Site icon Vistara News

BKS Varma Death News : ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ನಿಧನ

b k s varma

#image_title

ಬೆಂಗಳೂರು: ಜನಮಾನಸದಲ್ಲಿ “ಅಭಿನವ ರವಿವರ್ಮʼʼ ಎಂದೇ ಖ್ಯಾತರಾದ ಬಿ.ಕೆ.ಎಸ್. ವರ್ಮಾ (BKS Varma) ಇಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಹೃದಯದ ಸಮಸ್ಯೆಯಿಂದಾಗಿ ಕಳೆದ ಎರಡು ದಿನಗಳಿಂದ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 9.15 ರ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರ ಅಂತ್ಯ ಸಂಸ್ಕಾರವು ಇಂದೇ ನಡೆಯಲಿದೆ. ಮಧ್ಯಾಹ್ನ 2.30ರ ವೇಳೆಗೆ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಬಿ. ಕೆ. ವರ್ಮಾ ಅವರ ಮೂಲ ಹೆಸರು ಶ್ರೀನಿವಾಸ ಆಚಾರ್ಯ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಕಂಡ ರವಿವರ್ಮಾರ ಚಿತ್ರಕಲೆಯೇ ಸ್ಫೂರ್ತಿಯಗಿ, ತಾನೂ ರವಿವರ್ಮನಂತೆಯೇ ಪರಿಪೂರ್ಣ ಕಲಾವಿದನಾಗಬೇಕೆಂಬ ಆಸೆಯಿಂದ ತಮ್ಮ ಹೆಸರನ್ನು ಬಿ.ಕೆ. ಶ್ರೀನಿವಾಸ ವರ್ಮಾ ಎಂದು ಬದಲಿಸಿಕೊಂಡು ಮುಂದೆ ʼಬಿ.ಕೆ.ಎಸ್. ವರ್ಮಾʼ ಎಂದೇ ಪ್ರಸಿದ್ಧರಾದರು.

1949ರ ಮೇ 5 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಕೃಷ್ಣಮಾಚಾರ್ಯ ಮತ್ತು ಚಿತ್ರಕಲಾವಿದೆ ಬಿ.ಎಸ್. ಜಯಲಕ್ಷ್ಮಿ ಅವರ ಮಗನಾಗಿ ಜನಿಸಿದ ಶ್ರೀನಿವಾಸ ಆಚಾರ್ಯ ಬಾಲ್ಯದಿಂದಲೇ ನೆಲ, ಗೋಡೆ, ರಸ್ತೆ ಹೀಗೆ ಎಲ್ಲೆಡೆಯೂ ಚಿತ್ರ ರಚಿಸಹತ್ತಿದರು. ಬಸವನಗುಡಿ ರಸ್ತೆಯಲ್ಲಿ ವಿರಳ ಸಂಚಾರವಿದ್ದ ರಸ್ತೆ, ಅವರ ಕ್ಯಾನ್ವಾಸ್ ಆದದ್ದನ್ನು ಕಂಡು ಎ.ಎಸ್. ಮೂರ್ತಿ ‘ನೆಲವೇ ಕಪ್ಪು ಹಲಗೆ’ ಎಂಬ ಲೇಖನ ಬರೆದು ಇವರ ಬಗ್ಗೆ ಗಮನ ಸೆಳೆದರು. ಕಲಾಮಂದಿರದಲ್ಲಿ ಅ.ನ. ಸುಬ್ಬರಾಯರ ಗರಡಿ ಸೇರಿದ ಬಿ.ಕೆ.ಎಸ್. ವರ್ಮ ತಮ್ಮ ತುಡಿತಗಳ ಸೆಳೆತಕ್ಕೆ ಸಿಲುಕಿ ಮದರಾಸಿಗೆ ಪಯಣಿಸಿದರು.

ಮೈಸೂರಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು ಕಾರ್ಡಿನಲ್ಲಿ ಬರೆದ ಇವರ ಚಿತ್ರ ಮೆಚ್ಚಿ ನೂರು ರೂಪಾಯಿ ಬಹುಮಾನವನ್ನೂ ಕೂಡ ನೀಡಿದರು. ಸರ್.ಎಂ. ವಿಶ್ವೇಶ್ವರಯ್ಯ ಅವರ ಮನೆಯಲ್ಲಿ ಅವರದೇ ಚಿತ್ರ ರಚಿಸಿ ಪ್ರಶಂಸೆ ಪಡೆದವರು. ರಸ ಋಷಿ ಕುವೆಂಪು ಅವರನ್ನು ಭೇಟಿಯಾಗಿ ಅವರ ಚಿತ್ರ ಕೇಳಿ ನಕಾರಾತ್ಮಕ ಉತ್ತರ ಪಡೆದು, ಅವರೆದುರಿಗೇ ನಿಂತು ಉಗುರಿನಲ್ಲಿ ಬುದ್ಧನ ಚಿತ್ರ ರಚಿಸಿ ಕೊಟ್ಟರು. ಇದಕ್ಕೆ ಮಾರು ಹೋದ ಕುವೆಂಪು ‘ರಸಕೊಳದ ಮರಿಮೀನಾಗು, ನವಗಗನದಿ ಕಿರು ರತ್ನವಾಗು, ಹಿರಿಹಿಗ್ಗಿ ನೀನು ಬಿರಿಮೊಗ್ಗಾಗು ಕಲ್ಪನೆಯಲಿ ತೇಲಿ ದಡವ ಸೇರು’ ಎಂದು ಶುಭ ಹಾರೈಕೆ ಬರೆದು ವಿವೇಕಾನಂದರ ಪುಸ್ತಕವನ್ನು ಬಹುಮಾನವಾಗಿತ್ತು ಫಲ ತಾಂಬೂಲ ನೀಡಿ ಗೌರವಿಸಿದ್ದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಕಂಡ ರವಿಮರ್ವನ ಚಿತ್ರಕಲೆಯೇ ಸ್ಫೂರ್ತಿಯಗಿ, ತಾನೂ ರವಿವರ್ಮನಂತೆಯೇ ಪರಿಪೂರ್ಣ ಕಲಾವಿದನಾಗಬೇಕೆಂಬ ಆಸೆಯಿಂದ ಬಿ.ಕೆ. ಶ್ರೀನಿವಾಸ ಆಚಾರ್ಯ ಎನ್ನುವುದನ್ನು ಬಿ.ಕೆ. ಶ್ರೀನಿವಾಸ ವರ್ಮಾ ಎಂದು ತಮ್ಮ ಹೆಸರು ಬದಲಿಸಿಕೊಂಡು ಮುಂದೆ ʼಬಿ.ಕೆ.ಎಸ್. ವರ್ಮಾʼ ಎಂದೇ ಪ್ರಸಿದ್ಧರಾದರು.

ʼನಾನು ಸಣ್ಣ ಚಿಗುರಾಗಿದ್ದೆ. ಈ ನಾಡಿನ ಜನರು ನೀರೆರೆದು ದೊಡ್ಡ ಮರವನ್ನಾಗಿ ಮಾಡಿದ್ದಾರೆ. ಹಾಗಾಗಿ ಅವರಿಂದಲೇ ನಾವುʼ ಎಂದು ಕರ್ನಾಟಕ ರತ್ನ ಡಾ. ರಾಜಕುಮಾರ್ ಅವರು ಹೇಳಿದ್ದನ್ನು ನೆನೆದು, ಅವರನ್ನು ವೃಕ್ಷದಲ್ಲಿ ಚಿತ್ರಿಸಿದರು. ಭಾವಗೀತೆ, ಭಕ್ತಿಗೀತೆಯ ನಡುವೆ ವರ್ಮಾ ಅವರು ಚಿತ್ರಗಳನ್ನು ರಚಿಸುವ ಭಾವ, ಭಂಗಿಗಳು ಕಲೆಯನ್ನು ಜನಸಾಮಾನ್ಯರ ಹೃದಯಕ್ಕೆ ತರುತ್ತವೆ. ಸದ್ಯ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಅಪೂರ್ವ ಚಿತ್ರವೊಂದನ್ನು ರೂಪಿಸುತ್ತಿದ್ದರು.

ಆರನೇ ವಯಸ್ಸಿನಿಂದ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ಚಿತ್ರಕಲೆಯು ಇಂದು ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡಿವೆ. ಚಿತ್ರಕಲಾ ರಸಿಕರ ಮನ ತಣಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಇಂದು ಎಲ್ಲೆಡೆ ಬಳಸುವ ಭುವನೇಶ್ವರಿ ತಾಯಿಯ ಚಿತ್ರವನ್ನು ರಚಿಸಿ ಕನ್ನಡಿಗರಿಗೆ ತಾಯಿ ಭುವನೇಶ್ವರಿಯ ವ್ಯಕ್ತ ರೂಪವನ್ನು ತೋರಿದ್ದಾರೆ.

ಹಲವಾರು ಚಲನಚಿತ್ರಗಳಿಗೆ ಕಲಾ ನಿರ್ದೇಶಗಕರಾಗಿಯೂ ಕೆಲಸಮಾಡಿರುವ ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಬೆಂಗಳೂರು ವಿವಿ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಶ್ರೀ. ಡಾ. ಬಿ.ಕೆ.ಎಸ್. ವರ್ಮಾ ಅವರಿಗೆ ವಿಸ್ತಾರ ನ್ಯೂಸ್‌ “ಕಾಯಕಯೋಗಿ” ಪ್ರಶಸ್ತಿ ನೀಡಿ ಗೌರವಿಸಿತ್ತು.

Exit mobile version