Site icon Vistara News

Fake Police: ಚೆಕ್‌ಪೋಸ್ಟ್‌ಗಳಲ್ಲಿ ವಸೂಲಿಗೆ ನಿಂತಿದ್ದ ನಕಲಿ ಪೊಲೀಸರು ಸೆರೆ

v kota police satation

v kota police satation

ಕೋಲಾರ: ಇತ್ತೀಚೆಗೆ ಕೆಲ ಸುಲಿಗೆಕೋರರು ಸುಲಿಗೆ (Fraud Case) ಮಾಡುವ ದಾರಿಯನ್ನು ಬದಲಾಯಿಸಿಕೊಂಡಿದ್ದಾರೆ. ಮನೆಗಳಿಗೆ ಕನ್ನ ಹಾಕುವ ಬದಲು ಸರಳ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪೊಲೀಸರ ವೇಷ ಧರಿಸಿ (Fake Police) ಜನರಿಗೆ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೀಗೆ ಚೆಕ್‌ಪೋಸ್ಟ್‌ನಲ್ಲಿ ಜನರಿಗೆ ವಂಚಿಸುತ್ತಿದ್ದಾಗಲೇ ಪೊಲೀಸರ ಬಳಿ ಲಾಕ್‌ ಆಗಿದ್ದಾರೆ.

ನಕಲಿ ಪೊಲೀಸ್‌ ಬಂಧನ

ಪೊಲೀಸ್‌ ಸಮವಸ್ತ್ರ ಧರಿಸಿ ಚೆಕ್‌ಪೋಸ್ಟ್‌ಗಳಲ್ಲಿ ವಾಹನವನ್ನು ತಡೆದು ಹಣ ಲೂಟಿ ಮಾಡುತ್ತಿದ್ದವರನ್ನು ವಿ.ಕೋಟ (ವೆಂಕಟಗಿರಿಕೋಟ) ಪೊಲೀಸರು ಬಂಧಿಸಿದ್ದಾರೆ. ವಾಹನ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದ್ದಾರೆ. ಆಗ ಅನುಮಾನಗೊಂಡು ಐವರನ್ನು ಬಂಧಿಸಿದಾಗ ನಕಲಿ ಪೊಲೀಸರ, ಅಸಲಿ ಕಥೆ ಹೊರಬಿದ್ದಿದೆ. ಪೊಲೀಸರ ವೇಷ ಧರಿಸಿ ಜನರಿಂದ ಲೂಟಿ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳಿಂದ 2.5 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡು, ರಿಮ್ಯಾಂಡ್‌ಗೆ ಕಳುಹಿಸಲಾಗಿದೆ ಎಂದು ಡಿಎಸ್‌ಪಿ ಸುಧಾಕರ ರೆಡ್ಡಿ ತಿಳಿಸಿದ್ದಾರೆ.

ರೈಡ್‌ ಮಾಡುವ ನೆಪದಲ್ಲಿ ದರೋಡೆ

ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ಪೊಲೀಸರ ವೇಷ ಧರಿಸಿ, ರೈಡ್‌ ಮಾಡುವ ನೆಪದಲ್ಲಿ ಲಕ್ಷ ಲಕ್ಷ ಲೂಟಿ ಮಾಡಿರುವುದು ತಿಳಿದು ಬಂದಿದೆ. ಕಳೆದ ಏ. 27 ರಂದು ರಿಯಾಜ್‌ ಖಾನ್‌ ಎಂಬಾತನಿಗೆ ಕೆಲ ವ್ಯಕ್ತಿಗಳು ಹಣದ ಆಮಿಷವೊಡ್ಡಿ ವಂಚಿಸಿರುವ ಘಟನೆ ನಡೆದಿತ್ತು. 500 ರೂಪಾಯಿ ಮುಖಬೆಲೆಯ ನೋಟು ಕೊಟ್ಟರೆ ಪ್ರತಿಯಾಗಿ ಒಂದು ಲಕ್ಷಕ್ಕೆ ಹೆಚ್ಚುವರಿಯಾಗಿ ಇಪತ್ತು ಸಾವಿರ ರೂಪಾಯಿಯಾಗಿ 2000 ರೂಪಾಯಿಯ ನೋಟು ಕೊಡುವುದಾಗಿಯೂ ಇವರು ಆಮಿಷವೊಡ್ಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆಮಿಷಕ್ಕೆ ಬಲಿಯಾದ ರಿಯಾಜ್‌ ಖಾನ್‌ ಕಳೆದ ಮೇ 4ರಂದು 5 ಲಕ್ಷ ರೂ. ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚೆಕ್‌ಪೋಸ್ಟ್‌ ಬಳಿ ರಿಯಾಜ್‌ನನ್ನು ಅಡ್ಡಗಟ್ಟಿದ್ದಾರೆ. ಪೊಲೀಸರಂತೆ ದಾಳಿ ನಡೆಸಿ, ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಹೇಳಿ ಹಣವನ್ನು ಲೂಟಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: Modi in Karnataka: ಬೀದಿ ನಾಯಿಗಳಿಗೂ ಸಂಕಷ್ಟ ತಂದ ನರೇಂದ್ರ ಮೋದಿ‌ ಮೆಗಾ ರೋಡ್ ಶೋ!

ಸೂಕ್ತ ದಾಖಲೆ ಸಲ್ಲಿಸಿ ಹಣವನ್ನು ಪಡೆದುಕೊಳ್ಳಲು ಠಾಣೆಗೆ ಹೋದಾಗಲೇ ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಈ ಸಂಬಂಧ ವಿ.ಕೋಟಾ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ, ಈ ನಕಲಿ ಪೊಲೀಸರು ಜನರಿಗೆ ವಂಚಿಸುತ್ತಿದ್ದಾಗಲೇ ಬಂಧಿತರಾಗಿದ್ದಾರೆ. ಸದ್ಯ ಇವರ ಮೇಲೆ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version