ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮೊಹಮ್ಮದ್ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರು ಚಾಲಕ ಅಜಿತ್ ಎಂಬಾತನನ್ನು ಬಂಧಿಸಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಶನಿವಾರ ರಾತ್ರಿ ಆತನನ್ನು ಬಂಧಿಸಿದ್ದೆಂದು ಪೊಲೀಸರು ಹೇಳಿರುವುದರಿಂದ ಭಾನುವಾರ ರಾತ್ರಿಯೊಳಗೆ ಕೋರ್ಟ್‌ಗೆ (ಕೋರ್ಟ್ ರಜೆ ಇರುವುದರಿಂದ ನ್ಯಾಯಾಧೀಶರ ಮನೆಗೆ) ಹಾಜರುಪಡಿಸಬೇಕಾಗುತ್ತದೆ.
ಈ ನಡುವೆ, ಅರೋಪಿ ಚಾಲಕ ಅಜಿತ್‌ನನ್ನು ಪೊಲೀಸರು ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಕಾರಿನಲ್ಲಿ ಬಂದಿರುವ ಹಂತಕರು ಯಾರು, ಅವರು ಮೊದಲಿನಿಂದಲೂ ಪರಿಚಯವೇ? ಕೇವಲ ಕಾರು ಗೊತ್ತು ಮಾಡಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆಯೇ? ಚಾಲಕ ಅಜಿತ್ ಕೂಡಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಕುತೂಹಲಕಾರಿ ಮಾಹಿತಿಗಳು ಬಯಲಿಗೆ ಬರಬೇಕಾಗಿದೆ.
ಆರೋಪಿ ಕಾರು ಚಾಲಕ ಕಾರಿನ ಮಾಲೀಕನೂ ಆಗಿರುವುದು ಬೆಳಕಿಗೆ ಬಂದಿದೆ. ಆತನೂ ಸುರತ್ಕಲ್ ಆಸುಪಾಸಿನ ನಿವಾಸಿಯೇ ಆಗಿದ್ದಾನೆ.
ಎರಡು ಹಂತಗಳಲ್ಲಿ ನಡೆದಿದ್ದ ಸ್ಕೆಚ್
ಕೊಲೆಯಾಗಿರುವುದು ಮೊಹಮ್ಮದ್ ಫಾಜಿಲ್ ಆಗಿದ್ದರೂ ಕೊಲೆಯ ಮೂಲ ಟಾರ್ಗೆಟ್ ಮೊಬೈಲ್ ಅಂಗಡಿ ಮಾಲೀಕ ಮತ್ತು ಕೆಎಫ್‌ಡಿಯ ಸಕ್ರಿಯ ನಾಯಕನಾಗಿರು ಫಾರೂಕ್ ಎಂದು ಹೇಳಲಾಗುತ್ತಿದೆ. ಕೊಲೆಗೆ ಮಧ್ಯಾಹ್ನ ಮತ್ತು ಸಂಜೆ ಎರಡು ಹಂತಗಳಲ್ಲಿ ಸ್ಕೆಚ್ ನಡೆದಿದೆ. ಫಾರೂಕ್ ಮುಕ್ಕದ ತನ್ನ ಮನೆಯಿಂದ ಹೊರಟಾಗ ದುಷ್ಕರ್ಮಿಗಳು ಕಪ್ಪು ಕಾರಿನಲ್ಲಿ ಹಿಂಬಾಲಿಸಿದ್ದರು ಎನ್ನಲಾಗಿದೆ. ಇದರ ಬಗ್ಗೆ ಸಂಶಯಗೊಂಡ ಆತ ದಾರಿ ಬದಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಇದಾದ ಬಳಿಕ ಸಂಜೆ ಮತ್ತೊಂದು ಸುತ್ತಿನ ಪ್ಲ್ಯಾನ್ ನಡೆದಿದೆ. ಆಗಲೂ ಫಾರೂಕ್ ಸಿಗಲಿಲ್ಲ. ಫಾಝಿಲ್‌ನನ್ನು ಕೊಂದು ತಂಡ ಪರಾರಿಯಾಗಿದೆ. ಈ ನಡುವೆ, ಮಧ್ಯಾಹ್ನ ಕಪ್ಪುಕಾರಿನಲ್ಲಿ ಬಂದಿದ್ದು, ಸಂಜೆ ಬಿಳಿ ಕಾರಿನಲ್ಲಿ ಬಂದಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಎರಡೂ ಕಾರ್ಯಾಚರಣೆಗಳಲ್ಲಿ ಅಜಿತ್ ಒಬ್ಬನೇ ಚಾಲಕನಾಗಿದ್ದನೇ ಎನ್ನುವುದು ತಿಳಿದುಬಂದಿಲ್ಲ.
ಈಗ ಬಂದಿರುವ ಮಾಹಿತಿ ಪ್ರಕಾರ, ಇದೊಂದು ದ್ವೇಷದ ಕೊಲೆ ಎನ್ನುವುದು ಬಹುತೇಕ ಸಾಬೀತಾಗಿದೆ. ಇನ್ನೂ ನಾಲ್ವರು ಪೊಲೀಸ್ ಬಲೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಂದ ಪೂರ್ಣ ಮಾಹಿತಿ ಪಡೆದು ಬಂಧನವನ್ನು ಅಧಿಕೃತಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.
ಇದನ್ನೂ ಓದಿ| Mistaken Identity?| ಹಂತಕರ ಗುರಿ ಫಾಝಿಲ್ ಆಗಿರಲಿಲ್ಲ, ಟಾರ್ಗೆಟ್ ಇದ್ದಿದ್ದು ಕೆಎಫ್‌ಡಿ ಮುಖಂಡನ ಮೇಲೆ?