ಬೆಂಗಳೂರು: ಇಲ್ಲಿನ ವೈಯಾಲಿಕಾವಲ್‌ನಲ್ಲಿ ಪತಿಯೊಬ್ಬ ಪತ್ನಿ ಮನೆಗೆ ಹೋದವನು ಮೃತಪಟ್ಟಿದ್ದು, ಇದರ ಬಗ್ಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕೌಟುಂಬಿಕ ಕಲಹವೇ (Family Dispute) ಕಾರಣ ಎನ್ನಲಾಗಿದ್ದು, ಪತ್ನಿಯಿಂದಲೇ ಈ ಕೃತ್ಯ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ವಿನೋದ್ ಮೃತ ದುರ್ದೈವಿ. ಈತ ಪತ್ನಿ ನಿರ್ಮಲಾಗೆ ಅಪಘಾತವಾಗಿದೆ ಎಂದು ನೋಡಿಕೊಂಡು ಬರಲು ಆಕೆಯ ತವರು ಮನೆಗೆ ಹೋಗಿದ್ದ ಎಂದು ತಿಳಿದುಬಂದಿದೆ. ಆದರೆ ಈ ವೇಳೆ ಆ್ಯಸಿಡ್ ಕುಡಿದಿರುವುದಾಗಿ ಪತ್ನಿ ಮನೆಯವರು ಹೇಳಿದ್ದು, ಇದು ಮೃತನ ಕುಟುಂಬದವರಲ್ಲಿ ಅನುಮಾನ ಮೂಡಿಸಿದೆ. ಹೀಗಾಗಿ ಈ ಪ್ರಕರಣವು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
10 ವರ್ಷದ ಹಿಂದೆ ವಿನೋದ್ ಕುಮಾರ್ ಮತ್ತು ನಿರ್ಮಲಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಕಳೆದ ಎರಡು ತಿಂಗಳಿಂದ ದಾಂಪತ್ಯ ಕಲಹ ಉಂಟಾಗಿದೆ. ಇತ್ತೀಚೆಗೆ ಇಬ್ಬರ ನಡುವೆ ಗಲಾಟೆ ಅತಿರೇಕಕ್ಕೆ ಹೋಗಿದ್ದು, ವಿನೋದ್‌ನನ್ನು ಪತ್ನಿ ನಿರ್ಮಲಾ ಮನೆಬಿಟ್ಟು ಓಡಿಸಿಬಿಟ್ಟಿದ್ದಳು ಎನ್ನಲಾಗಿದೆ. ಹೀಗಾಗಿ ವಿನೋದ್ ವೈಯಾಲಿಕಾವಲ್‌ನಿಂದ ಕೆ.ಆರ್. ಪುರಂನಲ್ಲಿರುವ ತಾಯಿ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ.
ಈ ಮಧ್ಯೆ ಕಳೆದ 15 ದಿನದ ಹಿಂದೆ ಸತ್ಯನಾರಾಯಣ ಪೂಜೆಗೆ ಹೋಗಿದ್ದ ನಿರ್ಮಲಾಗೆ ಸದಾಶಿವನಗರದಲ್ಲಿ ಆಟೋ ಚಾಲಕನೊಬ್ಬ ಆ್ಯಕ್ಸಿಡೆಂಟ್ ಮಾಡಿ ಹೊರಟು ಹೋಗಿದ್ದ ಎಂದು ಹೇಳಲಾಗಿದೆ. ಅಪಘಾತದಲ್ಲಿ ಪತ್ನಿಗೆ ಗಾಯವಾಗಿದೆ ಎಂದು ತಿಳಿದ ವಿನೋದ್ ಅವಳಿದ್ದಲ್ಲಿಗೆ ಹೋಗಿ ವಿಚಾರಿಸಿದ್ದಲ್ಲದೆ, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ಕೊಡಿಸಿದ್ದ ಎಂದು ಹೇಳಲಾಗಿದೆ. ಬಳಿಕ ಆಕೆ ತನ್ನ ತಾಯಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು. ಅಲ್ಲಿಗೆ ಹೋಗಿ ಆಕೆಯನ್ನು ನೋಡಿಕೊಂಡು ಹೇಳಿ ಹೋದವನು ವಾಪಸ್ ಆಗಿಲ್ಲವೆಂದು ವಿನೋದ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಅಕ್ರಮ ಸಂಬಂಧ ಹೊಂದಿದ್ದಳಾ ನಿರ್ಮಲಾ?
