ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಬಿ.ಪುಟ್ಟಸ್ವಾಮಿ ಹಾಗೂ ಶಾಸಕ ಎನ್. ಮಹೇಶ್ ಅವರ ನಡುವೆ ಹೆಂಡತಿ ಜಗಳ ಶುರುವಾಗಿದೆ. ವಿಚ್ಛೇದನ ನೀಡಿದ್ದರೂ ನನ್ನ ಹೆಂಡತಿಯ ಮೂಲಕ ಸಾರ್ವಜನಿಕವಾಗಿ ನನ್ನನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಎನ್.ಮಹೇಶ್ ವಿರುದ್ಧ ಬಿ.ಪುಟ್ಟಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕೊಳ್ಳೇಗಾಲದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಪುಟ್ಟಸ್ವಾಮಿ ಶನಿವಾರ ಸಮಾವೇಶ ಏರ್ಪಡಿಸಿದ್ದರು. ಆದರೆ, ಸಮಾವೇಶದ ಸ್ಥಳಕ್ಕೆ ಪುಟ್ಟಸ್ವಾಮಿ ಅವರ ಮಾಜಿ ಪತ್ನಿ ಆಗಮಿಸಿ ಹೈಡ್ರಾಮಾ ನಡೆಸಿ, ನಿಂದನೆ ಮಾಡಿದ್ದಾರೆ. ಈ ಘಟನೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯವಾಗಿ ಹಿನ್ನಡೆ ಉಂಟುಮಾಡಲು ಪುಟ್ಟಸ್ವಾಮಿ ವಿರುದ್ಧ ಶಾಸಕ ಎನ್. ಮಹೇಶ್ ಅವರು ಷಡ್ಯಂತ್ರ ಹೂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುನೀತಾ ಪುಟ್ಟಸ್ವಾಮಿ ಅವರ ಮಾಜಿ ಪತ್ನಿಯಾಗಿದ್ದಾರೆ. ಇವರು ಸಮಾವೇಶ ಸ್ಥಳಕ್ಕೆ ಆಗಮಿಸಿ ಪುಟ್ಟಸ್ವಾಮಿ ಅವರನ್ನು ಬೈದು, ನಂತರ ಸಂತೇಮರಳ್ಳಿ ಐಬಿಯಲ್ಲಿ ಶಾಸಕ ಮಹೇಶ್ ಅವರನ್ನು ಭೇಟಿಯಾಗಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಪುಟ್ಟಸ್ವಾಮಿ ಅಭಿಮಾನಿಗಳು, ಸಂತೇಮರಹಳ್ಳಿ ಐಬಿ ಬಳಿ ತೆರಳಿ ಪ್ರತಿಭಟನೆ ನಡೆಸಿ, ಶಾಸಕ ಎನ್. ಮಹೇಶ್ ವಿರುದ್ಧ ಧಿಕ್ಕಾರ ಕೂಗಿದರು.
ಬಳಿಕ ಕೊಳ್ಳೇಗಾಲ ತಾಲೂಕಿನ ಸಂತೇಮರಹಳ್ಳಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಪುಟ್ಟಸ್ವಾಮಿ ಆಗಮಿಸಿ, ಮಾಜಿ ಪತ್ನಿ ಸುನೀತಾ ಅವರ ಕಾರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು, ನನಗೂ ನನ್ನ ಪತ್ನಿಗೂ ನ್ಯಾಯಾಲಯದಲ್ಲಿ ವಿಚ್ಛೇದನ ಆಗಿದೆ. ನನಗೆ ಅವಮಾನ ಮಾಡುವ ಉದ್ದೇಶದಿಂದ ಅವರನ್ನು ವೇದಿಕೆ ಬಳಿ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ | Amit Shah in Karavali : ಕ್ಯಾಪಿಟಲಿಸಂ, ಕಮ್ಯುನಿಸಂ ವಿರುದ್ಧ ಗೆದ್ದ ಕೋ-ಆಪರೇಟಿಸಂ; ಬೊಮ್ಮಾಯಿ ವ್ಯಾಖ್ಯಾನ
ನನಗೆ ಮೂರು ವರ್ಷದಿಂದ ಇದೇ ರೀತಿ ಅವಮಾನ ಮಾಡುತ್ತಿದ್ದಾರೆ. ಅವಳ ಜತೆ ಶಾಸಕರು ಕೊಠಡಿಯಲ್ಲಿ ಕುಳಿತು ಗುಪ್ತ ಚರ್ಚೆ ಮಾಡುವ ಅವಶ್ಯಕತೆ ಏನಿತ್ತು? ಎನ್.ಮಹೇಶ್ ನನಗೆ ತಂದೆ ಸಮಾನ. ಬುದ್ಧಿ ಹೇಳಿ ಕಳುಹಿಸಬಹುದಿತ್ತು. ಈ ಹಿಂದೆ ಬಿಜೆಪಿಗೆ ಹೆತ್ತ ತಾಯಿ ಲಾಡಿ ಬಿಚ್ಚುವ ಕೆಲಸ ಮಾಡುತ್ತಾರೆ ಎಂದು ಟೀಕಿಸುತ್ತಿದ್ದರು. ಆದರೆ ಈಗ ನೀವು ಅದೇ ಕೆಲಸ ಮಾಡಿದ್ದೀರಿ. ಇಂತಹ ನೀತಿಗೆಟ್ಟ ಲಜ್ಜೆಗೆಟ್ಟ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.
