Site icon Vistara News

ಸುಟ್ಟುಹೋದ ಟಿಸಿ 24 ಗಂಟೆಯಲ್ಲಿ ಬದಲು: ಸಚಿವ ವಿ. ಸುನಿಲ್ ಕುಮಾರ್

ಸಚಿವ ವಿ.ಸುನಿಲ್ ಕುಮಾರ್

ಶಿವಮೊಗ್ಗ: . ರಾಜ್ಯದ 250 ಕಡೆ ಟಿಸಿ ಬ್ಯಾಂಕ್, 162 ಟಿಸಿ ರಿಪೇರಿ ಕೇಂದ್ರಗಳನ್ನು ತೆರೆಯಲಾಗಿದ್ದು, ಟಿಸಿ ಸುಟ್ಟ 24 ಗಂಟೆಯೊಳಗೆ ಬದಲಾಯಿಸುವ ಪ್ರಕ್ರಿಯೆಯಲ್ಲಿ 80% ರಿಂದ 90% ಪ್ರಗತಿ ಸಾಧಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್‍ಕುಮಾರ್ ಹೇಳಿದ್ದಾರೆ.

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ನಗರದ ನ್ಯೂ ಮಂಡ್ಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೆಸ್ಕಾಂ ನಗರ ವಿಭಾಗೀಯ ಕಚೇರಿ-2 ರ ಹಾಗೂ ಘಟಕ-6ರ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು.

ರೈತರ ಸುಟ್ಟ ಟಿಸಿ ಬದಲಾವಣೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದ್ದು ಕೇವಲ 24 ಗಂಟೆಗಳಲ್ಲಿ ಸುಟ್ಟ ಟಿಸಿ ಬದಲಾಯಿಸುವ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ. ರಾಜ್ಯದಲ್ಲಿ ಕಳೆದ ತಿಂಗಳು ಟ್ರಾನ್ಸ್‌ಫಾರ್ಮರ್‌ ನಿರ್ವಹಣೆಗಾಗಿ 10 ದಿನಗಳ ವಿದ್ಯುತ್ ಪರಿವರ್ತಕ ಅಭಿಯಾನ ಕೈಗೊಂಡು ಎಲ್ಲ ಅಧಿಕಾರಿ/ನೌಕರರು ತಮ್ಮ ಸುತ್ತಮುತ್ತ ಇರುವ ಟಿಸಿಗಳನ್ನು ಪರಿಶೀಲಿಸಿ, ರಾಜ್ಯದಲ್ಲಿ ಸುಮಾರು 8 ರಿಂದ 9 ಲಕ್ಷ ಟಿಸಿಗಳ ನಿರ್ವಹಣೆ ಮಾಡುವ ಮೂಲಕ ಹೊಸ ದಾಖಲೆ ಮಾಡಲಾಗಿದೆ.

ಬೇಸಿಗೆಯಲ್ಲಿ ವಿದ್ಯುತ್ ಕಡಿತ, ಲೋಡ್‍ಶೆಡ್ಡಿಂಗ್ ಆಗಲಿದೆ ಎಂಬ ಅನುಮಾನ ಜನರಲ್ಲಿ ಹೆಚ್ಚಿತ್ತು. ಆದ್ದರಿಂದ ಏಪ್ರಿಲ್, ಮೇ ತಿಂಗಳಲ್ಲಿ ಎದುರಾಗಬಹುದಾಗಿದ್ದ ಸವಾಲುಗಳ ಕುರಿತು ನವೆಂಬರ್, ಡಿಸೆಂಬರ್ ತಿಂಗಳಲ್ಲಿಯೇ ಎಚ್ಚರಿಕೆ ವಹಿಸಲಾಗಿತ್ತು. ಬೇರೆ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಅಡಚಣೆಯಾಗಿರಬಹುದು. ಆದರೆ ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗಿ ವಿದ್ಯುತ್ ಅಡಚಣೆಯಾಗಿಲ್ಲ. ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ.

