ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (Kannada Sahitya Parishat) 2023ನೇ ಸಾಲಿನ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗಾಗಿ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ (Dr. Nadoja Mahesh Joshi) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗಾಗಿ, ಪರಿಷತ್ತಿನ ಪಂಪ ಸಭಾಭವನದಲ್ಲಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ದತ್ತಿ ದಾನಿಗಳ ಆಶಯದಂತೆ ಪ್ರತಿ ವರ್ಷ ಇಬ್ಬರು ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಒಬ್ಬರು ಕನ್ನಡ ಕ್ರೈಸ್ತ ಸಾಧಕರಿಗೆ ಮತ್ತು ಇನ್ನೊಬ್ಬರು ಕನ್ನಡ ಜನಪರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರನ್ನು ಆಯ್ಕೆ ಮಾಡಲಾಗುತ್ತದೆ.
ಅದರಂತೆ ಈ ಬಾರಿಯ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗಾಗಿ ಹಿರಿಯ ಕಥೆಗಾರ, ಸಾಹಿತಿಗಳಾಗಿರುವ ಕ್ರೈಸ್ತ ಧರ್ಮಕ್ಕೆ ಸೇರಿದ ಶಿವಮೊಗ್ಗದ ಸಾಗರದ ನಾ. ಡಿಸೋಜ ಹಾಗೂ ಕನ್ನಡ ಪರ ಹೋರಾಟಗಾರ್ತಿ, ರಂಗಕರ್ಮಿ ಬೆಂಗಳೂರಿನ ದು. ಸರಸ್ವತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ಹತ್ತು ಸಾವಿರ ರೂ.ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಸಂಚಲನ ಬಳಗದವರು 2017ರಲ್ಲಿ ಈ ದತ್ತಿ ನಿಧಿ ಸ್ಥಾಪಿಸಿದ್ದರು. ಇದುವರೆಗೆ 12 ಜನರಿಗೆ ಕನ್ನಡ ಸಾಹಿತ್ಯ ಪರಿಷತ್ತು ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರದಾನ ಮಾಡಲಾಗಿದೆ. ಪ್ರಸ್ತುತ ದತ್ತಿ ಪ್ರಶಸ್ತಿಯನ್ನು ದತ್ತಿ ದಾನಿಗಳು ಆಶಯದಂತೆ ಒಬ್ಬ ಕನ್ನಡ ಕ್ರೈಸ್ತ ಸಾಧಕರಿಗೆ ಹಾಗೂ ಇನ್ನೊಬ್ಬರು ಕನ್ನಡ ಪರ ಹೋರಾಟಗಾರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಇದನ್ನೂ ಓದಿ: ಕನ್ನಡ ಚಳುವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಜಿ.ಕೆ. ಸತ್ಯ ಆಯ್ಕೆ
ನಿತ್ಯ ಬದುಕಿನಲ್ಲಿ ಕನ್ನಡ ನಾಡು- ನುಡಿಯ ಕುರಿತು ಅಪಾರ ಗೌರವ ಹೊಂದಿರುವ ಹಿರಿಯ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಪ್ರಶಸ್ತಿ ಪುರಸ್ಕಾರ ಪಡೆದ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ಪುರಸ್ಕೃತರಿಂದ, ಕನ್ನಡ ನಾಡಿನ ನೆಲಮೂಲ ಸಂಸ್ಕೃತಿಯನ್ನು ಉಳಿಸಿ- ಬೆಳೆಸುವಲ್ಲಿ ನಿರಂತರ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ಸಂಚಲನ ಬಳಗದವರ ಪರವಾಗಿ ರೀಟಾ ರೀನಿ ಹಾಗೂ ರಫಾಯಲ್ ರಾಜ್ ಸೇರಿ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