ಈ ಅಪಘಾತದ ಕುರಿತು ವಿನೋದ್ ಕುಟುಂಬಸ್ಥರು ಅಸಲಿಯತ್ತು ಬೇರೆ ಇದೆ ಎಂದು ಆರೋಪಿಸಿದ್ದಾರೆ. ನಿರ್ಮಲಾ ಮದುವೆಯಾಗಿದ್ದರೂ, ಕಿರಣ್ ಎಂಬಾತನ ಜತೆಗೆ ಪ್ರೇಮ ಸಂಬಂಧ ಹೊಂದಿದ್ದಳು. ಪ್ರಿಯಕರ ಕಿರಣ್‌ಗೂ ವಿವಾಹವಾಗಿತ್ತು. ಆದರೂ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಇವರಿಬ್ಬರು ಬೈಕ್‌ನಲ್ಲಿ ನಂದಿ ಹಿಲ್ಸ್‌ಗೆ ಟ್ರಿಪ್ ಹೋಗಿ ಬರುವಾಗ ಅಪಘಾತ ಆಗಿದೆ. ನಿರ್ಮಲಾ ಬೈಕ್ ಓಡಿಸಿಕೊಂಡು ಬಂದು ಟಿಪ್ಪರ್‌ಗೆ ಗುದ್ದಿದ್ದಾಳೆ. ಆದರೆ ಸದಾಶಿವನಗರದಲ್ಲಿ ಆಟೋ ಡಿಕ್ಕಿಯಾಗಿ ಅಪಘಾತ ಆಗಿದೆ ಎಂದು ಸುಳ್ಳು ಹೇಳಿದ್ದಾಳೆ ಎಂದು ಆರೋಪಿಸಿದ್ದಾರೆ.
ಐದು ದಿನದ ಹಿಂದೆ ವಿನೋದ್ ಕೆಲಸಕ್ಕೆ ಹೋಗಿದ್ದಾಗ ಈ ವಿಚಾರ ಗೊತ್ತಾಗಿ, ಇದನ್ನು ಪ್ರಶ್ನೆ ಮಾಡಲು ಮನೆಗೆ ತೆರಳಿದ್ದಾನೆ. ಇದೆಲ್ಲ ಬಿಟ್ಟು ನನ್ನ ಜತೆಗೆ ಬಂದುಬಿಡು. ಬೇರೆ ಕಡೆ ಹೋಗಿ ಹೊಸದಾಗಿ ಜೀವನ ಮಾಡೋಣ ಎಂದು ನಿರ್ಮಲಾಳಿಗೆ ವಿನೋದ್ ಬುದ್ಧಿ ಮಾತನ್ನೂ ಹೇಳಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಫೆ.16ರಂದು ಅಕ್ಕ ಪ್ರಮಿಳಾ ಮನೆಗೆ ಬಂದಿದ್ದಾಗ ವಿನೋದ್ ಈ ಎಲ್ಲ ವಿಚಾರವನ್ನು ಹೇಳಿಕೊಂಡಿದ್ದ. ಕಳೆದ ಸೋಮವಾರ ಮತ್ತೆ ಹೆಂಡತಿ ಜತೆ ಮಾತನಾಡಲು ಎಂದು ಹೋದವನು ಬಳಿಕ ಕುಟುಂಬಸ್ಥರು ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮತ್ತೆ ಸಂಜೆ ಕರೆ ಮಾಡಿದಾಗ ನಿರ್ಮಲಾ ಕುಟುಂಬಸ್ಥರು ಕರೆ ಸ್ವೀಕರಿಸಿ, ಆ್ಯಸಿಡ್ ಕುಡಿದಿದ್ದಾನೆಂದು ಮಾಹಿತಿ ನೀಡಿದ್ದಾರೆ ಎಂದು ವಿನೋದ್ ಕುಟುಂಬದವರು ಹೇಳಿದ್ದಾರೆ.
ಇದನ್ನೂ ಓದಿ: Ambaari Utsav Bus: ರಸ್ತೆಗಿಳಿಯಿತು ವಿಮಾನದಂಥ ಅನುಭವ ನೀಡುವ ಅಂಬಾರಿ ಉತ್ಸವ ಬಸ್ಸು, ಏನೆಲ್ಲ ಸೌಲಭ್ಯಗಳಿವೆ?
ಆ್ಯಸಿಡ್ ಕುಡಿದಿದ್ದ ವಿನೋದ್‌ನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಮೃತಪಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ವಿನೋದ್ ಕುಟುಂಬಸ್ಥರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ನಿರ್ಮಲಾ ಕುಟುಂಬಸ್ಥರೇ ವಿಷ ಕುಡಿಸಿ ಕೊಂದಿದ್ದಾರೆಂದು ದೂರು ದಾಖಲಿಸಿದ್ದಾರೆ.
ಸಿನಿಮಾದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