Site icon Vistara News

ಫರ್ಟಿಲೈಜರ್ಸ್‌ ಅಂಗಡಿಯಲ್ಲಿಯೇ ವಿಷ ಸೇವಿಸಿದ್ದ ರೈತ: ಚಿಕಿತ್ಸೆ ಫಲಿಸದೆ ಸಾವು

ರೈತ ಚಿಕಿತ್ಸೆ ಫಲಿಸದೆ ಸಾವು

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಗಂಜ್ (ಎಪಿಎಂಸಿ) ನಲ್ಲಿನ ಪಾರಸ್ ಫರ್ಟಿಲೈಜರ್ಸ್‌ ಎಂಬ ಹೆಸರಿನ ಅಂಗಡಿಯಲ್ಲಿ ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಶನಿವಾರ (ಜು.೩೦) ಮೃತಪಟ್ಟಿದ್ದಾರೆ. ತಾಲೂಕಿನ ಹನಕುಂಟಿ ಗ್ರಾಮದ ರೈತ ರವಿ ಲಕ್ಕುಂಡಿ (38) ಎಂಬ ರೈತ ಮೃತ ದುರ್ದೈವಿಯಾಗಿದ್ದಾರೆ.

ಸುಮಾರು 6 ಎಕರೆ ಜಮೀನು ಹೊಂದಿದ್ದ ರೈತ ರವಿ ಲಕ್ಕುಂಡಿ ಅವರು ನಗರದ ಶ್ರೀ ಗವಿಸಿದ್ದೇಶ್ವರ ಗಂಜ್ (ಎಪಿಎಂಸಿ) ನಲ್ಲಿರುವ ಪಾರಸ್ ಫರ್ಟಿಲೈಜರ್ಸ್ ಎಂಬ ಅಂಡಗಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಲೇವಾದೇವಿ ಹೊಂದಿದ್ದರು. ತಾನು ಬೆಳೆದ ಬೆಳೆಗಳನ್ನು ಇದೇ ಅಂಗಡಿಗೆ ತರುತ್ತಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಲೇವಾದೇವಿ ಇರುವ ಅಂಗಡಿಗೆ ಬಂದಿದ್ದ ರವಿ ಬೆಳೆಗಾಗಿ ಮರುಸಾಲ ಕೇಳಿದ್ದರು ಎನ್ನಲಾಗಿದೆ. ಆದರೆ, ಅಲ್ಲಿ ಏನು ನಡೆದಿದೆ ಎಂಬ ವಿಷಯ ಯಾರಿಗೂ ತಿಳಿದಿಲ್ಲ. ಬಳಿಕ ಅಂಗಡಿಯಲ್ಲಿಯೇ ರೈತ ರವಿ ಕ್ರಿಮಿನಾಶಕ ಸೇವಿಸಿದ್ದಾರೆ. ತಕ್ಷಣ ಅಂಗಡಿ ಮಾಲೀಕರು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಿ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ರವಿ ಶನಿವಾರ ಮೃತಪಟ್ಟಿದ್ದಾರೆ.

ಇದನ್ನೂ ಓದಿ | ಕೊಪ್ಪಳದಲ್ಲಿ ಮಳೆಯಿಂದ ನೆಲಕ್ಕುರುಳಿದ ಬೆಳೆ; ನೀರು ತುಂಬಿದ ಗುಂಡಿಗೆ ಬಿದ್ದು ಬಾಲಕಿ ಸಾವು

ಇದರಿಂದ ಫರ್ಟಿಲೈಜರ್ಸ್ ಅಂಗಡಿ ಬಳಿ ಬಂದ ಮೃತನ ಕುಟುಂಬಸ್ಥರು ಹಾಗೂ ಸಂಬಂಧಿಕರು ರೈತ ರವಿ ಸಾವಿಗೆ ಅಂಗಡಿಯವರೇ ಕಾರಣ ಎಂದು ಆರೋಪಿಸಿದ್ದಾರೆ. ರವಿ ಸಾವಿನಿಂದಾಗಿ ನಾಲ್ಕು‌ ಮಕ್ಕಳು, ಪತ್ನಿ ಅನಾಥವಾಗಿದ್ದು ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಮೃತ ರೈತ ರವಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ರೈತ ರವಿ ನಮ್ಮ ಅಂಗಡಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಲೇವಾದೇವಿ ಮಾಡುತ್ತಿದ್ದರು. ರವಿ ವಿಷ ಕುಡಿದು ಮೃತಪಟ್ಟಿರಿವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅಂಗಡಿಯ ಹೊರಗೆ ವಿಷ ಕುಡಿದಾಗ ನಾವೇ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರೇ ಇನ್ನೂ ಬಾಕಿ ಕೊಡಬೇಕು. ವ್ಯವಹಾರದ ಪಟ್ಟಿಯನ್ನು ಅವರಿಗೆ ನೀಡಿದ್ದೇವೆ, ಪರಿಶೀಲಿಸಲಿ ಎಂದು ಅಂಗಡಿಯ ಮಾಲೀಕರು ಹೇಳಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ.

Exit mobile version