ಬೆಂಗಳೂರು : ರಾಜ್ಯದ ರೈತರ ಸಾಲ ನೀತಿ ಬದಲಿಸಬೇಕು ಹಾಗೂ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ವ್ಯವಸ್ಥೆ ರದ್ದುಗೊಳಿಸಲು ಒತ್ತಾಯಿಸಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಮಂಗಳವಾರ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸಮಗ್ರ ಶಿಕ್ಷಣ ಇಲಾಖೆಯಿಂದ ಆರ್ಬಿಐ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ರೈತರ ಸಾಲ ನೀತಿ ಬದಲಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ಮನವಿಗೆ ಬಗ್ಗದೇ ಆರ್ಬಿಐ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಆರ್ಬಿಐ ಅಧಿಕಾರಿಗಳು ರೈತರ ಜತೆ ಮಾತನಾಡಬೇಕು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದರು. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಲಾಗಿತ್ತು.
ಇದನ್ನು ಓದಿ| ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ; ಮಂಗಳೂರಿನ ಬಳ್ಕುಂಜೆಯಲ್ಲಿ ರೈತರ ಬೃಹತ್ ಪ್ರತಿಭಟನೆ
ಪ್ರತಿಭಟನೆಯ ನೇತೃತ್ವ ಹೊತ್ತಿರುವ ರೈತ ನಾಯಕ ಕುರುಬೂರು ಶಾಂತಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಪ್ಪತ್ತು ದಿನಗಳ ಹಿಂದೆಯೇ ನಾವು ಬೆಂಗಳೂರು ಆರ್ಬಿಐ ಮುಖ್ಯಸ್ಥರಿಗೆ ಪತ್ರ ಬರೆದಿದ್ದೆವು. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾತುಕತೆಗೂ ಯಾವೊಬ್ಬ ಅಧಿಕಾರಿಯೂ ಬಂದಿಲ್ಲ. ಆದರೆ, ಈಗ ನಮ್ಮ ಜತೆಗೆ ಮಾತುಕತೆ ಮಾಡ್ತಿವಿ ಅಂತಿದ್ದಾರೆ ಎಂದರು.
ರೈತರಿಗೆ ಸಾಲ ನೀಡುವ ವೇಳೆ ಸಿಬಿಲ್ ಸ್ಕೋರ್ ಪರಿಗಣಿಸಬಾರದು. ಬರಗಾಲ, ಅತಿವೃಷ್ಠಿ, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಸಾಲ ಪಾವತಿ ಮಾಡಲು ಸಾಧ್ಯವಾಗಲ್ಲ. ಇಂತಹ ಸಂದರ್ಭಗಳಲ್ಲಿ ಸಿಬಿಲ್ ಸ್ಕೋರ್ ನೋಡಿ ಸಾಲ ನೀಡುವುದು ಎಷ್ಟು ಸರಿ. ಕೊರೊನಾ ಸಮಯದಲ್ಲಿ ರೈತರು ಬೆಳೆಗಳನ್ನು ರಸ್ತೆಗೆ ಚೆಲ್ಲಿದ್ದಾರೆ. ಈಗ ಆರ್ಬಿಐ ಅಧಿಕಾರಿಗಳು ಮಾತುಕತೆಗೆ ಕರೆದಿದ್ದಾರೆ. ಆದರೆ ನಾವೆಷ್ಟು ಜನ ಹೋಗಬೇಕು ಎಂದು ನಿರ್ಧರಿಸಿಲ್ಲ. ಕೂಡಲೇ ಆರ್ಬಿಐ ನೀತಿಯನ್ನು ವಾಪಸ್ ಪಡೆಯಬೇಕು. ಇಲ್ಲಾಂದ್ರೆ ನಮ್ಮ ಹೋರಾಟ ಮುಂದುವರಿಯುತ್ತದೆ. ಕೋಟಿ ರೂಪಾಯಿ ಬೆಲೆಬಾಳುವ ಜಮೀನಿಗೆ ಒಂದು ಲಕ್ಷ ರುಪಾಯಿ ಸಾಲ ಕೊಡ್ತಿಲ್ಲ, ಮನೆ ಕಟ್ಟಲು ಮಾತ್ರ ಲಕ್ಷ ಲಕ್ಷ ಸಾಲ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ|ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್ ಈಗ ಏನು ಮಾಡಬಹುದು?