ಮುಖ್ಯಮಂತ್ರಿಯವರು ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಉಚಿತವಾಗಿ 75 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದು, ಲಕ್ಷಾಂತರ ಜನರು ಈ ಯೋಜನೆ ಉಪಯೋಗ ಪಡೆಯಲಿದ್ದಾರೆ. ಜನಸ್ನೇಹಿ ವಿದ್ಯುತ್ ಉತ್ಪಾದನೆಗಾಗಿ ಹಸಿರು ವಿದ್ಯುತ್‍ಗೆ ಹೆಚ್ಚು ಒತ್ತು ನೀಡಿ, ಹೈಬ್ರಿಡ್ ಪಾರ್ಕ್ ನಿರ್ಮಾಣ ಯೋಜನೆಗೆ ತಯಾರಿ ನಡೆಸಲಾಗುತ್ತಿದೆ.

1 ಸಾವಿರ ಮೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದಿಸಲು ಸರ್ವೇ ಕಾರ್ಯ ಆರಂಭಿಸಲಾಗಿದೆ. ರೈತರ ಪಂಪ್‍ಸೆಟ್‍ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡಲು 2 ಯೋಜನೆ ರೂಪಿಸಿದ್ದು, ಕುಸುಮ್ ಬಿ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 10 ಸಾವಿರ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಫೀಡರ್‌ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡುವ ಯೋಜನೆ ಕೂಡ ಪ್ರಗತಿಯಲ್ಲಿದೆ.

ನಾವು ಶರಾವತಿಯಿಂದ 20% ವಿದ್ಯುತ್‍ ಪಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ಅಡಚಣೆಯಾಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕಾರಿಪುರ, ಸಾಗರ, ಸೊರಬ, ತೀರ್ಥಹಳ್ಳಿ ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಒಟ್ಟು 6 ಕಡೆಗಳಲ್ಲಿ 110 ಕೆವಿ ಸ್ಟೇಷನ್ ಮತ್ತು ಸಾಗರದ ನಾಡಮಂಚಾಲೆಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ 200 ಕೆವಿ ಸ್ಟೇಷನ್ ಸ್ಥಾಪನೆಗೆ ಟೆಂಡರ್ ಆಗಿದೆ. ಮುಂದಿನ ತಿಂಗಳು ಗುದ್ದಲಿ ಪೂಜೆ ಸಹ ನಡೆಯಲಿದ್ದು ರಾಜ್ಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಹೊಸ ಪ್ರಗತಿಯನ್ನು ಕಾಣುತ್ತಿದ್ದೇವೆ.

ಮೆಸ್ಕಾಂ ನೌಕರರ ಸಂಘದ ಮೋಹನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಸ್ಕಾಂ ಎಇಇ ವೀರೇಂದ್ರ ಹೆಚ್.ಆರ್. ಸ್ವಾಗತಿಸಿದರು. ಮಹಾನಗರಪಾಲಿಕೆ ಮಹಾಪೌರ ಸುನೀತಾ ಅಣ್ಣಪ್ಪ, ಸದಸ್ಯೆ ಲಕ್ಷ್ಮೀ ಶಂಕರ ನಾಯ್ಕ, ಕ್ರೀಡಾ ಪ್ರಾಧಿಕಾರದ ಕೆ.ಪಿ ಪುರುಷೋತ್ತಮ್, ಮೆಸ್ಕಾಂ ನಿರ್ದೇಶಕ ನಂಜುಂಡಸ್ವಾಮಿ, ಗಿರಿರಾಜ್, ದಿನೇಶ್, ಮುಖ್ಯ ಇಂಜಿನಿಯರ್, ಗುತ್ತಿಗೆದಾರರು, ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ:ದುಷ್ಕರ್ಮಿಗಳಿಂದ ರೈತನ 800 ಅಡಕೆ ಗಿಡಗಳ ನಾಶ

Exit mobile version