ಶಿವಮೊಗ್ಗ: ಅವಳು ಆಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ರೂಮಿನಿಂದ ಹೊರಬಂದಿದ್ದಳು. ಆಗ ಶಿಕ್ಷಕರು ಮತ್ತು ಬಂಧುಗಳು ಆಕೆಗೆ ಮೊಬೈಲ್ ಆನ್ ಮಾಡಿ ವಿಡಿಯೋಕಾಲ್ ಮಾಡಿಸಿದರು. ಅಲ್ಲಿ ಅವಳಿಗೆ ಕಂಡದ್ದು ಚಿತೆಯ ಮೇಲೆ ಮಲಗಿದ್ದ ಅಪ್ಪ (Father and daughter). ವಿದ್ಯಾರ್ಥಿನಿ ಕಣ್ಣೀರು ಹಾಕುತ್ತಲೇ ಅಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗಳನ್ನು ಕಣ್ಣೀರು ಹಾಕುತ್ತಲೇ ನೋಡುತ್ತಿದ್ದಳು. ನಡು ನಡುವೆ ಆಕೆ ಬಿಕ್ಕಿಬಿಕ್ಕಿ ಅತ್ತಾಗ ಸ್ನೇಹಿತೆಯರು ಸಮಾಧಾನ ಮಾಡಿದರು. ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.
ಆಕೆಯ ಹೆಸರು ಆರ್ಶಿಯಾ ಮನಿಯಾರ್. ಕೊಪ್ಪಳದ ಅಬೀದ್ ಪಾಷಾ ಅವರ ಮಗಳು. ಆರ್ಶಿಯಾ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿದ್ದಳು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿರುವ ಆಕೆಗೆ ಈಗ ಪರೀಕ್ಷೆ ನಡೆಯುತ್ತಿದೆ.
ಈ ನಡುವೆ ಬುಧವಾರ ರಾತ್ರಿ ಆರ್ಶಿಯಾ ತಂದೆ ಅಬಿದ್ ಪಾಷಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಷಯವನ್ನು ಮನೆಯವರು ಆರ್ಶಿಯಾ ಮತ್ತು ಹಾಸ್ಟೆಲ್ ವಾರ್ಡನ್‌ಗೆ ರಾತ್ರಿಯೇ ತಿಳಿಸಿದ್ದರು. ಅಪ್ಪನನ್ನು ನೋಡಲು ಹೋಗಬೇಕಾ? ಪರೀಕ್ಷೆ ಬರೆಯಬೇಕಾ ಎಂಬ ಗೊಂದಲ್ಲಿ ಮುಳುಗಿದ್ದಳು ಆ ಹುಡುಗಿ.
ಆಗ ಅಲ್ಲಿ ಶಿಕ್ಷಕರು ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದರು. ರಾತ್ರೋರಾತ್ರಿಯೇ ಆಕೆಯನ್ನು ಹೊರಡಿಸಿಕೊಂಡು ಒಂದು ಕಾರಿನಲ್ಲಿ ಕೊಪ್ಪಳಕ್ಕೆ ಹೊರಟೇ ಬಿಟ್ಟರು. ಹೊಸನಗರದಿಂದ ಕೊಪ್ಪಳದ ಅವಳ ಮನೆಗೆ ಹೆಚ್ಚು ಕಡಿಮೆ 350 ಕಿ.ಮೀ. ದೂರ. ಅದರೆ, ಅದ್ಯಾವುದನ್ನೂ ಲೆಕ್ಕಿಸದೆ ರಾತ್ರೋರಾತ್ರಿ ಆಕೆಯನ್ನು ಕರೆದುಕೊಂಡು ಹೋದರು.
ರಾತ್ರಿಯೇ ಆಕೆಯನ್ನು ಕೊಪ್ಪಳದ ಮನೆಗೆ ಕರೆದುಕೊಂಡು ಹೋದ ಶಿಕ್ಷಕರು ಮತ್ತು ಸಿಬ್ಬಂದಿ ತಂದೆಯ ಮುಖ ದರ್ಶನ ಮಾಡಿಸಿ ಸ್ವಲ್ಪ ಹೊತ್ತು ಇದ್ದು ಮರಳಿ ಹೊರಟಿದ್ದರು. ಗುರುವಾರ ಮುಂಜಾನೆ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಕುಳ್ಳಿರಿಸಿ ಬಂದಿದ್ದರು.
ಪರೀಕ್ಷೆ ಮುಗಿಸಿ ಹೊರಬರುವ ಹೊತ್ತಿಗೆ ಅತ್ತ ಕೊಪ್ಪಳದಲ್ಲಿ ಅಂತ್ಯಕ್ರಿಯೆಯ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದವು. ವಿದ್ಯಾರ್ಥಿನಿಗೆ ವಿಡಿಯೊ ಕಾಲ್ ಮಾಡಿಸಿ ತಂದೆಯ ಶವ ಸಂಸ್ಕಾರ ವೀಕ್ಷಣೆಗೆ ಶಾಲೆಯ ಶಿಕ್ಷಕರು ಅನುವು ಮಾಡಿಕೊಟ್ಟರು. ಮೊಬೈಲ್ ನಲ್ಲಿ ತಂದೆಯ ಶವ ಸಂಸ್ಕಾರವನ್ನು ವೀಕ್ಷಿಸಿದ ವಿದ್ಯಾರ್ಥಿನಿ ಕಣ್ಣೀರಿಟ್ಟಾಗ ಸ್ನೇಹಿತೆಯರು ಸಂತೈಸುತಿದ್ದ ದೃಶ್ಯ ಮನಕಲಕುವಂತಿತ್ತು.
600 ಕಿಮೀ ದೂರ ಪ್ರಯಾಣವಿದ್ದರೂ ಲೆಕ್ಕಿಸದೆ ಮಗಳಿಗೆ ತಂದೆಯ ಮೃತದೇಹದ ದರ್ಶನ ಮಾಡಿಸಿ ಮತ್ತೆ ಪರೀಕ್ಷೆ ಬರೆಯಲು ಸಹಕರಿಸಿದ ಶಿಕ್ಷಕರಿಗೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅವಳ ಬಳಿ ಟ್ರ್ಯಾಕ್ ಶೂ ಕೊಳ್ಳಲೂ ದುಡ್ಡಿರಲಿಲ್ಲ, ಈಗ ಆಕೆ ಜಗತ್ತಿನ ದೊಡ್ಡ ಶೂ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್!