ಉಡುಪಿ: ಖ್ಯಾತ ಹುಲಿ ವೇಷದಾರಿ (tiger dance) ಅಶೋಕ್ ರಾಜ್ ಅವರು ಮೃತಪಟ್ಟಿದ್ದಾರೆ. ಮಹಾನವಮಿ ಸಂದರ್ಭದ ಸಾಂಪ್ರದಾಯಿಕ ಹುಲಿ ವೇಷಕ್ಕೆ ಹೊಸ ಆಯಾಮ ನೀಡಿದ್ದ ಖ್ಯಾತ ಕಲಾವಿದರಾಗಿದ್ದ ಅವರು ಅಲ್ಪ ಕಾಲದ ಅಸೌಖ್ಯದಿಂದ ಕೊನೆಯಸಿರು ಎಳೆದಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಉಡುಪಿಯ ಕಾಡುಬೆಟ್ಟು ನಿವಾಸಿಯಾದ ಅಶೋಕ್ ರಾಜ್, ಉಡುಪಿ ಅಷ್ಟಮಿ ಹಾಗೂ ವಿಟ್ಲಪಿಂಡಿಯ ವೇಳೆ ತಮ್ಮ ತಂಡದ ಜೊತೆಗೆ ಹುಲಿ ವೇಷ ಧರಿಸಿ ಹವಾ ಸೃಷ್ಟಿಸುತ್ತಿದ್ದರು. ಕಳೆದ ಮೂರು ದಶಕಗಳಲ್ಲಿ ಹುಲಿ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ಅವರು ಹುಲಿ ವೇಷವನ್ನು ರಾಜ್ಯ ಮತ್ತು ದೇಶಾದ್ಯಂತ ಪ್ರಚಾರಪಡಿಸಿದ್ದರು. ಅವರಿಂದ ಪ್ರೇರಣೆ ಪಡೆದ ನೂರಾರು ಮಂದಿ ಹುಲಿ ಕುಣಿತವನ್ನು ಸ್ಫೂರ್ತಿಯಾಗಿ ಮಾಡಿಕೊಂಡಿದ್ದರು.
ಅಶೋಕ್ ರಾಜ್ ಕಾಡುಬೆಟ್ಟು ಅವರ ಇಡೀ ಕುಟುಂಬವೇ ಹುಲಿವೇಷಕ್ಕೆ ಮುಡಿಪಾಗಿತ್ತು. ನಟಿ ಸುಷ್ಮಾ ರಾಜ್, ಅಶೋಕ್ ರಾಜ್ ಕಾಡುಬೆಟ್ಟು ಅವರ ಮಗಳು. ಅಶೋಕ್ ಅವರು ಕಳೆದ ಬಾರಿ ನವರಾತ್ರಿಯ ಸಂದರ್ಭ ಬೆಂಗಳೂರಿನಲ್ಲಿ ಹುಲಿವೇಷ ಧರಿಸಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಅಸ್ವಸ್ಥರಾಗಿ, ಬಳಿಕ ಆಸ್ಪತ್ರೆ ಸೇರಿದ್ದರು.
ಬಂಡೀಪುರದಲ್ಲಿ ಹುಲಿ ಸಾವು
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಒಂದು ಹುಲಿ ಮೃತಪಟ್ಟಿದೆ (tiger death in bandipur). ಮತ್ತೊಂದು ಹುಲಿ ಜೊತೆ ಕಾದಾಟ ನಡೆಸಿ ಉಂಟಾದ ಗಾಯದಿಂದ ಸತ್ತಿದೆ ಎನ್ನಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮದ್ದೂರು ವಲಯ ವ್ಯಾಪ್ತಿಯಲ್ಲಿ 3ರಿಂದ 4 ವರ್ಷದ ಗಂಡು ಹುಲಿ ಸಾವನ್ನಪ್ಪಿದೆ. ಮತ್ತೊಂದು ಹುಲಿ ಜೊತೆ ಕಾದಾಟ ನಡೆಸುವಾಗ ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಅದರಿಂದಾಗಿ ಸಾವಿಗೀಡಾಗಿದೆ.
ಅಲ್ಲದೆ ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಹೊಟ್ಟೆಯಲ್ಲಿ ಮುಳ್ಳು ಹಂದಿಯ ಮುಳ್ಳುಗಳೂ ಪತ್ತೆಯಾಗಿವೆ. ಬಹುಶಃ ಮುಳ್ಳು ಹಂದಿಯನ್ನು ಬೇಟೆಯಾಡಿ ಸೇವಿಸಿದಾಗ ಈ ಮುಳ್ಳುಗಳು ಹೊಟ್ಟೆ ಸೇರಿರಬಹುದು. ಹೊಟ್ಟೆಯ ಒಳ ಭಾಗದಲ್ಲಿ ಮುಳ್ಳುಗಳು ಚುಚ್ಚಿ ರಕ್ತ ಸ್ರಾವವಾದ ಪರಿಣಾಮದಿಂದಲೂ ಹುಲಿ ಮೃತಪಟ್ಟಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ನಿನ್ನೆ ಸಂಜೆ ಇದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: Gas Explosion: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಕಾಣಿಸಿಕೊಂಡ ಬೆಂಕಿ; ಕನಿಷ್ಠ ಇಬ್ಬರ ಸಾವು