ಬೆಂಗಳೂರು: ನನ್ನ ಹೆಂಡತಿ ತಡವಾಗಿ ಎದ್ದೇಳುತ್ತಾಳೆ, ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲ ಎಂದು ಪತಿರಾಯನೊಬ್ಬ (Family Dispute) ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಕಮ್ರಾನ್ ಖಾನ್ ಬಿನ್ ಗೌಪ್ ಖಾನ್ (40) ಎಂಬುವವರು ಪತ್ನಿ ಆಯೇಷಾ ಫರ್ಹೀನ್ ಹಾಗೂ ಕುಟುಂಬದವರ ಮೇಲೆ ದೂರು ನೀಡಿದ್ದಾರೆ.
ಅಡುಗೆ ಮಾಡು ಎಂದರೆ ಜಗಳಕ್ಕೆ ನಿಂತು ಬಿಡುತ್ತಾಳೆ. ರಾಯಲ್ ಲೈಫ್ ಲೀಡ್ ಮಾಡಲು ಆಕೆ ಇಷ್ಟಪಡುತ್ತಾಳೆ. ಮದುವೆಗೂ ಮುನ್ನ ಹಲವು ಕಾಯಿಲೆಯಿಂದ ಬಳಲುತ್ತಿದ್ದರೂ, ಅದನ್ನೂ ಮುಚ್ಚಿಟ್ಟು ಮೋಸದಿಂದ ಮದುವೆ ಆಗಿದ್ದಾಳೆ ಎಂದು ಕಮ್ರಾನ್ ಖಾನ್ ಆರೋಪಿಸಿದ್ದಾರೆ. ಮಾತ್ರವಲ್ಲ ಪತ್ನಿಯ ಕುಟುಂಬಸ್ಥರು ಹಲ್ಲೆ ಮಾಡುವುದು, ಆಸ್ತಿಗಾಗಿ ಕಿರುಕುಳ ನೀಡುವುದನ್ನು ಮಾಡುತ್ತಿದ್ದಾರೆ ಎಂದು ದೂರಿನ ಸರಮಾಲೆಯನ್ನೇ ಪೊಲೀಸರ ಮುಂದಿಟ್ಟಿದ್ದಾರೆ.
ಪತಿಯ ದೂರಿನ ಸರಮಾಲೆಯಲ್ಲಿ ಏನಿದೆ?
ನನ್ನ ಪತ್ನಿ ಆಯೇಷಾ ಫರ್ಹೀನ್ ಕುಟುಂಬಸ್ಥರು ಮನೆಯಲ್ಲಿ ಏನೇ ಕಾರ್ಯಕ್ರಮಗಳು ನಡೆಸಿದರೂ ನಮ್ಮ ಮನೆಯ ಯಾವ ಸದಸ್ಯರನ್ನೂ ಕರೆಯುವುದಿಲ್ಲ. ಜತೆಗೆ ಮನೆ ಕೆಲಸ ಮಾಡದೆ ಯಾವಾಗಲೂ ಹುಷಾರಿಲ್ಲ ಎಂದು ಹೇಳಿ ರಾತ್ರಿ ಮಲಗಿದರೆ ಪ್ರತಿ ದಿನ ಮಧ್ಯಾಹ್ನ 12 ಗಂಟೆಗೆ ಏಳುತ್ತಾಳೆ ಎಂದು ಆರೋಪಿಸಿದ್ದಾರೆ.
ಆಕೆಗೆ ಥೈರಾಯಿಡ್ ಹಾಗೂ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಇದ್ದರೂ ಮದುವೆಯ ಸಮಯದಲ್ಲಿ ಇದ್ಯಾವುದನ್ನೂ ತಿಳಿಸಿಲ್ಲ. ಪ್ರತಿ ದಿನ ಕಚೇರಿಗೆ ಹೋಗುವಾಗ ನನ್ನ ತಾಯಿ ಅಡುಗೆ ಮಾಡಿ ಕೊಡುತ್ತಿದ್ದರು. ಮಧ್ಯಾಹ್ನ ಎದ್ದು ತನ್ನ ಕೆಲಸವನ್ನು ಮಾತ್ರ ಮಾಡಿಕೊಂಡು ಬಳಿಕ ಸಂಜೆ 5ಕ್ಕೆ ಹೋಗಿ ಮಲಗಿಕೊಂಡರೆ ಮತ್ತೆ ಆಕೆ ರಾತ್ರಿ 9.30ಕ್ಕೆ ಏಳುತ್ತಿದ್ದಳು. ಮದುವೆಯಾಗಿ 5 ವರ್ಷವಾದರೂ ಈ ತನಕ ಇದ್ಯಾವುದನ್ನೂ ನಾನು ಕೇಳಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳುವ ಪತ್ನಿ, ತನ್ನ ಫ್ಯಾಮಿಲಿ ಬಗ್ಗೆ ನಿನಗೆ ಗೊತ್ತಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಂದು ದಿನದ ಮಟ್ಟಿಗೆ ತಾಯಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗುವವಳು ಸುಮಾರು 15 ರಿಂದ 20 ದಿನಗಳ ಕಾಲ ಅಲ್ಲೇ ಇರುತ್ತಾಳೆ. ಇತ್ತೀಚೆಗೆ ಸುಮಾರು 20ರಿಂದ 25 ಜನರನ್ನು ಮನೆಗೆ ಕರೆಸಿ ಎಲ್ಲರ ಮೇಲೂ ಹಲ್ಲೆ ಮಾಡಿಸಿದ್ದಾಳೆ. ಮಾತ್ರವಲ್ಲದೆ ಮನೆಯಲ್ಲಿದ್ದ ವಸ್ತುಗಳಲೆಲ್ಲವೂ ಜಖಂಗೊಂಡಿದ್ದವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Vijayapura Road Accident: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸರಣಿ ಕಾರು ಅಪಘಾತ; ದಾವಣಗೆರೆಯಲ್ಲಿ ಖಾಸಗಿ ಬಸ್ ಪಲ್ಟಿ
ಅಡುಗೆ ಮಾಡು ಎಂದರೆ ಜಗಳಕ್ಕೆ ನಿಲ್ತಾಳೆ!
ನನ್ನ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅಡುಗೆ ಕೆಲಸ ಮಾಡುವಂತೆ ಹೇಳಿದರೆ ಆಕೆ ಯಾವುದೇ ಕೆಲಸವನ್ನು ಮಾಡದೆ ನನ್ನೊಂದಿಗೆ ಜಗಳ ತೆಗೆಯುತ್ತಾಳೆ. ನಾನು ಆಕೆಗೆ ಏನಾದರೂ ಕೆಲಸ ಹೇಳಿದರೆ, ನನ್ನ ಮೇಲೆ ಇಲ್ಲಸಲ್ಲದ ಕಾರಣ ಹೇಳಿ ಕೂಗಾಡಿ ನನ್ನ ವಿರುದ್ಧ ಕಂಪ್ಲೇಂಟ್ ಕೊಡುವುದಾಗಿ ಬೆದರಿಕೆ ಹಾಕುತ್ತಿರುತ್ತಾಳೆ. ನನ್ನಿಂದ ಹಣ ಮತ್ತು ಆಸ್ತಿ ಲಪಟಾಯಿಸುವ ದುರುದ್ದೇಶದಿಂದ ಮದುವೆ ಮಾಡಿಕೊಂಡಿದ್ದಾಗಿ ಆರೋಪಿಸಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