Site icon Vistara News

ಕೊಪ್ಪಳದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಂತ ರೈತರು!

koppala urea

ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ಯೂರಿಯಾ ಗೊಬ್ಬರಕ್ಕೆ ತತ್ವಾರ ಎದುರಾಗಿದೆ. ಗೊಬ್ಬರ ಪಡೆಯಲು ರೈತರು ತೀವ್ರವಾಗಿ ಪರದಾಡುವಂತಾಗಿದ್ದು, ಅಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ರೈತರು ಗಂಟೆಗಟ್ಟಲೇ ಕ್ಯೂ ನಿಂತಿದ್ದಾರೆ.

ರೈತ ಮಹಿಳೆಯರೂ ಸೇರಿದಂತೆ ಪುರುಷರು ಬೆಳಗ್ಗೆ 5 ಗಂಟೆಯಿಂದಲೇ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ಮಳೆ ಬಂದರೂ ಲೆಕ್ಕಿಸದೇ ಕಾದಿದ್ದಾರೆ. ಆದರೂ, ಸಮರ್ಪಕವಾಗಿ ಗೊಬ್ಬರ ಲಭ್ಯವಾಗುತ್ತಿಲ್ಲ. ಮೆಕ್ಕೆ ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಇದ್ದು, ಖರೀದಿಗೆಂದು ರೈತರು ಕೃಷಿ ಪತ್ತಿನ ಸಹಕಾರ ಸಂಘದತ್ತ ಮುಖ ಮಾಡಿದ್ದಾರೆ. ಆದರೆ, ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಲಭ್ಯವಾಗುತ್ತಿಲ್ಲ.

ಕಳೆದ ಒಂದು ವಾರದಿಂದ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದು, ಯಲಬುರ್ಗಾ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಕಾದು ಕಾದು ಹೈರಾಣಾಗಿದ್ದಾರೆ. ಗಂಟೆಗಟ್ಟಲೇ ಸಾಲು ನಿಲ್ಲಬೇಕಾದ ಪರಿಸ್ಥಿತಿ ಇದ್ದರೂ ಎಲ್ಲರಿಗೂ ಅಗತ್ಯದಷ್ಟು ಗೊಬ್ಬರ ಲಭ್ಯವಾಗುತ್ತದೆ ಎಂಬುದು ಖಾತ್ರಿಯಾಗುತ್ತಿಲ್ಲ. ಶೀಘ್ರ ಸಮಸ್ಯೆಯನ್ನು ಪರಿಹಾರ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.  

ಇದನ್ನು ಓದಿ| ಹೊಲ ಉಳುಮೆ ಮಾಡಲು ಟಗರು ಬಳಸಿ ಸೈ ಎನಿಸಿಕೊಂಡ ರೈತ

Exit mobile version