Site icon Vistara News

ಫಾತಿಮಾ ರಲಿಯಾಗೆ ಪ್ರತಿಷ್ಠಿತ ಛಂದ ಪುಸ್ತಕ ಬಹುಮಾನ

ಬೆಂಗಳೂರು: ಕಥಾ ಸಂಕಲನ ಹಸ್ತಪ್ರತಿಗಾಗಿ ನೀಡುವ ಪ್ರತಿಷ್ಠಿತ ಛಂದ ಪುಸ್ತಕ ಬಹುಮಾನವನ್ನು ಈ ಬಾರಿ ಫಾತಿಮಾ ರಲಿಯಾ ಪಡೆದುಕೊಂಡಿದ್ದಾರೆ. 93 ಕತೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ಅಬ್ದುಲ್ ರಶೀದ್ ಮತ್ತು ಆಯಿಶಾ ದಂಪತಿಯ ಪುತ್ರಿಯಾಗಿರುವ ಇವರು, ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಇವರು “ಕಡಲು ನೋಡಲು ಹೋದವಳು” ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷ ಪ್ರಕಟಿಸಿದ್ದಾರೆ.

ಈ ಪುಸ್ತಕವು ನವೆಂಬರ್ ತಿಂಗಳಲ್ಲಿ ಓದುಗರಿಗೆ ಲಭ್ಯವಾಗಲಿದೆ. ಫಾತಿಮಾ ರಲಿಯಾ ಅವರಿಗೆ 40,000 ರೂಪಾಯಿ ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ.

ಈ ಬಗ್ಗೆ ಛಂದ ಪುಸ್ತಕ ರೂವಾರಿ, ಖ್ಯಾತ ಬರಹಗಾರ ವಸುಧೇಂದ್ರ ಅವರು ಹೀಗೆ ಬರೆದಿದ್ದಾರೆ:
ನಿರಂತರವಾಗಿ ಮೂರು ವರ್ಷ ಮಹಿಳೆಯರೇ ಈ ಬಹುಮಾನವನ್ನು ತೆಗೆದುಕೊಂಡಿರುವುದನ್ನು ಗಮನಿಸಿದಾಗ (ಛಾಯಾ ಭಟ್ – 2020, ಕಾವ್ಯ ಕಡಮೆ 2021, ಫಾತಿಮಾ ರಲಿಯಾ – 2022) ಸದ್ಯದ ಕನ್ನಡ ಕಥನಲೋಕದಲ್ಲಿ ಕತೆಗಾರ್ತಿಯರು ಹೆಚ್ಚು ಚಟುವಟಿಕೆಯಿಂದ ಮುಂಚೂಣಿಯಲ್ಲಿ ಇದ್ದಾರೆನ್ನುವುದು ತಿಳಿಯುತ್ತದೆ.

ಬಹುಮಾನ ಕೇವಲ ಒಬ್ಬರಿಗೇ ನೀಡಲಾಗುತ್ತದೆಂಬ ಕಾರಣದಿಂದ ಇತರರಿಗೆ ಬೇಸರ ಮಾಡುತ್ತೇವೆಂಬ ಅಳುಕು ನಮಗಿದೆ. ಆದರೆ, ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸುವುದು, ಮೊದಲ ಮತ್ತು ಎರಡನೆಯ ಸುತ್ತಿನಲ್ಲಿ ಆಯ್ಕೆಯಾಗುವುದನ್ನು ನಾವು ಅತ್ಯಂತ ಗೌರವದ ಸಂಗತಿಯೆಂದು ಭಾವಿಸುತ್ತೇವೆ. ಅದನ್ನು ನಾಡಿನ ಓದುಗರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎನ್ನುವ ವಿಶ್ವಾಸ ನಮಗಿದೆ.

ಈ ಬಾರಿಯ ನಮ್ಮ ಈ ಹಸ್ತಪ್ರತಿ ಬಹುಮಾನದ ಆಯ್ಕೆಯನ್ನು ದೇಶದ ಹೆಮ್ಮೆಯ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಮಾಡಿದ್ದಾರೆ. ಸಾಹಿತ್ಯದ ಅಂತರಾಳವನ್ನು ತಿಳಿದು ಅದನ್ನು ದೃಶ್ಯದಲ್ಲಿ ಅಷ್ಟೇ ಸಮರ್ಥವಾಗಿ ನಿರೂಪಿಸುವ ಕಾಸರವಳ್ಳಿ ಈ ನಾಡು ಕಂಡ ಅತಿ ದೊಡ್ಡ ಪ್ರತಿಭೆ. ಸಾಹಿತ್ಯ ಲೋಕದೊಡನೆ ಯಾವತ್ತೂ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ಗಿರೀಶ್ ಅವರು ಹಲವು ಸಿನಿಮಾಗಳಲ್ಲಿ ಕತೆಗಳನ್ನು ವಿಸ್ತರಿಸಿದ ಪರಿಯನ್ನು ಗಮನಿಸಿದರೆ, ಅವರೊಬ್ಬ ಸೂಕ್ಷ್ಮ ಸಾಹಿತಿಯೂ ಆಗಬಹುದಿತ್ತು ಎಂಬುದು ಯಾರಿಗಾದರೂ ತಿಳಿಯುತ್ತದೆ.