ಸಮಾವೇಶದಲ್ಲಿ ಜನಸ್ತೋಮ ನೋಡಿ ಶಾಸಕ ಮಹೇಶ್ ಹೆದರಿದ್ದಾರೆ. ನನ್ನನ್ನು ಈ ಹಿಂದೆಯೂ ವರ್ಗಾವಣೆ ಮಾಡಿಸಿದ್ದೀರಿ. ಈಗ ನನ್ನ ಮಾಜಿ ಪತ್ನಿಯ ಜತೆ ಮಾತನಾಡುವಂತದ್ದು ಏನಿತ್ತು? ನಿನಗೆ ತಾಕತ್ತಿದ್ದರೆ ನನ್ನ ವಿರುದ್ಧ ಹೋರಾಟ ಮಾಡಿ? ನಿಮಗೆ ಎಲ್ಲವನ್ನೂ ಟ್ಯೂನ್ ಅಪ್ ಮಾಡುವುದು ಗೊತ್ತಿದೆ. ಇಂತಹ ಹೇಸಿಗೆ ಕೆಲಸ ಮಾಡುವುದು ಬೇಡ ಎಂದು ಕಿಡಿ ಕಾರಿದರು.
ನಾನು ಆ ಮಹಿಳೆಯನ್ನು ಭೇಟಿ ಮಾಡಿಲ್ಲ
ಕೊಳ್ಳೇಗಾಲ ಟಿಕೆಟ್ ಆಕಾಂಕ್ಷಿ ಪುಟ್ಟಸ್ವಾಮಿ ವಿರುದ್ಧ ಷಡ್ಯಂತ್ರ ಆರೋಪಕ್ಕೆ ಶಾಸಕ ಎನ್.ಮಹೇಶ್ ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪ ಹಸಿ ಸುಳ್ಳಾಗಿದೆ. ಇಂದು ಬಿಜೆಪಿ ಶಕ್ತಿ ಮಂಡಲದ ಸಭೆ ಇತ್ತು. ಅದಕ್ಕಾಗಿ ಸಂತೆ ಮರಳ್ಳಿಗೆ ಆಗಮಿಸಿದ್ದೆ. ಇಲ್ಲಿ ಏನು ನಡೆಯುತ್ತಿದೆ ಅದಕ್ಕೂ ನನಗೂ ಸಂಭಂದವಿಲ್ಲ. ಸುಮ್ಮನೆ ಅನಗತ್ಯವಾಗಿ ಕನೆಕ್ಟ್ ಮಾಡ್ತಿದ್ದಾರೆ. ಇದು ರಾಜಕೀಯ ಷಡ್ಯಂತ್ರ. ನಾನು ಆ ಮಹಿಳೆಯನ್ನು ಭೇಟಿ ಮಾಡಿಲ್ಲ. ಸಭೆ ಮುಗಿದ ನಂತರ ಆ ಮಹಿಳೆಯೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.
ಆ ಮಹಿಳೆ ವೇದಿಕೆ ಬಳಿ ಗಲಾಟೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಪಿಎಗೆ ಫೋನ್ ಮಾಡಿ ನನ್ನ ಜತೆ ಮಾತನಾಡಬೇಕೆಂದು ಹೇಳಿದರು. ನಾವು ಬರಲು ಹೇಳಿದ್ದೆವು. ಈ ಷಡ್ಯಂತ್ರದ ಭಾಗ ನಾವಲ್ಲ. ಈ ಬಗ್ಗೆ ಆ ಮಹಿಳೆಯನ್ನೇ ವಿಚಾರಿಸಿ. ನಾನು ಯಾರನ್ನು ಮುಂದೆ ಇಟ್ಟುಕೊಂಡು ಈವರೆಗೂ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಹೇಳಿದ್ದಾರೆ.