Site icon Vistara News

Family Dispute : ಹೆಂಡ್ತಿ ಮೇಲೆ ಸಂಶಯ; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಿಶಾಚಿ ಪತಿ

Husband throws petrol on wife sets her on fire

ಬೆಂಗಳೂರು: ಅನುಮಾನ ಪಿಶಾಚಿ ಗಂಡನೊಬ್ಬ ಹೆಂಡತಿ ಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ (Family Dispute) ನಡೆದಿದೆ. ಶ್ರೀನಿವಾಸ್ ಎಂಬಾತ ಪತ್ನಿ ಪುಷ್ಪಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕಳೆದ ನವೆಂಬರ್‌ 16ರಂದು ನಡೆದಿದ್ದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಶ್ರೀನಿವಾಸ್‌ ಹಾಗೂ ಪುಷ್ಪಮ್ಮ ಕಳೆದ 18 ವರ್ಷದ ಹಿಂದೆ ಮದುವೆಯಾಗಿದ್ದರು. ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್‌ಗೆ ಪತ್ನಿ ಪುಷ್ಪಳ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಹಿರಿಯರು ಅನೇಕ ಬಾರಿ ರಾಜಿ ಪಂಚಾಯಿತಿ ಮಾಡಿದ್ದರು.

ಬಂಧಿತ ಆರೋಪಿ

ಆದರೆ ಪತ್ನಿ ಮೇಲಿನ ಅನುಮಾನ ಮಾತ್ರ ಕಡಿಮೆ ಆಗಿರಲಿಲ್ಲ. ನಿತ್ಯವು ಜಗಳ ತೆಗೆದು ಕಿರುಕುಳ ನೀಡುತ್ತಿದ್ದ. ಈ ನಡುವೆ ಕಳೆದ 16ರಂದು ಇದೇ ವಿಷಯಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಸಿಟ್ಟಿಗೆದ್ದ ಶ್ರೀನಿವಾಸ್‌ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಆಕೆ ಕಿರುಚಾಡುತ್ತಿದ್ದಂತೆ ಗಾಬರಿಯಾದ ಶ್ರೀನಿವಾಸ್‌ ನೀರು ಸುರಿದಿದ್ದಾನೆ. ಬಳಿಕ ಪುಷ್ಪಮ್ಮಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಪುಷ್ಪಳಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಪಿ ಶ್ರೀನಿವಾಸ್‌ನನ್ನು ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮೆಟ್ರೊದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕೆಂಪು ಅಂಗಿಯವ ಯಾರು?

ಬೆಂಗಳೂರು: ನಮ್ಮ ಮೆಟ್ರೋ (Namma Metro) ಸಂಚಾರ ಎಲ್ಲ ರೀತಿಯಿಂದಲೂ ಸುರಕ್ಷಿತ ಎಂಬ ಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಅತ್ಯಂತ ಕಠಿಣವಾದ ಪ್ರವೇಶ ನಿಯಮಗಳು, ರೈಲು ಹತ್ತುವಾಗ ಪಾಲಿಸಬೇಕಾದ ಕ್ರಮಗಳಿಂದ ಮೆಟ್ರೋ ರೈಲಿನಲ್ಲಿ ಓಡಾಡುವುದು ಅತ್ಯಂತ ಸೆಕ್ಯೂರ್ಡ್‌ ಅನ್ನುವ ಫೀಲಿಂಗ್‌ ಇತ್ತು. ಆದರೆ, ಈಗ ಏಕಾಏಕಿಯಾಗಿ ಜನದಟ್ಟಣೆ ಹೆಚ್ಚಿರುವುದು, ಎಲ್ಲ ರೀತಿಯ ಜನರು ರೈಲು ಹತ್ತುತ್ತಿರುವುದರಿಂದ ಅಲ್ಲೂ ಲೈಂಗಿಕ ಕಿರುಕುಳ (Sexual Harassment), ಜೋರಾಗಿ ಮಾತನಾಡುವುದು, ದಬಾಯಿಸುವುದು ಮೊದಲಾದ ವಿದ್ಯಮಾನಗಳು ನಡೆಯುತ್ತಿವೆ.

ಕೆಲವು ದಿನಗಳ ಹಿಂದೆ ಮೆಟ್ರೋ ರೈಲಿನೊಳಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಆಕೆಯ ಗೆಳತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ರಕ್ಷಣೆ ಒದಗಿಸಬೇಕು ಎಂದು ಕೋರಿದ್ದಾರೆ. ಘಟನೆ ನಡೆದಿರುವುದು ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ. ಯುವತಿಯೊಬ್ಬಳು ಬೆಳಗ್ಗೆ 8.30ರ ಸುಮಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲೆಂದು ಮೆಜೆಸ್ಟಿಕ್‌ ರೈಲು ನಿಲ್ದಾಣಕ್ಕೆ ಬಂದಿದ್ದಳು. ಅಷ್ಟು ಹೊತ್ತಿಗೆ ಅಲ್ಲಿ ಭಾರಿ ಜನದಟ್ಟಣೆ ಇತ್ತು. ರೈಲು ಏರುವಾಗಲೂ ಹಿಂದಿನಿಂದ ತಳ್ಳಾಟ ಜೋರಾಗಿತ್ತು. ಹಾಗೆ ಕಷ್ಟು ಕಟ್ಟು ಏರಿ ಹೇಗೋ ಒಳಗೆ ನಿಂತ ಮೇಲೆ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆಕೆಯ ಹಿಂದಿನ ಭಾಗವನ್ನು ಸ್ಪರ್ಶಿಸಿ ಕಿರುಕುಳ ನೀಡಲು ಆರಂಭ ಮಾಡಿದ್ದಾನೆ. ಆರಂಭದಲ್ಲಿ ಆಕೆಗೆ ಇದು ಜನರ ಒತ್ತಡದ ನಡುವೆ ಏನೋ ತಪ್ಪಾಗಿ ನಡೆಯುತ್ತಿರಬಹುದು ಎಂದು ಭಾವಿಸಿದ್ದಾಳೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ಆತನ ದುಷ್ಟ ವರ್ತನೆ ಅರ್ಥವಾಗಿದೆ.

