ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ ಒಂದೆಡೆ ಕಡತ ವಿಲೇವಾರಿ ವಿಳಂಬ, ಸಿಬ್ಬಂದಿ ಮೇಲೆ ಕಾನೂನುಬಾಹಿರ ಶಿಸ್ತುಕ್ರಮ ಹಾಗೂ ವಾರ್ಷಿಕ ವೇತನ ಬಡ್ತಿ ತಡೆ ಇನ್ನಿತರ ಆರೋಪಗಳು ಕೇಳಿಬಂದಿದ್ದರೆ, ಮತ್ತೊಂದೆಡೆ ಡಿಸಿಪಿ ಕಾರ್ಯದಕ್ಷತೆಯನ್ನು ಕೆಲ ಸಿಬ್ಬಂದಿ ಪ್ರಶಂಸಿಸಿ, ದೂರು ನೀಡಿರುವ ನೌಕರರನ್ನೇ ಟೀಕಿಸಿರುವ ಆಡಿಯೊ ವೈರಲ್ ಆಗಿದೆ.
ಕಡತ ವಿಲೇವಾರಿಯಲ್ಲಿ ವಿಳಂಬ, ಸಿಬ್ಬಂದಿ ಮೇಲೆ ಕಾನೂನುಬಾಹಿರ ಶಿಸ್ತು ಕ್ರಮ, ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯುವುದು, ಕನ್ನಡ ಮಾತನಾಡುವ ಸಿಬ್ಬಂದಿಯನ್ನು ತುಚ್ಚವಾಗಿ ಕಾಣುವುದು, ಅನಿರ್ದಿಷ್ಟಾವಧಿ ಕೆಲಸ ಮಾಡಿಸುವುದು ಹೀಗೆ ಡಿಸಿಪಿ ವಿರುದ್ಧ ಹಲವು ಆರೋಪಗಳನ್ನು ಮಾಡಿ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಪೊಲೀಸ್ ಪ್ರಧಾನ ಕಚೇರಿಯ ಆಡಳಿತ ವಿಭಾಗದ ಎಡಿಜಿಪಿ ಎಂ.ಎ.ಸಲೀಂ ಅವರಿಗೆ ಇತ್ತೀಚೆಗೆ ಕೆಲ ಸಿಬ್ಬಂದಿ ದೂರು ಸಲ್ಲಿಸಿದ್ದರು.
ಇದನ್ನೂ ಓದಿ | ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಕಮಿಷನರ್ ಕಚೇರಿ ಸಿಬ್ಬಂದಿಯಿಂದ ದೂರು
ಆದರೆ, ವರ್ಗಾವಣೆ ಪ್ರಕ್ರಿಯೆ, ಬಡ್ತಿ ನೀಡುವಿಕೆಯಲ್ಲಿ ಪಾರದರ್ಶಕತೆ ಸೇರಿ ಆಡಳಿತ ವಿಭಾಗದಲ್ಲಿ ಹಲವು ಸುಧಾರಣೆ ತಂದಿರುವ ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಕೆಲಸ ಮಾಡುವ ಸಿಬ್ಬಂದಿಯದ್ದೇ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಳ್ಳೆಯವರಿಗೆ ಕಾಲ ಇಲ್ಲ. ಡಿಸಿಪಿ ಕಚೇರಿ, ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕ ಆಗಿರುವ ಕೆಲ ಗ್ರೇಡ್ ಸಿ ಮತ್ತು ಡಿ ಸಿಬ್ಬಂದಿ ಸುಮಾರು ವರ್ಷಗಳಿಂದ ತಳ ಊರಿಕೊಂಡು ಹಲವು ಡೀಲ್‌ಗಳನ್ನು ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬಂದು 1 ಗಂಟೆಗೆ ಊಟಕ್ಕೆ ಹೋಗಿ, ಮತ್ತೆ 3 ಗಂಟೆಗೆ ಬಂದು 4 ಗಂಟೆಗೆ ಟೀ, ಕಾಫಿಗೆ ಹೋಗಿ ಸಂಜೆ 5.30ಕ್ಕೆ ಮನೆಗೆ ಹೋಗುತ್ತಿದ್ದಾರೆ. ಇಂತಹ ನಾಲಾಯಕ್‌ಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಖಡಕ್ ಆಗಿ ಹೇಳಿದ ಡಿಸಿಪಿ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡುವ ನೀಚ ಕೆಲಸ ಮಾಡಿದ್ದಾರೆ. ಮೇಡಂ ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪರ ಇರಬೇಕು ಎಂದಿರುವ ನೌಕರರೊಬ್ಬರ ಮಾತುಗಳು ಆಡಿಯೋದಲ್ಲಿವೆ.
ಇದನ್ನೂ ಓದಿ | Bangalore police | ರಾಜಧಾನಿಯಲ್ಲಿ ಇನ್ನೂ 10 ಹೊಸ ಪೊಲೀಸ್ ಠಾಣೆ