ತೀರ್ಪುಗಾರರಾದ ಗಿರೀಶ್ ಕಾಸರವಳ್ಳಿ ಅವರು ಫಾತಿಮಾ ಅವರ ಕತೆಗಳ ಕುರಿತು ಬರೆದ ಟಿಪ್ಪಣಿ ಹೀಗಿದೆ…
“ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ. ಕೇವಲ ಪರ-ವಿರೋಧಗಳ ಯಾವುದೋ ಧ್ರುವದಲ್ಲಿ ನಿಲ್ಲದೆ, ಹಲವು ಆಯಾಮಗಳಿಂದ ಬದುಕನ್ನು ನೋಡುವ ಒಳನೋಟ ಇವರಿಗೆ ದಕ್ಕಿದೆ. ಹಿಂದೂ-ಮುಸ್ಲಿಂ ಸಂಬಂಧಗಳ ಸಾಮರಸ್ಯಗಳನ್ನು ಚಿತ್ರಿಸುತ್ತಲೇ, ಕ್ಷುಲ್ಲಕ ಘಟನೆಗಳಿಂದಾಗಿ ಅವು ಸಿಡಿದು ಹೋಗುವ ಅಸಹಾಯಕ ಸನ್ನಿವೇಶಗಳನ್ನು ಇವರು ಚಿತ್ರಿಸುತ್ತಾರೆ. ವಸ್ತು ವಿವರಗಳಲ್ಲಿ ನಾವೀನ್ಯತೆಯನ್ನು ತೋರುವ ರಲಿಯಾ, ಬದುಕಿನ ಘಟನೆಗಳನ್ನು ಪ್ರತ್ಯಕ್ಷವಾಗಿ ತೋರಿಸುತ್ತಲೇ ಪರೋಕ್ಷವಾಗಿ ಅದರ ಇನ್ನೊಂದು ಮಗ್ಗುಲನ್ನು ದರ್ಶಿಸುವುದರಿಂದ ಕಥಾವಸ್ತು ಹೆಚ್ಚು ಸಾಂದ್ರವಾಗಿ ಓದುಗರ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.”

ತೀರ್ಪುಗಾರರಾದ ಗಿರೀಶ ಕಾಸರವಳ್ಳಿ ಪರಿಚಯ
ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರೊಬ್ಬರಾದ ಗಿರೀಶ ಕಾಸರವಳ್ಳಿಯವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆಸಲೂರಿನಲ್ಲಿ 1950ರಲ್ಲಿ ಜನಿಸಿದರು. ಇವರು ಮಣಿಪಾಲದಲ್ಲಿ ಬಿ.ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ 27 ವರ್ಷಗಳ ವೃತ್ತಿ ಜೀವನದಲ್ಲಿ 14 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಪ್ರದರ್ಶಿತವಾಗಿದೆ. ವಾಣಿಜ್ಯ ಚಿತ್ರಗಳಿಂದ ಮೊದಲಿನಿಂದಲೂ ದೂರ ಇದ್ದಾರೆ.

1977 ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದುಕೊಂಡರು. ಬಳಿಕ ಇನ್ನೂ 3 ಸ್ವರ್ಣಕಮಲಗಳನ್ನು (ತಬರನ ಕತೆ, ತಾಯಿ ಸಾಹೇಬ, ದ್ವೀಪ) ಪಡೆದುಕೊಂಡಿದ್ದಾರೆ. ಹೀಗಾಗಿ 6 ಸ್ವರ್ಣ ಕಮಲಗಳನ್ನು ಪಡೆದಿದ್ದ ಸತ್ಯಜಿತ್ ರೇ ನಂತರದ ಸ್ಥಾನದಲ್ಲಿ ಅಂದರೆ ನಾಲ್ಕು ಸ್ವರ್ಣ ಕಮಲಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ’ಘಟಶ್ರಾದ್ಧ’ ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ 27. ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂಬ ಖ್ಯಾತಿಯನ್ನೂ ಇವರು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | ಕನ್ನಡ ಗೆಳೆಯರ ಬಳಗ | ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ, 4,000 ರೂ. ಬಹುಮಾನ

Exit mobile version