ಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಿಡಿಲು (Karnataka Rain) ಬಡಿದು ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಹುಲ್ಲೆಮಾಳ ಗ್ರಾಮದ ಹೊರವಲಯದಲ್ಲಿ ಸೋಮವಾರ ನಡೆದಿದೆ.
ಹುಲ್ಲೆಮಾಳ ಗ್ರಾಮದ ಮುತ್ತಯ್ಯ (58) ಮೃತ ರೈತರು. ಮುತ್ತಯ್ಯ ಅವರು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಮಳೆ ಆರಂಭವಾಗಿದೆ. ಹೀಗಾಗಿ ಸಮೀಪದ ಮರದ ಕೆಳಗೆ ಆಶ್ರಯ ಪಡೆಯಲು ಅವರು ತೆರಳಿದ್ದಾರೆ. ಈ ವೇಳೆ ಮರಕ್ಕೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ರೈತನ ಸಾವಿನಿಂದ ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Lokayukta Raid: ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತ ದಾಳಿ; ಭ್ರಷ್ಟರ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ
ಬೆಂಗಳೂರು, ಮೈಸೂರು ಸೇರಿ 16 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್
ಬೆಂಗಳೂರು: ಸೈಕ್ಲೋನ್ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ (Weather Report) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಹಾಗೂ ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಮೇಲಿನ ಜಿಲ್ಲೆಗಳಿಗೆ ಎರಡು ದಿನಗಳು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು ಹಾಗೂ ಕೊಪ್ಪಳ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಕೆಲವು ಕಡೆಗಳಲ್ಲಿ ಸಂಜೆ ನಂತರ ಗುಡುಗು, ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮುಂದುವರಿದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಉತ್ತರ ಕನ್ನಡ ಸೇರಿ ಒಳನಾಡಿನ ಇತರೆ ಭಾಗದಲ್ಲಿ ಒಣ ಹವೆ ಇರಲಿದ್ದು, ಯಾವುದೇ ಮಳೆಯ ಮುನ್ಸೂಚನೆಯನ್ನು ನೀಡಿಲ್ಲ.
ಗರಿಷ್ಠ ಉಷ್ಣಾಂಶದ ಎಚ್ಚರಿಕೆ
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಎಚ್ಚರಿಕೆ ಇದ್ದರೆ, ಇತ್ತ ಕರಾವಳಿಯ ಕೆಲವು ಕಡೆಗಳಲ್ಲಿ ತಾಪಮಾನ ಏರಿಕೆ ಆಗಲಿದೆ. ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಗರಿಷ್ಠ ಉಷ್ಣಾಂಶ ಏರಿಕೆ ಆಗಲಿದೆ.
ಇದನ್ನೂ ಓದಿ: Amit Shah: ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತೀರಾ?; ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ
ಮಳೆ ಪ್ರಮಾಣ
ಭಾನುವಾರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಣಹವೆ ಇತ್ತು. ಚಾಮರಾಜನಗರ ಜಿಲ್ಲೆಯ ಬಂಡೀಪುರ 4 ಸೆಂ.ಮೀ ಮಳೆ ಸುರಿದಿದೆ. ಗರಿಷ್ಠ ಉಷ್ಣಾಂಶ 40.0 ಡಿಗ್ರಿ ಸೆಲ್ಸಿಯಸ್ ರಾಯಚೂರಲ್ಲಿ ದಾಖಲಾಗಿದೆ.