್ನಾಲ್ಕು ನಕಲಿ ನಂಬರ್​ ಪ್ಲೇಟ್​ ಕುರಿತ ದೂರು

ಸಂಚಾರಿ ಪೊಲೀಸರ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ, ನಕಲಿ ನಂಬರ್‌ ಪ್ಲೇಟ್‌ನ ಅನೇಕ ದೂರುಗಳು ಬಂದಿವೆ. ನಗರದಿಂದ ಕೆಲಸದ ನಿಮಿತ್ತ ಮನೆ ಖಾಲಿ ಮಾಡಿ ಆಂಧ್ರ ಸೇರಿದ್ದ ಟೆಕ್ಕಿಯೊಬ್ಬರಿಗೆ, ಬೆಂಗಳೂರಿನಲ್ಲಿ ಸಿಗ್ನಲ್​ ಜಂಪ್‌ ಮಾಡಿದ್ದ ದಂಡ ಬಿದ್ದಿತ್ತು. ತಾನಿರುವ ಲೊಕೇಷನ್ ಅನ್ನು ಪೊಲೀಸರಿಗೆ ನೀಡಿ,​ ತನ್ನ ಬೈಕು ತನ್ನ ಜತೆಯಲ್ಲೆ ಇದೆ ಎಂದು ಸೆಲ್ಫಿ ತೆಗೆದು ಟ್ವೀಟ್​ ಹಾಕಿದ್ದರು. ಈ ವೇಳೆ ಪೊಲೀಸರ ಬಳಿ ಇದ್ದ ಫೋಟೊ ಪರಿಶೀಲಿಸಿದಾಗ, ಅದೇ ನಂಬರಿನ ಇನ್ನೂ ಒಂದು ವಾಹನ ಇದ್ದದ್ದು ಕಂಡುಬಂದಿತ್ತು.

ಇನ್ನೊಂದು ಪ್ರಕರಣದಲ್ಲಿ, ಪೊಲೀಸ್ ಕಮೀಷನರ್ ರೌಂಡ್ಸ್ ವೇಳೆ ಕಾರಿನ ವೇಗ ಕಂಡು, ನಂಬರ್ ಪರಿಶೀಲನೆ ನಡೆಸಿದಾಗ ನಕಲಿ ನಂಬರ್‌ ಎಂದು ಪತ್ತೆಯಾಗಿತ್ತು. ಪೊಲೀಸರು ನಂಬರ್‌ ನಮೂದಿಸಿಕೊಂಡಿದ್ದ KA 03 ML 1304 ಟೊಯೊಟಾ ಹಾಗೂ KA 03 MC 7007 ಬಿಎಂಡಬ್ಲ್ಯೂ ಕಾರಾಗಿತ್ತು. ಆದರೆ ನಂಬರಿನ ದಾಖಲೆ ಪರಿಶೀಲಿಸಿದಾಗ ಕ್ರಮವಾಗಿ ಫೋರ್ಡ್‌ ಫಿಗೊ ಹಾಗೂ ಓಮ್ನಿ ಕಾರಿನದ್ದಾಗಿದ್ದವು. ಟೊಯೊಟಾ ಹಾಗೂ ಬಿಎಂಡಬ್ಲ್ಯೂ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡು ಚಲಾಯಿಸಲಾಗುತ್ತಿತ್ತು. ಈ ಎರಡೂ ವಾಹನಗಳನ್ನು ಕದ್ದಿರಬಹುದು ಎಂದು ಊಹಿಸಿರುವ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ | ತಪ್ಪು ಮಾಡದಿದ್ದರೂ ಬೀಳುತ್ತೆ ಟ್ರಾಫಿಕ್‌ ದಂಡ !: ಪಾರಾಗಲು ಇಲ್ಲಿವೆ 6 ಸೂತ್ರಗಳು

Exit mobile version