Site icon Vistara News

Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್‌ ಅಬ್ದುಲ್ಲಾ ʼಲೋಕಾʼಭಿರಾಮ!

Farooq Abdullah meets HD Devegowda

#image_title

ಬೆಂಗಳೂರು: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್‌ ಅಬ್ದುಲ್ಲಾ (Farooq Abdullah) ಬುಧವಾರ (ಜೂನ್‌ 7) ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಈ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳು ಇದರ ಹಿಂದೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೋಕಸಭಾ ಚುನಾವಣೆಯು ರಾಜ್ಯಗಳ ವಿಧಾನಸಭಾ ಚುನಾವಣೆಗಿಂತ ತುಸು ಭಿನ್ನ. ಇಲ್ಲಿ ಮತ ಹಾಕುವಾಗ ನಾನಾ ವಿಚಾರಗಳು ಪರಿಗಣಿಸಲ್ಪಡುತ್ತದೆ. ಅಲ್ಲದೆ, ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇದೆ. ಹೀಗಾಗಿ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಬಿಜೆಪಿಯೇತರ ರಂಗ ರಚನೆಯ ಅವಶ್ಯಕತೆಯೂ ಇದೆ ಎಂಬುದು ಇತರ ರಾಜಕೀಯ ಪಕ್ಷಗಳ ಕೂಗಾಗಿದೆ. ಅದರ ಭಾಗವಾಗಿ ಈಗ ಫಾರೂಕ್‌ ಅಬ್ದುಲ್ಲಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಶುರುವಾಗಿದೆ ಒಗ್ಗಟ್ಟಿನ ಮಂತ್ರ

ಜೂನ್ 12ರಂದು ಬಿಹಾರದ ಪಟನಾದಲ್ಲಿ ವಿರೋಧ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಈ ಸಭೆಯ ಮುಂದಾಳತ್ವವನ್ನು ವಹಿಸಿದ್ದರು. ಆದರೆ, ಈ ಸಭೆಗೆ ಜೆಡಿಎಸ್‌ ಅನ್ನು ಆಹ್ವಾನ ಮಾಡಿರಲಿಲ್ಲ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಕೆಲವು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಭೆಗೆ ಬರಲು ಅಸಾಧ್ಯವಾಗಲಿರುವ ಕಾರಣ ಈ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈಗಾಗಲೇ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಎಡಪಕ್ಷಗಳ ಹೊರತಾಗಿ ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: MLC Election: ಕಾಂಗ್ರೆಸ್‌ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್‌ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!

ಅಲ್ಲದೆ, ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿಯ ಶರದ್ ಪವಾರ್ ಸೇರಿದಂತೆ ಅನೇಕ ಪಕ್ಷಗಳ ನಾಯಕರೊಂದಿಗೆ ಅವರು ಪ್ರತ್ಯೇಕ ಸಭೆಗಳನ್ನು ಸಹ ನಿತೀಶ್‌ ಕುಮಾರ್‌ ನಡೆಸಿದ್ದಾರೆ. ಈಗ ಬಿಜೆಪಿಯೇತರ ಸರ್ಕಾರ ರಚನೆಯಾಗಬೇಕು, ಆ ಪಕ್ಷವನ್ನು ಎಲ್ಲರೂ ಒಗ್ಗಟ್ಟಾಗಿ ಮಣಿಸಬೇಕು ಎಂಬ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಫಾರುಕ್‌ ಅಬ್ದುಲ್ಲ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿಯೇತರ ರಾಜಕೀಯ ಪಕ್ಷಗಳ ಸಂಘಟನೆ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಾರೆ. ಜತೆಗೆ ಬಿಜೆಪಿ ದೇಶ ವಿಭಜನೆ ಮಾಡುತ್ತಿದೆ ಎಂದು ಆರೋಪ ಮಾಡಿರುವ ಅವರು, ಆ ಸರ್ಕಾರದ ಜತೆ ಕೈಜೋಡಿಸದಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎಲ್ಲವೂ ಸರಿಹೋಗಲಿದೆ: ಫಾರುಕ್‌ ಅಬ್ದುಲ್ಲಾ