ಆಕೆ ಆತನಿಂದ ತಪ್ಪಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಬೇರೆಯವರ ಸಹಾಯ ಕೋರಿದರೂ ಎಲ್ಲರೂ ತಮ್ಮ ಲೋಕದಲ್ಲೇ ಮುಳುಗಿದ್ದರು ಬಿಟ್ಟರೆ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಆಕೆಯ ಗೆಳತಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಗೆಳತಿಗೆ ಆಗಿರುವ ಲೈಂಗಿಕ ಕಿರುಕುಳದ ಬಗ್ಗೆ ಮತ್ತೊಬ್ಬ ಯುವತಿ ಬರೆದುಕೊಂಡಿರುವ ಬಗ್ಗೆ ಜನರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇಡೀ ಮೆಟ್ರೋ ರೈಲು ಮತ್ತು ನಿಲ್ದಾಣ ಸಿಸಿ ಟಿವಿ ಕಣ್ಗಾವಲಿನಲ್ಲಿರುತ್ತದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳಿಗೆ ಇಲ್ಲವೇ ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Namma Metro: ನಮ್ಮ ಮೆಟ್ರೋದಿಂದ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಪರಿಚಯ; ಎಷ್ಟು ಮಂದಿ ಪ್ರಯಾಣಿಸಬಹುದು?

ಹೆಚ್ಚುತ್ತಿರುವ ಒತ್ತಡದ ಪರಿಣಾಮ

ಮೆಟ್ರೋ ರೈಲಿನಲ್ಲಿ ಈಗ ಪೀಕ್‌ ಅವರ್‌ ಸಂಚಾರ ಎನ್ನುವುದು ನಿಜಕ್ಕೂ ದುಸ್ವಪ್ನವೇ ಆಗಿದೆ. ಚಲ್ಲಘಟ್ಟದಿಂದ ನೇರವಾಗಿ ವೈಟ್‌ ಫೀಲ್ಡ್‌ ಕನೆಕ್ಷನ್‌ ಸಿಗುವುದರಿಂದ ಜನರು ಹೆಚ್ಚು ಹೆಚ್ಚು ಮೆಟ್ರೋ ರೈಲನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಜನರ ಒತ್ತಡ ಹೆಚ್ಚಿದೆ. ಈಗ ಎಲ್ಲ ರೀತಿಯ ಜನರೂ ಮೆಟ್ರೋ ಹತ್ತುವುದರಿಂದು ಕೆಲವರು ತಮ್ಮ ಕೆಟ್ಟ ಚಾಳಿಗಳನ್ನು ಇಲ್ಲಿಗೂ ತಂದಿದ್ದಾರೆ.

ಜನದಟ್ಟಣೆಯ ಸಂದರ್ಭದಲ್ಲಿ ರೈಲನ್ನು ಏರುವುದೇ ಕಷ್ಟವಾಗುತ್ತದೆ. ಒಳಗೆ ಹೋದರೆ ಉಸಿರಾಡಲಾಗದ ಒತ್ತೊತ್ತಾಗಿ ನಿಲ್ಲಬೇಕಾದ ಪರಿಸ್ಥಿತಿ. ಜತೆಗೆ ಬ್ಯಾಗ್‌ಗಳ ಒತ್ತಡ. ಇಂಥ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕಿರುಕುಳ ನೀಡಲು ಶುರು ಮಾಡುತ್ತಾರೆ. ಕೆಲವೊಮ್ಮೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಗೊತ್ತಾದರೂ ವಿರೋಧಿಸಲಾಗದ ಪರಿಸ್ಥಿತಿ ಇರುತ್ತದೆ. ನಾವು ಬೇಕೂಂತ ಮಾಡಿಲ್ಲ. ಇಷ್ಟೊಂದು ಜನ ಇದ್ದಾಗ ಒಬ್ಬರಿಗೊಬ್ಬರು ತಾಕುವುದನ್ನೇ ದೊಡ್ಡ ವಿಷಯ ಯಾಕೆ ಮಾಡುತ್ತೀರಿ ಎಂದು ತಿರುಗಿ ಪ್ರಶ್ನೆ ಕೇಳುತ್ತಾರೆ. ಇವರು ಮಾಡುವ ಕುಚೇಷ್ಟೆಗಳನ್ನು ಯಾವ ಸಿಸಿ ಕ್ಯಾಮೆರಾವೂ ಪತ್ತೆ ಹಚ್ಚುವುದು ಕಷ್ಟ.

ಇನ್ನು ಮೆಟ್ರೋಗಳಲ್ಲಿ ಈಗ ಜನರ ಬೈದಾಟ, ತಳ್ಳಾಟವೂ ಜಾಸ್ತಿಯಾಗಿದೆ. ಬಸ್‌ ಸ್ಟಾಂಡ್‌ಗಳ ವಾತಾವರಣವೇ ಇಲ್ಲೂ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿ, ಪೀಕ್‌ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳನ್ನು ಬಿಡುವುದು ಒಂದೇ ಮಾರ್ಗ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version