Site icon Vistara News

Neha Murder Case: ನೇಹಾಗೆ 9 ಬಾರಿ ಅಲ್ಲ, 14 ಸಲ ಇರಿದಿದ್ದ ಫಯಾಜ್;‌ ಪೋಸ್ಟ್‌ ಮಾರ್ಟಮ್‌ ವರದಿ ಬಹಿರಂಗ

Neha murder Case

Fayaz Stabs Neha Hiremath For 14 Times, Not 9 Times: Says Post Mortem Report

ಹುಬ್ಬಳ್ಳಿ: ನಗರದಲ್ಲಿ ನಡೆದ ನೇಹಾ ಹಿರೇಮಠ (Neha Murder Case) ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿ ನೇಹಾಳಿಗೆ (Neha Hiremath) ಪಾಗಲ್‌ ಫಯಾಜ್‌ 9 ಬಾರಿ ಅಲ್ಲ, 14 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ (Post Mortem Report) ಬಹಿರಂಗವಾಗಿದೆ. ಇದಕ್ಕೂ ಮೊದಲು, ನೇಹಾ ಹಿರೇಮಠ್‌ಗೆ ಫಯಾಜ್‌ 9 ಬಾರಿ ಚಾಕು ಇರಿದು ಕೊಲೆ ಮಾಡಿದ್ದ ಎಂಬುದಾಗಿ ಹೇಳಲಾಗಿತ್ತು.

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ದಾಳಿ ಮಾಡಿದ್ದ ಫಯಾಜ್‌ ಕೇವಲ 30 ಸೆಕೆಂಡ್‌ಗಳಲ್ಲಿ 14 ಬಾರಿ ಇರಿದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನೇಹಾ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಪ್ರೀತಿ ನಿರಾಕರಿಸಿದ ನೇಹಾಳ ಹೃದಯಕ್ಕೆ ಮೊದಲು ಚಾಕು ಇರಿದ ಆತ, 30 ಸೆಕೆಂಡ್‌ಗಳಲ್ಲೇ 14 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕತ್ತಿನ ಬಳಿ ಚಾಕು ಇರಿಯುತ್ತಿದ್ದಂತೆ ರಕ್ತನಾಳ ಕತ್ತರಿಸಿದ್ದು, ಇದರಿಂದ ತೀವ್ರ ರಕ್ತಸ್ರವಾ ಉಂಟಾಗಿದೆ. ಅತಿಯಾದ ರಕ್ತಸ್ರಾವದಿಂದ ನೇಹಾ ಹಿರೇಮಠ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಫಯಾಜ್‌ನನ್ನು ಎನ್‌ಕೌಂಟರ್‌ ಮಾಡಿ

“ನನ್ನ ಮಗಳನ್ನು ಹತ್ಯೆ ಮಾಡಿದ ಫಯಾಜ್‌ನನ್ನು ಎನ್‌ಕೌಂಟರ್‌ ಮಾಡಿ” ಎಂಬುದಾಗಿ ನೇಹಾ ಹಿರೇಮಠ ಅವರ ತಂದೆ ನಿರಂಜನ್‌ ಹಿರೇಮಠ ಆಗ್ರಹಿಸಿದ್ದಾರೆ. ಮಗಳ ಸಾವಿನ ಕುರಿತು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಅವರು, “ನೇಹಾ ಹೆಸರಿನಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು. ವ್ಯವಸ್ಥಿತ ಷಡ್ಯಂತ್ರದ ಮೂಲಕ ನನ್ನ ಮಗಳನ್ನು ಕೊಲೆ ಮಾಡಲಾಗಿದೆ. ಫಯಾಜ್‌ ಮಾತ್ರವಲ್ಲ, ಆತನ ತಂದೆ, ತಾಯಿ, ಸಹೋದರಿ ಸೇರಿ ಹಲವರು ಯೋಜನೆ ರೂಪಿಸಿಯೇ ಹತ್ಯೆ ಮಾಡಿದ್ದಾರೆ” ಎಂಬುದಾಗಿ ದೂರಿದ್ದಾರೆ.

“ನೇಹಾ ಹತ್ಯೆಯ ಕುರಿತು ಸಮಗ್ರವಾಗಿ ತನಿಖೆ ನಡೆಸದ ಹುಬ್ಬಳ್ಳಿ-ಧಾರವಾಡ ಕಮಿಷನರ್‌ ಅವರನ್ನು ಕೂಡಲೇ ಎತ್ತಂಗಡಿ ಮಾಡಬೇಕು. ದಕ್ಷ ಅಧಿಕಾರಿಯನ್ನು ನೇಮಿಸಿ ಸಮಗ್ರವಾಗಿ ತನಿಖೆ ಮಾಡಿಸಬೇಕು. ಹಾಗೆಯೇ, ಕೊಲೆಗಡುಕನನ್ನು ಎನ್‌ಕೌಂಟರ್‌ ಮಾಡಬೇಕು. ಗೃಹ ಸಚಿವರೇ, ನಿಮ್ಮ ಬಗ್ಗೆ ಮಾತನಾಡಿದ್ದೇನೆ. ಬೇಡವಾದರೆ, ನನ್ನನ್ನೂ ಎನ್‌ಕೌಂಟರ್‌ ಮಾಡಿಸಿ” ಎಂಬುದಾಗಿ ನಿರಂಜನ್‌ ಹಿರೇಮಠ ಅವರು ಹೇಳಿದ್ದಾರೆ.

ಇದನ್ನೂ ಓದಿ: Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

Exit mobile version