ನವದೆಹಲಿ: ಹಾಸನ ಅಭಿವೃದ್ಧಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಡ್ಡಿಯಾಗಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸೇರಿ ಅನೇಕ ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾಡಿ ಮನವಿ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೇನೆ. ನಮ್ಮ ರಾಜ್ಯದ ನೀರಾವರಿ ವಿಚಾರದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಕಾವೇರಿ, ಕೃಷ್ಣಾ ಮಹಾದಾಯಿ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ನೀರಾವರಿ ಯೋಜನೆಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಿಚಾರವಾಗಿ ವಿವರವಾಗಿ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದೇನೆ. ರಾಜ್ಯದ ಯೋಜನೆಗಳಿಗೆ ಆಗಿರುವ ಅನ್ಯಾಯ ವಿವರಿಸಿದ್ದೇನೆ ಎಂದರು.
ಈ ಜಾಗದಲ್ಲಿ ಕೂತು ತೀರ್ಮಾನ ಮಾಡೊದು ಹಿಂಸೆಯಾಗಿದೆ ದೇವೇಗೌಡರೇ ಎಂದು ಮೋದಿ ಹೇಳಿದ್ದಾರೆ. ನದಿ ನೀರಿನ ವ್ಯಾಜ್ಯಗಳ ತೀರ್ಮಾನ ಕಷ್ಟವಾಗಿದೆ. ನಮ್ಮದೇ ಸರ್ಕಾರ ಇದ್ದರೂ ನರ್ಮದಾ ತೀರ್ಮಾನ ಕಷ್ಟವಾಗುತ್ತಿದೆ. ನಮ್ಮವರೇ ನಮಗೆ ವಿರೋಧ ಮಾಡುತ್ತಿದ್ದಾರೆ. ಎಲ್ಲಾ ನದಿಗಳದ್ದು ವಿವಾದಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುವುದು? ನಮ್ಮದೇ ಸರ್ಕಾರ ಇದ್ದರೂ ಸಹ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳೋಕೆ ಆಗುತ್ತಾ ಇಲ್ಲ ಎಂದು ಮೋದಿ ಹೇಳಿದ್ದಾರೆ ಎಂದು ದೇವೇಗೌಡರು ಹೇಳಿದರು.
ಹಾಸನ ಜಿಲ್ಲೆ ಅಭಿವೃದ್ಧಿ ಆಗಲು ಯಡಿಯೂರಪ್ಪ ಬಿಡಲಿಲ್ಲ ಎಂದು ಆರೋಪಿಸಿದ ದೇವೇಗೌಡ, ಯಡಿಯೂರಪ್ಪ ಹಾಸನ ಜಿಲ್ಲೆ ಅಭಿವೃದ್ಧಿ ಮಾಡುವುದಕ್ಕೆ ಬಿಟ್ಟಿಲ್ಲ. ಹಾಸನದ ಅಭಿವೃದ್ಧಿಗೆ ಯಡಿಯೂರಪ್ಪ ಏನನ್ನೂ ಸಹ ನೀಡಲೇ ಇಲ್ಲ. ಹಾಸನದಲ್ಲಿ ಏರ್‌ಪೋರ್ಟ್ ವಿಚಾರ ಸೇರಿದಂತೆ ಹಲವು ವಿಚಾರದಲ್ಲಿ ಹಾಸನ ಅಭಿವೃದ್ಧಿ ಆಗಬೇಕಿತ್ತು, ಆದರೆ ಇದುವರೆಗೂ ಸಹ ಆಗಿಲ್ಲ. ಹಾಸನ ಅಭಿವೃದ್ಧಿಯಾಗುವುದಕ್ಕೆ ಯಡಿಯೂರಪ್ಪ ಬಿಟ್ಟಿಲ್ಲ.
ಹಾಸನ ಏರ್ಪೋರ್ಟ್ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಏರ್ಪೋರ್ಟ್‌ಗೆ ಯಡಿಯೂರಪ್ಪ ಅಡ್ಡಗಾಲು ಹಾಕುತ್ತಿದ್ದರು. ಏನೇ ಆದರೂ ಏರ್ ಪೋರ್ಟ್ ಕೆಲಸ ಮಾಡಲಿಲ್ಲ. ನೀವೇ ತೀರ್ಮಾನ ಮಾಡಿ ಎಂದು ಮೋದಿಯವರಿಗೆ ಹೇಳಿದ್ದೇನೆ ಎಂದರು.
ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆ ವಿವರವಾಗಿ ಹೇಳಿದ್ದೇನೆ ಎಂದ ದೇವೇಗೌಡ, ಕುಂಚಿಟಿಗ ಸಮಯದಾಯ 6-7 ತಾಲೂಕುಗಳಲ್ಲಿದೆ. ಕುಂಚಿಟಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಕುಂಚಿಟಿಗ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಕುಂಚಿಟಿಗ ಸಮುದಾಯವನ್ನು ಒಕ್ಕಲಿಗ ಸಮುದಾಯದ ಉಪ ಪಂಗಡವಾಗಿ ಸೇರ್ಪಡೆ ಮಾಡಬೇಕು ಎಂದು ಮೋದಿಯವರಿಗೆ ಒತ್ತಾಯಿಸಿದ್ದೇನೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ 150 ಶಾಸಕರನ್ನು ಗೆಲ್ಲುವ ಗುರಿ ಹೊಂದಿರುವ ಕುರಿತು ಪ್ರತಿಕ್ರಯಿಸಿದ ದೇವೇಗೌಡ, ಎಲ್ಲರೂ 150 ಎಂದು ಹೇಳುತ್ತಿದ್ದಾರೆ. ನಾವು ಅಷ್ಟೊಂದು ಹೇಳುವುದಕ್ಕೆ ಆಗುವುದಿಲ್ಲ. ನಮ್ಮದು 123 ಗುರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದಿಂದ ಹೊರ ಹೋಗಿದ್ದ ಕೆಲವರು ವಾಪಸ್ ಬರುತ್ತಿದ್ದಾರೆ. ಪಂಚರತ್ನ ಯೋಜನೆ ಜಾರಿ ಮಾಡುವ ಭರವಸೆ ನೀಡಿದ್ದೇವೆ ಎಂದರು.
ಇದನ್ನೂ ಓದಿ | ಒಕ್ಕಲಿಗ ಮೀಸಲಾತಿ | ಸಂವಿಧಾನಬದ್ದ ಮೀಸಲು ಕೊಡಿ ಎಂದ ಚುಂಚಶ್ರೀ; ಪಕ್ಷ ಭೇದ ಮರೆತು ಹೋರಾಡುತ್ತೇವೆ ಎಂದ R. ಅಶೋಕ್