Site icon Vistara News

ಕುಟುಂಬ ಯೋಜನೆ ಅಳವಡಿಕೆ ಜನಾಂದೋಲನವಾಗಲಿ; ಸಚಿವ ಡಾ.ಕೆ.ಸುಧಾಕರ್‌ ಕರೆ

ಬೆಂಗಳೂರು: ಭಾರತದ ಜನಸಂಖ್ಯೆ 140 ಕೋಟಿಯ ಸಮೀಪದಲ್ಲಿದ್ದು, ಜನಸಂಖ್ಯೆ ಏರಿಕೆಗೆ ಮಿತಿ ಹಾಕಲು ಕುಟುಂಬ ಯೋಜನೆಯ ಅಳವಡಿಕೆ ಜನಾಂದೋಲನದಂತೆ ನಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕರೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ʼವಿಶ್ವ ಜನಸಂಖ್ಯಾ ದಿನಾಚರಣೆʼಯಲ್ಲಿ ಮಾತನಾಡಿದ ಸಚಿವರು, ಭಾರತ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿರುವುದು ಲಾಭದಾಯಕ ಎಂದು ಹೇಳಿದ್ದಾರೆ.

ಭಾರತಕ್ಕೆ ಯುವಜನತಯೇ ಶಕ್ತಿ

ಭಾರತದಲ್ಲಿ ಜನಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಭಾರತದ ಜನಸಂಖ್ಯೆ 140 ಕೋಟಿಗೆ ತಲುಪಿದ್ದು, ಸಮಾಜಕ್ಕೆ, ಪರಿಸರಕ್ಕಾಗುವ ದುಷ್ಪರಿಣಾಮವೇನು ಎಂದು ಸಹ ಆಲೋಚಿಸಬೇಕಿದೆ. ಆದರೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಜಗತ್ತಿನಲ್ಲಿ ಅತಿ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿದ ದೇಶಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಭಾರತದತ್ತ ನೋಡುತ್ತಿವೆ. ಇದಕ್ಕೆ ಕಾರಣ ಯುವಜನತೆ ಎಂದು ಸಚಿವರು ಹೇಳಿದರು.

ಕಡಿಮೆ ಮಕ್ಕಳಿದ್ದರೆ ಪ್ರಗತಿ

ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದರೆ ಖರ್ಚು ಹೆಚ್ಚುತ್ತದೆ. ನಾಲ್ಕು ಮಕ್ಕಳ ಬದಲು ಇಬ್ಬರಿದ್ದರೆ ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯವನ್ನು ನೀಡಬಹುದು. ಮಕ್ಕಳು ಹೆಚ್ಚಿದ್ದರೆ ನೈಸರ್ಗಿಕ ಸಂಪನ್ಮೂಲ ಹಾಗೂ ಭೌಗೋಳಿಕ ವಿಸ್ತೀರ್ಣ ಕೂಡ ಅಧಿಕವಾಗಿ ಬೇಕಾಗುತ್ತದೆ. ಹೀಗಾಗಿ ಕಡಿಮೆ ಮಕ್ಕಳಿದ್ದರೆ ಪ್ರಗತಿ ಎಂದು ಸಚಿವರು ಹೇಳಿದರು.

ಸಣ್ಣ ಸಂಸಾರವಿದ್ದರೆ ಆರ್ಥಿಕತೆ ಉತ್ತಮವಾಗಿರುತ್ತದೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸುವಲ್ಲಿ ಹಾಗೂ ಕುಟುಂಬ ಯೋಜನೆಯ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಇನ್ನಷ್ಟು ಜಾಗೃತಿ ಕಾರ್ಯ ನಡೆಯಬೇಕು. ಸ್ಥಳೀಯ ಆಸ್ಪತ್ರೆಗಳಲ್ಲಿ ಕೂಡ ಕುಟುಂಬ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಲಿದೆ ಎಂದು ಸಚಿವ ಸುಧಾಕರ್‌ ಹೇಳಿದರು.

ಇದನ್ನೂ ಓದಿ: ಮತ್ತೊಮ್ಮೆ ಬೀದಿಗಿಳಿದ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು: ಕಾಯಂ ಸಾಧ್ಯವಿಲ್ಲ ಎಂದ ಸಚಿವ ಡಾ.ಕೆ.ಸುಧಾಕರ್‌

Exit mobile version