ಬೆಂಗಳೂರು: ಕಳೆದ ಅಕ್ಟೋಬರ್ 30ರಂದು ರ‍್ಯಾಪಿಡೊ ಚಾಲಕನೊಬ್ಬ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಾಡೆಲ್ ಕಂ ನಟಿಯೊಬ್ಬರು ದೂರು ನೀಡಿದ್ದರು. ಆದರೆ, ಇದು ಸುಳ್ಳು ದೂರು ಎಂದು ಪೊಲೀಸರೇ ಈಗ ಹೇಳಿದ್ದಾರೆ. ದುರಂತ ಎಂದರೆ ಈಗ ಆ ರ‍್ಯಾಪಿಡೊ ಚಾಲಕನ ಮೇಲೆ ಮಾಡೆಲ್ ದಾಖಲಿಸಿದ್ದ ಆ ಒಂದು ಸುಳ್ಳು ದೂರು (False Complaint ) ಆತನ ಬದುಕನ್ನೇ ಬೀದಿಪಾಲು ಮಾಡಿದೆ.
ಇಷ್ಟಕ್ಕೇ ಈ ಪ್ರಕರಣ ನಿಂತಿಲ್ಲ. ತಪ್ಪು ಮಾಡದೆ ಇದ್ದರೂ ಪೊಲೀಸರ ಮುಂದೆ ಆರೋಪವನ್ನು ಒಪ್ಪಿಕೊಳ್ಳುವಂತೆ ಮಾಡೆಲ್ ಒತ್ತಡ ಹೇರುತ್ತಿದ್ದಾರೆಂದು ಚಾಲಕ ಮಂಜುನಾಥ್ ತಿಪ್ಪೆಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿರುವ ರ‍್ಯಾಪಿಡೊ ಚಾಲಕ ಮಂಜುನಾಥ್ ತಿಪ್ಪೆಸ್ವಾಮಿ, ಮಾಡೆಲ್ ನೀಡಿರುವ ಸುಳ್ಳು ದೂರಿನಿಂದಾಗಿ ನನ್ನ ಕೆಲಸ ಹೋಗಿದ್ದು, ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಕೆಲಸ ಸಿಗುತ್ತಿಲ್ಲ. ನನ್ನದಲ್ಲದ ತಪ್ಪಿಗೆ ಕಣ್ಣೀರು ಹಾಕುವಂತಾಗಿದೆ. ಹೊಟ್ಟೆಪಾಡಿಗಾಗಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿರುವ ನನಗೆ ಈಗ ಆ ಆರೋಪವನ್ನು ಒಪ್ಪಿಕೊಳ್ಳುವಂತೆ ಮಾಡೆಲ್ ಒತ್ತಡ ಹಾಕುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ.
ಏನಿದು ಘಟನೆ?
ಕಳೆದ ಅಕ್ಟೋಬರ್ ೩೦ರಂದು, ರ‍್ಯಾಪಿಡೋ ಚಾಲಕ ಮಂಜುನಾಥ್ ತಿಪ್ಪೆಸ್ವಾಮಿ ಎಂಬಾತ ನನ್ನ ಜತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಾಡೆಲ್ ಕಂ ನಟಿ ದೂರು ದಾಖಲಿಸಿದ್ದರು.
ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ದೂರುದಾರ ಮಹಿಳೆ ಆ ದಿನ ರ‍್ಯಾಪಿಡೊ ಬೈಕ್ ಬುಕ್ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದಾರೆ. ಚಾಲಕ ಆಕೆಯ ಬಳಿ ಬಂದಿರುವುದಕ್ಕಾಗಲಿ, ಅಲ್ಲಿಗೆ ಹೋಗಿರುವುದಕ್ಕಾಗಲಿ ಯಾವುದೇ ಪುರಾವೆಗಳು ಇಲ್ಲದ ಕಾರಣಕ್ಕಾಗಿ, ಮಾಡೆಲ್ ಮಾಡಿರುವ ಆರೋಪ ಸುಳ್ಳು ಎಂದು ತಿಳಿದು ಬಂದಿತ್ತು. ಈ ಸಂಬಂಧ ಮಾಡೆಲ್ ಮಾಡಿರುವ ಆರೋಪವೂ ಸತ್ಯಕ್ಕೆ ದೂರವಾದದ್ದು ಎಂದು ಡಿಸಿಪಿ ಭೀಮಾ ಶಂಕರ್ ಗುಳೇದ್ ಸ್ಪಷ್ಟ ಪಡಿಸಿದ್ದರು.
ಆರೋಪ ಮುಕ್ತವಾದರೂ ಹೋಗದ ಕಳಂಕ
ನಟಿ ನೀಡಿದ್ದು ಸುಳ್ಳು ದೂರು ಎಂಬುದೇನೋ ಈಗ ಗೊತ್ತಾಗಿದೆ. ಆದರೆ, ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬಂತಹ ಸ್ಥಿತಿ ಈಗ ಈ ಬಡಪಾಯಿ ಚಾಲಕನದ್ದಾಗಿದೆ. ಮನೆಯಲ್ಲಿ ಇದ್ದ ಮರ್ಯಾದೆ ಹೋಗಿದೆ. ಅತ್ತ ಮನೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲ, ಇತ್ತ ಕೆಲಸವೂ ಇಲ್ಲ. ತನಗಾದ ನಷ್ಟವನ್ನು ಈಗ ಭರಿಸುವವರು ಯಾರು ಎಂದು ಮಂಜುನಾಥ್ ತಿಪ್ಪೆಸ್ವಾಮಿ ಕಣ್ಣೀರು ಹಾಕುತ್ತಾರೆ. ಈ ಮಧ್ಯೆ ಈಗಾಗಲೇ ತಾನು ಕೊಟ್ಟಿರುವ ದೂರಿನ ಆರೋಪವನ್ನು ಪೊಲೀಸರ ಮುಂದೆ ಒಪ್ಪಿಕೋ ಎಂದು ಆ ನಟಿ ಒತ್ತಡ ಹಾಕುತ್ತಿರುವ ಬಗ್ಗೆ ತಿಪ್ಪೇಸ್ವಾಮಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Deer hunting | ನಾಗರಹೊಳೆ ಉದ್ಯಾನವನದಲ್ಲಿ ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ, ನಾಲ್ವರು ಪರಾರಿ