ತುಮಕೂರು: ಕೊಬ್ಬರಿ ಬೆಂಬಲ ಬೆಲೆ ಏರಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪಾದಯಾತ್ರೆ (Farmers Padayatra) ನಡೆಸಿದ ಹಿನ್ನೆಲೆಯಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶನಿವಾರ ಸುಮಾರು 15 ಕಿ.ಮೀ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.
ಪಾದಯಾತ್ರೆ ಹಿನ್ನೆಲೆ ತುಮಕೂರಿನ ಕ್ಯಾತ್ಸಂದ್ರದಿಂದ ಊರುಕೆರೆವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಅರಸಿಕೆರೆಯಿಂದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಆರಂಭವಾದ ಪಾದಯಾತ್ರೆ ಶನಿವಾರ, ಐದನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಪಾದಯಾತ್ರೆ ತುಮಕೂರು ತಲುಪಿದ್ದು, ನಗರ ದಾಟಿ ಮುಂದೆ ಸಾಗುವ ವೇಳೆ ರಾಷ್ಟ್ರೀಯ ಹೆದ್ದಾರು 48ರಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನಗಳು ಸಾಲುಗಟ್ಟಿ ನಿಂತದ್ದು ಕಂಡುಬಂತು.
ಅ.4ರಂದು ವಿಧಾನಸೌಧ ಮುತ್ತಿಗೆ
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ, ಕಾವೇರಿ ನೀರು ಬಿಡುಗಡೆ ಬಗ್ಗೆ ರಾಜ್ಯ ಸರ್ಕಾರವು ರಾಜ್ಯಕ್ಕೆ ವಿರುದ್ಧವಾದ ತೀರ್ಮಾನ ಕೈಗೊಂಡಿದೆ. ಇದನ್ನು ನಾವು ಖಂಡಿಸುತ್ತೇವೆ. ಚುನಾವಣೆ ಮುಂಚೆ ಡಿ.ಕೆ.ಶಿವಕುಮಾರ್ ಅವರು ನಮ್ಮ ಸರ್ಕಾರ ಬಂದರೆ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ 15 ಸಾವಿರ ರೂ. ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಸರ್ಕಾರ ಬಂದು 4 ತಿಂಗಳು ಕಳೆದರೂ ಇದರ ಬಗ್ಗೆ ಯಾರೂ ಚಕಾರ ಎತ್ತಿಲ್ಲ. ಹೀಗಾಗಿ ರೈತರು ವಿಧಾನಸೌಧ ಚಲೋ ಪಾದಯತ್ರೆ ಕೈಗೊಂಡಿದ್ದು, ಅ.4ರಂದು ಬೃಹತ್ ಪ್ರಮಾಣದಲ್ಲಿ ರೈತರು ಸೇರಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನಾಯಕರು ಎಪಿಎಂಸಿ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಅವರು ಕಾಯ್ದೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿಲ್ಲ. ಸುಮ್ಮನೆ ಡ್ರಾಮಾ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳಿಗೆ ಶಾಸನಬದ್ಧವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗ್ಯಾರಂಟಿ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | DK Shivakumar : ಈಗಲಾದರೂ ನಮ್ಮಲ್ಲಿ ಬನ್ನಿ; ಜೆಡಿಎಸ್‌ನ ಬಿಎಂ ಫಾರೂಕ್‌ಗೆ ಡಿಕೆಶಿ ಬಹಿರಂಗ ಆಹ್ವಾನ
ಕೃಷಿ ಭೂಮಿ ಒತ್ತುವರಿ ತೆರವು ಮಾಡುವುದು, ಬರಗಾಲದಲ್ಲಿ ಸಾಲ ವಸೂಲಿ ನಿಲ್ಲಿಸಬೇಕು. ಈ ಬೇಡಿಕೆಗಳ ಈಡೇರಿಕೆಗೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.