ಎಚ್.ಡಿ. ದೇವೇಗೌಡರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಬಿಜೆಪಿಯೇತರ ರಾಜಕೀಯ ಪಕ್ಷಗಳ ರಂಗ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. “ನಾನು ಎಲ್ಲರಿಗೆ ಸಲಹೆ ನೀಡುತ್ತೇನೆ. ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶವಾಗಿದೆ. ದೇಶವನ್ನು ರಕ್ಷಣೆ ಮಾಡಬೇಕಿದೆ. 2024ರ ಲೋಕಸಭಾ ಚುನಾವಣಾ ದೃಷ್ಟಿಯಿಂದ ವಿರೋಧ ಪಕ್ಷಗಳು ಒಂದಾಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಜೂನ್‌ 12ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿರುವ ಸಭೆಗೆ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಏಕೆ ಆಹ್ವಾನಿಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಫಾರೂಕ್‌ ಅಬ್ದುಲ್ಲಾ, ಈ ಸಭೆ ಬಹಳ ಮುಖ್ಯವಾಗಿದೆ. ನಿಧಾನವಾಗಿ ಎಲ್ಲ ದಾರಿಯೂ ಸಿಗುತ್ತದೆ. ಒಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗುವುದು ಬಹಳ ಮುಖ್ಯವಾದ ವಿಚಾರವಾಗಿದೆ ಎಂದು ಹೇಳಿದರು.

ಕಾಶ್ಮೀರಿ ಫೈಲ್ಸ್, ಕೇರಳ ಫೈಲ್ಸ್ ಸಿನಿಮಾಗಳಂತಹ ಸಿನಿಮಾಗಳು ದೇಶವನ್ನು ವಿಭಜನೆ ಮಾಡುವುದಕ್ಕೆ ಮಾಡಿರುವ ಚಿತ್ರಗಳಾಗಿವೆ. ಭಾರತದ ವಿಭಜನೆ ಮಾಡುವ ಇಂತಹ ಚಿತ್ರಗಳಿಂದ ಸಂವಿಧಾನವೂ ವಿಭಜನೆ ಆಗುತ್ತದೆ. ಹಿಂದು, ಮುಸ್ಲಿಂ ಇರಲಿ, ಯಾವುದೇ ಸಮಾಜ, ರಾಜ್ಯಗಳೇ ಆಗಿರಲಿ, ಈ ರೀತಿಯ ಚಿತ್ರಗಳು ದೇಶಕ್ಕೆ ಮಾರಕ ಎಂದು ಫಾರೂಕ್‌ ಅಬ್ದುಲ್ಲಾ ಅಭಿಪ್ರಾಯಪಟ್ಟರು.

ಸೌಹಾರ್ದಯುತ ಭೇಟಿ: ಎಚ್‌ಡಿ ಕುಮಾರಸ್ವಾಮಿ

ಫಾರುಕ್ ಅಬ್ದುಲ್ಲಾ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಗೌಡರ ಆರೋಗ್ಯ ವಿಚಾರಿಸಲು ಬಂದಿದ್ದರು. ಪ್ರಧಾನಿ ಆಗಿದ್ದಾಗ ಕಾಶ್ಮೀರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಅವರು ಸ್ಮರಿಸಿಕೊಂಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಒಳ್ಳೆಯ ವಾತಾವರಣ ಬೇಕು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ;‌ ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಫಾರೂಕ್‌ ಅಬ್ದುಲ್ಲಾ

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಫಾರೂಕ್‌

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು (Siddaramaiah) ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಫಾರೂಕ್‌ ಅಬ್ದುಲ್ಲಾ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಇತರರಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಜತೆ ಫಾರೂಕ್‌ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಆದರೆ, ಮಾತುಕತೆಯ ವಿಷಯ ಇನ್ನೂ ಬಹಿರಂಗಗೊಂಡಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version