ಮಂಡ್ಯ: ಜಿಲ್ಲೆಯ ಪಾಂಡವಪುರದ ಮಿನಿ ವಿಧಾನಸೌಧದಲ್ಲಿ ನಡೆದ ತಹಸೀಲ್ದಾರ್ ಬೀಳ್ಕೊಡುಗೆ ಸಮಾರಂಭ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅದ್ದೂರಿಯಾಗಿ ವೇದಿಕೆ ನಿರ್ಮಿಸಿ, ಡ್ರೋನ್‌ಗಳನ್ನು ಬಳಸಿ, ಮೋಜು ಮಸ್ತಿ ಮಾಡಿದ್ದಲ್ಲದೆ, ಅಧಿಕಾರಿಗಳು ಹುಚ್ಚೆದ್ದು ಕುಣಿದಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಪಾಂಡವಪುರ ತಹಸೀಲ್ದಾರ್ ಪ್ರಮೋದ್ ಪಾಟೀಲ್ ಬೆಂಗಳೂರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭರ್ಜರಿ ಬೀಳ್ಕೊಡುಗೆ ನೀಡಿದ್ದಾರೆ. ಮಿನಿ ವಿಧಾನಸೌಧದಲ್ಲಿ ಬೀಳ್ಕೊಡುಗೆಗೆ ಅದ್ದೂರಿ ವೇದಿಕೆ ನಿರ್ಮಾಣ ಮಾಡಿದ್ದಲ್ಲದೆ, ತಹಸೀಲ್ದಾರ್‌ಗೆ ಹೂವಿನ ಸುರಿಮಳೆಗೈದು, ಕೇಕ್ ಕತ್ತರಿಸುವ ಜತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಈ ಮೂಲಕ ಸರ್ಕಾರಿ ಕಚೇರಿಯನ್ನು ಮದುವೆ ಛತ್ರದಂತೆ ಮಾರ್ಪಾಟು ಮಾಡಿಕೊಳ್ಳಲಾಗಿತ್ತು.
ಈ ಸಂಭ್ರಮಾಚರಣೆಗೆ ತಹಸೀಲ್ದಾರ್ ನಯನ, ಸರ್ಕಲ್ ಇನ್‌ಸ್ಪೆಕ್ಟರ್ ಸುಮಾ ಹಾಗೂ ಉಪವಿಭಾಗಾಧಿಕಾರಿ ಚಾಲನೆ ನೀಡಿದ್ದರು ಎನ್ನಲಾಗಿದೆ. ಸಂಭ್ರಮಾಚರಣೆಗೆ ಗ್ರೇಡ್-2 ತಹಸೀಲ್ದಾರ್ ನಯನ ಅವರ ತಮ್ಮ ಕಚೇರಿಯನ್ನೇ ಬಿಟ್ಟುಕೊಟ್ಟಿದ್ದಾರೆ. ಸಾರ್ವಜನಿಕರ ಸಭೆ ಸಮಾರಂಭಗಳಿಗೆ ನೀತಿ ನಿಯಮ ವಿಧಿಸುವ ಅಧಿಕಾರಿಗಳೇ ಈ ರೀತಿಯಾಗಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | ಮಂಡ್ಯದಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ, ಮೂವರು ಸಾವು